ಮೈಸೂರು : ಸಂಚಲನ ಮೈಸೂರು ಪ್ರಸ್ತುತಪಡಿಸುವ ಬಿ.ಎಂ.ಶ್ರೀ ರಚಿಸಿ ಡಾ.ಪಿ.ವಿ.ನಾರಾಯಣ ಹೊಸ ಕನ್ನಡಕ್ಕೆ ಅನುವಾದಿಸಿದ ‘ಅಶ್ವತ್ಥಾಮನ್’ ನಾಟಕದ ಪ್ರದರ್ಶನವು ದಿನಾಂಕ 05-08-2023 ರಂದು ಮೈಸೂರಿನ ರಂಗಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ನಡೆಯಲಿದೆ.
ಶಶಿಧರ ಅಡಪರ ರಂಗವಿನ್ಯಾಸವಿರುವ ಈ ನಾಟಕದ ರಂಗ ನಿರ್ವಹಣೆ ಮಹೇಶ್.ಸಿ ಇವರದ್ದು. ಹೆಚ್.ಕೆ.ವಿಶ್ವನಾಥ ರಂಗ ಪರಿಕರಗಳನ್ನು ಸಜ್ಜು ಗೊಳಿಸಿದ್ದು, ಕೃಷ್ಣ ಚೈತನ್ಯರ ಸಹಕಾರದೊಂದಿಗೆ ಧನಂಜಯ ಆರ್.ಸಿ ಈ ನಾಟಕಕ್ಕೆ ಸಂಗೀತ ನೀಡಲಿದ್ದಾರೆ. ಮಾನಸ ಮುಸ್ತಫಾ ವಸ್ತ್ರ ವಿನ್ಯಾಸ ಮಾಡಿದ್ದು, ಪ್ರತಿಭಾ ನಂದಕುಮಾರ ಪ್ರಸಾಧನ, ಮಧು ಮಳವಳ್ಳಿಯವರ ಪರಿಕಲ್ಪನೆ,ವಿನ್ಯಾಸ,ನಿರ್ದೇಶನ ಹಾಗೂ ಬೆಳಕಿನ ವಿನ್ಯಾಸವಿರುವ ಈ ನಾಟಕಕ್ಕೆ ಉಮಾಶ್ರೀ ಮಧುಮಳವಳ್ಳಿಯವರು ಸಹ ನಿರ್ದೇಶಕರಾಗಿ ಸಹಕರಿಸಿದ್ದಾರೆ.
‘ಅಶ್ವತ್ಥಾಮನ್’
ಗ್ರೀಕ್ ನ ಬರಹಗಾರ ಸಾಫೋಕ್ಲೀಸ್‍ನ ‘ಏಜಾಕ್ಸ್’ ಅಥವಾ ‘ಅಯಾಸ್’ ನಾಟಕದ ಕನ್ನಡ ರೂಪಾಂತರವೇ ‘ಅಶ್ವತ್ಥಾಮನ್’ ನಾಟಕ. ಪಾತ್ರಗಳು ಹಾಗೂ ಸನ್ನಿವೇಶಗಳ ಹೊರ ಆವರಣದ ಮಟ್ಟಿಗೆ ಇದು ನಿಜ. ಆದರೆ ನಾಟಕದ ಸತ್ತ್ವ ಅನುವಾದವೇ. ಪೌರುಷ-ಸ್ವಾಭಿಮಾನಗಳು ಒಂದು ಮಿತಿಯಲ್ಲಿದ್ದರೆ ಅವುಗಳ ಬಗ್ಗೆ ನಮ್ಮ ಸಂಪ್ರದಾಯ ಗೌರವಿಸುತ್ತದೆಯೇ ಹೊರತು, ಅವು ದೈವವನ್ನೇ ಪ್ರಶ್ನಿಸುವ ಮಟ್ಟಕ್ಕೆ ಹೋದಾಗ ಅಲ್ಲ; ದೈವವನ್ನು ಮೀರಿ, ಅದರ ಇರಾದೆಗೆ ಭಿನ್ನವಾಗಿ, ಪೌರುಷ ಏನನ್ನೋ ಸಾಧಿಸಲು ಕೈಹಾಕಿದಾಗ ದುರಂತ ಕಟ್ಟಿಟ್ಟದ್ದು; ವಿಧಿನಿಯಮ ಅನುಲ್ಲಂಘನೀಯ, ದುರ್ಭೇದ್ಯ – ಎಂಬ ಸಾಫೋಕ್ಲೀಸ್‍ನ ಮನೋದೃಷ್ಟಿ ಇಡಿಯಾಗಿ ‘ಅಶ್ವತ್ಥಾಮನ್’ನಲ್ಲಿಯೂ ಮೂಡಿಬಂದಿದೆ. ಈ ದೃಷ್ಟಿಯಿಂದ ಅನುವಾದಕ್ಕೆ ಎಷ್ಟು ಬೇಕೋ ಅಷ್ಟನ್ನು ಶ್ರೀಯವರು ಮೂಲಕತೆಯ ಘಟನಾವಿನ್ಯಾಸದಲ್ಲಿಯೂ ವ್ಯತ್ಯಾಸಮಾಡಿಕೊಂಡಿದ್ದಾರೆ. ಒಂದು ದೃಷ್ಟಿಯಿಂದ ಅಶ್ವತ್ಥಾಮನ ಕತೆ ‘ಏಜಾಕ್ಸ್’ ನಾಟಕದ ವಿನ್ಯಾಸಕ್ಕೆ ರೂಪಾಂತರಗೊಂಡಿದೆ ಎನ್ನಬಹುದು. ಶ್ರೀಯವರಿಗೆ ಬೇಕಾಗಿದ್ದದ್ದು ‘ಏಜಾಕ್ಸ್’ ನಾಟಕ ಕನ್ನಡಕ್ಕೆ ಬರುವುದು ಮತ್ತು ಇಲ್ಲಿನ ದೇಶೀ ಉಡುಪಿನಲ್ಲಿ ಬರುವುದು. ಹಾಗಾಗಿ ಆ ನಾಟಕಕ್ಕೆ ಅನುಗುಣವಾಗಿ ವಸ್ತುವಿನ್ಯಾಸದೊಡನೆ, ಪಾತ್ರಗಳ ಕಲ್ಪನೆಯೂ ರೂಪಾಂತರಗೊಂಡಿದೆ. ಕೃಷ್ಣ, ಏಕಲವ್ಯ, ಭಾರ್ಗವಿ – ಇಂತಹ ಪಾತ್ರಗಳು ‘ಅಶ್ವತ್ಥಾಮನ್’ನಲ್ಲಿ ರೂಪುಗೊಂಡಿರುವ ರೀತಿಯನ್ನು ಗಮನಿಸಬಹುದು.
ಏಜಾಕ್ಸ್ ನಾಟಕದ ವಸ್ತುವಿಗೆ ಸಂವಾದಿಯಾದ ವಸ್ತುವನ್ನು ಮಹಾಭಾರತದ ಸೌಪ್ತಿಕ ಪರ್ವದ ಅಶ್ವತ್ಥಾಮ ಪ್ರಸಂಗದಲ್ಲಿ ಗುರುತಿಸಿದ್ದು, ಏಜಾಕ್ಸ್ ನ ಮನೋಭಾವ ಅಶ್ವತ್ಥಾಮನ ಮನೋಭಾವದಲ್ಲಿ ಪಡಿಯಚ್ಚಿನಂತೆ ಕಾಣಿಸಿದ್ದು. ಏಜಾಕ್ಸ್ ನಾಟಕದಲ್ಲಿಯಂತೆ ಅಶ್ವತ್ಥಾಮನ ಪ್ರಸಂಗದಲ್ಲಿ ದೈವ-ಮಾನುಷ ಸಂಘರ್ಷವನ್ನು ರೂಪಿಸಬಹುದಾದ ಸಾಧ್ಯತೆಯನ್ನು ಗಮನಿಸಿದ್ದು ಹಾಗೂ ಶ್ರೀಯವರು ಈ ವಿಷಯದಲ್ಲಿ ಗ್ರೀಕ್ ಹಾಗೂ ಭಾರತೀಯ ನಂಬಿಕೆಗಳಲ್ಲಿನ ಸಾಮ್ಯವನ್ನು ಕಂಡದ್ದು.
ಮಧುಮಳವಳ್ಳಿ
ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಗಸನಪುರದವರು. ಐ.ಟಿ.ಐ ಮುಗಿಸಿ ಆಟೋಮೋಟಿವ್ ಅಕ್ಸಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವಾಗಲೇ ರಂಗಭೂಮಿಯ ಗೀಳು ಹಿಡಿಸಿಕೊಂಡವರು. ಇವರು 16 ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿದ್ದಾರೆ. ಅಲಾಪ, ತಸ್ಕರ, ಡಿಸಂಬರ್ ಕಾಲದ ದಂಗೆ, ಕಾಯಕದ ಸತ್ಯಕ್ಕ, ಎಲ್ಲಿ ಹೋದವು ಹಕ್ಕಿಗಳು, ಮಧ್ಯಮ ವಾಯ್ಯೊಗ, ಅಜ್ಜಿ ಕಥೆ ಹೀಗೆ 20ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.
ಮಧು ಮಳವಳ್ಳಿಯವರು ರಂಗಬಂಡಿ ಮಳವಳ್ಳಿ ಸಂಸ್ಥೆಯನ್ನು ಹುಟ್ಟು ಹಾಕಿ ಕಳೆದ 6 ವರ್ಷಗಳಿಂದ ಮಳವಳ್ಳಿ ಭಾಗದ ಸರ್ಕಾರಿ ಶಾಲೆಯ 120 ರಿಂದ 150 ಮಕ್ಕಳಿಗೆ ಉಚಿತ ‘ಮಕ್ಕಳ ಹಬ್ಬ’ ಎಂಬ ಬೇಸಿಗೆ ಶಿಬಿರಗಳನ್ನು ಮಾಡುತ್ತ ಬಂದಿದ್ದಾರೆ. ಯುವ ಜನತೆಗೆ ಪ್ರತಿವರ್ಷ ಒಂದು ತಿಂಗಳ ರಂಗತರಬೇತಿ ಶಿಬಿರವನ್ನು ಮಾಡಿ ಶಿಬಿರದ ಮಕ್ಕಳಿಗೆ ಪ್ರಯೋಗಗಳನ್ನು ನಿರ್ದೇಶನ ಮಾಡಿ ರಾಜ್ಯದ ಹಲವಾರು ಕಡೆ ಪ್ರದರ್ಶನವನ್ನು ಮಾಡಿಸಿದ್ದಾರೆ. ಧಾರವಾಡ ರಂಗಾಯಣದಲ್ಲಿ ಬೆಳಕಿನ ಮತ್ತು ಧ್ವನಿ ವಿಭಾಗದ ತಂತ್ರಜ್ಞರಾಗಿ ಅನುಭವ ಹೊಂದಿದ್ದಾರೆ.