ಅಡ್ಯನಡ್ಕ : ಜನತಾ ಹಿರಿಯ ಪ್ರಾಥಮಿಕ ಶಾಲೆ ಅಡ್ಯನಡ್ಕದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕದ ವತಿಯಿಂದ ಜರುಗಿದ ‘ಸಾಹಿತ್ಯ ಸಂಭ್ರಮ – 2’ ಮಕ್ಕಳ ಶಿಬಿರದ ಉದ್ಘಾಟನೆಯು ದಿನಾಂಕ 22-07-2023ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬಂಟ್ಟಾಳ ತಾಲೂಕು ಘಟಕದ ಗೌರವಾಧ್ಯಕ್ಷರಾದ ಶ್ರೀ ಎಸ್. ಬಾಲಕೃಷ್ಣ ಕಾರಂತ ಎರುಂಬು ಇವರು ಮಾತನಾಡುತ್ತಾ “ಕೇವಲ ಪಠ್ಯಗಳು ಮಕ್ಕಳನ್ನು ಪರಿಪೂರ್ಣರನ್ನಾಗಿ ಮಾಡಲಾರವು. ಹೊಡೆತದಿಂದ ಎಚ್ಚರಿಸುವ ಬದಲು ಸಾಹಿತ್ಯದ ಮೂಲಕ ಮಕ್ಕಳನ್ನು ಜಾಗೃತಗೊಳಿಸಬೇಕು. ಸಾಹಿತ್ಯವು ಜಡತ್ವವನ್ನು ದೂರ ಮಾಡಬಲ್ಲದು” ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಉದ್ಘಾಟನೆಯನ್ನು ಶ್ರೀ ಭಾಸ್ಕರ ಅಡ್ವಳ ನೆರವೇರಿಸಿದರು.
ಮಕ್ಕಳಿಗೆ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಚುಟುಕು ಸಾಹಿತ್ಯ ರಚನೆಯ ತರಬೇತಿಯನ್ನು ಶ್ರೀ ಜಯಾನಂದ ಪೆರಾಜೆ ನಡೆಸಿಕೊಟ್ಟರು. ಭಾಸ್ಕರ ಅಡ್ವಳರು ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿದರು. ಬಂಟ್ಟಾಳ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಕಲಾ ಕಾರಂತ್ ಉಪಸ್ಥಿತರಿದ್ದರು. ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದರು.
ಸರ್ಕಾರಿ ಪ್ರೌಢ ಶಾಲೆ ಬೊಳಂತಿ ಮೊಗರಿನ ಶಿಕ್ಷಕರು ಮತ್ತು ಮಕ್ಕಳ ಸಾಹಿತ್ಯ ಪರಿಷತ್ತಿನ ವಿಟ್ಲ ವಲಯದ ಪ್ರತಿನಿಧಿ ಶ್ರೀ ವಡಗೇರಿ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜನತಾ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹರಿಣಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ಜನತಾ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಶಾಂತ್ ವಂದನಾರ್ಪಣೆಗೈದರು.