ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಕಾಸರಗೋಡಿನ ಕಛೇರಿಯಲ್ಲಿ ಸುಗಮ-ಭಕ್ತಿ-ಭಾವ-ಜನಪದ ಗೀತೆಗಳ ರಾಗ ಸಂಯೋಜನೆ, ಪ್ರಚಾರ, ಕವಿಗಳ ಮತ್ತು ಗಾಯಕರ ಪ್ರೋತ್ಸಾಹಕ್ಕಾಗಿ ಪ್ರತ್ಯೇಕ ಘಟಕ ರೂಪೀಕರಿಸುವುದರ ಪೂರ್ವಭಾವಿ ಸಭೆಯು ದಿನಾಂಕ 27-07-2023ರಂದು ನಡೆಯಿತು. ಈ ಸಭೆಯನ್ನು ಉದ್ಘಾಟಿಸಿದ ಹಿರಿಯ ಸಾಹಿತಿ, ಕವಿ ಶ್ರೀಕೃಷ್ಣಯ್ಯ ಅನಂತಪುರ ಅವರು ಮಾತನಾಡುತ್ತಾ “ಕಾಸರಗೋಡಿನಲ್ಲಿ ಸಮರ್ಥ ಕವಿಗಳು ಅನೇಕರಿದ್ದರೂ ಅಖಿಲ ಕರ್ನಾಟಕ ಮಟ್ಟದಲ್ಲಿ ಅವರನ್ನು ಗುರುತಿಸುವ, ಅವರ ಕೃತಿಗಳನ್ನು ಜನರಿಗೆ ತಲುಪಿಸುವ ಕೆಲಸ ಆಗುತ್ತಿಲ್ಲ. ಕಾಸರಗೋಡಿನ ಕನ್ನಡಿಗರ ಸಾಹಿತ್ಯವನ್ನು ಅನಾವರಣಗೊಳಿಸುವುದರ ಜತೆಗೆ ರಾಗ ಸಂಯೋಜಿಸಿ ಹಾಡಲು ಇದೇ ಮೊದಲ ಬಾರಿಗೆ ಸಮಿತಿಯ ರೂಪೀಕರಣ ಆಗುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂಬುದಾಗಿ ಅವರು ಸಂತಸವನ್ನು ವ್ಯಕ್ತ ಪಡಿಸಿದರು.
ರಂಗ ಚಿನ್ನಾರಿಯ ನಿರ್ದೇಶಕ, ಸಿನಿಮಾ ನಟ, ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ “ಗಾಯಕರಿಗೆ ಮತ್ತು ಹಿನ್ನೆಲೆ ಸಂಗೀತಕ್ಕೆ ಪ್ರಾಮುಖ್ಯತೆ ಕೊಡುವ ಮೂಲಕ ಕಾಸರಗೋಡಿನಲ್ಲಿ ಪ್ರತಿಭಾವಂತರನ್ನು ಗುರುತಿಸಿ ವೇದಿಕೆ ಒದಗಿಸುವುದೇ ಈ ನೂತನ ಘಟಕದ ಉದ್ದೇಶ” ಎಂದು ಹೇಳಿದರು.
ಸಾಂಸ್ಕೃತಿಕ ಮತ್ತು ಸಾಮಾಜಿಕ ಸ೦ಸ್ಥೆ ರಂಗ ಚಿನ್ನಾರಿಯ ಹೊಸ ಘಟಕಕ್ಕೆ ಈ ಮೊದಲು ‘ನಾರಿ ಚಿನ್ನಾರಿ’ ಎಂಬ ಹೆಸರನ್ನು ನಿರ್ದೇಶಿಸಿದ ಲೇಖಕಿ ವಿಜಯಲಕ್ಷ್ಮಿ ಶಾನುಭೋಗ್ ‘ಸ್ವರ ಚಿನ್ನಾರಿ’ ಎಂಬ ಹೆಸರನ್ನೂ ಸೂಚಿಸಿದರು. ಚರ್ಚಿಸಿ ಪ್ರಸ್ತುತ ಹೆಸರನ್ನು ಅಂಗೀಕರಿಸಲಾಯಿತು. ಹಿರಿಯ ಸಂಗೀತ ತಜ್ಞ ಕಲ್ಮಾಡಿ ಸದಾಶಿವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಘಟಂ ವಿದ್ವಾನ್ ಈಶ್ವರ್ ಭಟ್ ಶುಭ ಹಾರೈಸಿದರು. ಸಭೆಯಲ್ಲಿ ನೂತನ ಸಮಿತಿಯನ್ನು ರೂಪೀಕರಿಸಲಾಯಿತು.
ಗೌರವಾಧ್ಯಕ್ಷರಾಗಿ ಶ್ರೀಕೃಷ್ಣಯ್ಯ ಅನಂತಪುರ, ಕಾರ್ಯಾಧ್ಯಕ್ಷರಾಗಿ ಪುರುಷೋತ್ತಮ್ ಕೊಪ್ಪಲ್, ಉಪಾಧ್ಯಕ್ಷರಾಗಿ ಜಯಶ್ರೀ ಅನಂತಪುರ, ಶ್ರೀಧರ್ ರೈ, ಬಬಿತಾ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ ಪೆರ್ಲ, ಜತೆ ಕಾರ್ಯದರ್ಶಿಗಳಾಗಿ ಪ್ರಭಾಕರ್ ಮಲ್ಲ, ರತ್ನಾಕರ್ ಒಡಂಗಲ್, ಪ್ರತಿಜ್ಞಾ ರಂಜಿತ್, ಕೋಶಾಧಿಕಾರಿಯಾಗಿ ಸತ್ಯನಾರಾಯಣ ಐಲ, ಗೌರವ ಸಲಹೆಗಾರರಾಗಿ ಕಲ್ಮಾಡಿ ಸದಾಶಿವ ಆಚಾರ್ಯ, ಈಶ್ವರ ಭಟ್, ರಾಧಾ ಮುರಳೀಧರ್ ಅವರು ಆಯ್ಕೆಯಾದರು. ವಿಜಯಲಕ್ಷ್ಮಿ ಶಾನುಭೋಗ್, ಸರ್ವಮಂಗಳ, ಉಷಾ ಈಶ್ವರ್ ಭಟ್, ಅಕ್ಷತಾ ಪ್ರಕಾಶ್ ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳಿಗೆ ಇನ್ನಷ್ಟು ಸದಸ್ಯರನ್ನು ಹೊಸ ಘಟಕಕ್ಕೆ ಸೇರಿಸುವ ಹೊಣೆಗಾರಿಕೆಯನ್ನು ನೀಡಲಾಯಿತು.
ಸೆಪ್ಟೆಂಬರ್ 9ರಂದು ‘ಸ್ವರ ಚಿನ್ನಾರಿ’ಯ ಉದ್ಘಾಟನೆಯನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಯಿತು. ಬಬಿತಾ ರವಿಚಂದ್ರ ಪ್ರಾರ್ಥನೆ ಹಾಡಿದರು. ರಂಗಚಿನ್ನಾರಿಯ ಅಂಗ ಸಂಸ್ಥೆ ನಾರಿ ಚಿನ್ನಾರಿಯ ಪ್ರಧಾನ ಕಾರ್ಯದರ್ಶಿ ದಿವ್ಯಾಗಟ್ಟಿ ಪರಕ್ಕಿಲ ಸ್ಥಾಗತಿಸಿ, ನೂತನ ಸಮಿತಿ ಸ್ವರಚಿನ್ನಾರಿಯ ಪ್ರಧಾನ ಕಾರ್ಯದರ್ಶಿ ಕಿಶೋರ್ ಪೆರ್ಲ ವಂದನಾರ್ಪಣೆಗೈದರು.