ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ ಪರ್ಬ’ 5ನೆಯ ಸರಣಿ ಕಾರ್ಯಕ್ರಮ’ವು ಶ್ರೀ ಕ್ಷೇತ್ರ ಶರವು ದೇವಾಲಯದ ಸಭಾಂಗಣದಲ್ಲಿ ದಿನಾಂಕ 29-07-2023ರಂದು ಜರಗಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಶ್ರೀ ಕ್ಷೇತ್ರ ಶರವು ದೇವಾಲಯದ ಶಿಲೆ ಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮಾತನಾಡುತ್ತಾ “ತುಳು ಭಾಷೆಯನ್ನು ನಾವು ತುಳುವರೇ ಮರೆತರೆ ಭಾಷಾ ಬೆಳವಣಿಗೆ ನಡೆಯದು. ಬೇರೆ ಬೇರೆ ಭಾಷೆಗಳನ್ನು ಕಲಿತರೂ ಮಾತೃಭಾಷೆಯನ್ನು ನಮ್ಮ ಮುಂದಿನ ಪೀಳಿಗೆಗೆ ನಾವೇ ತಲಪಿಸಬೇಕು. ಹಾಗಾದಾಗ ಮಾತ್ರ ಭಾಷೆಗೊಂದು ಸ್ಥಿರತೆ ಬರುತ್ತದೆ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ವಾಸಿಸುವಾಗಲೂ ತುಳುವನ್ನು ಪ್ರೀತಿಯಿಂದ ತೌಳವ ಮಂದಿಗಳೂ ಆಡುವಂತಾಗುತ್ತದೆ. ತುಳುಕೂಟ ಬಂಗಾರ್ ಪರ್ಬದ ಸಂಭ್ರಮಾಚರಣೆಯನ್ನು ನಡೆಸುತ್ತಿರುವಈ ಸಂದರ್ಭದಲ್ಲಿ ಅದಕ್ಕೆ ಬೇಕಾಗುವ ಜನ ಜಾಗೃತಿಯನ್ನು ಮತ್ತು ತುಳು ಕೃಷಿಯನ್ನು ಮಾಡುತ್ತಾ ಬರುತ್ತಿದೆ. ಶ್ರೀಕ್ಷೇತ್ರದಲ್ಲೂ ತುಳುವಿಗೆ ಸಂಬಂಧಪಟ್ಟಂತೆ ಅನೇಕ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿದ್ದೇವೆ. ಎಲ್ಲರೂ ಒಟ್ಟಾಗಿ ತುಳುತೇರನ್ನು ಎಳೆಯೋಣ.” ಎ೦ದು ಹೇಳಿದರು.
ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಬ್ಯಾಂಕಿನ ಸಹಕಾರ ರತ್ನ ಬಿರುದಾಂಕಿತ ಶ್ರೀ ಚಿತ್ರರಂಜನ್ ಬೋಳಾರ ಇವರು “ತುಳು ಕಾರ್ಯಕ್ರಮ ಮತ್ತು ಸಂಘಟನೆಯ ಕಾರ್ಯಗಳಿಗೆ ನಮ್ಮ ಬ್ಯಾಂಕ್ ಪೂರ್ಣ ಸಹಕಾರ ನೀಡುತ್ತದೆ. ತುಳು ಕೂಟದ ತುಳು ಸರಣಿ ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತೇನೆ.” ಎಂದರು.
ಅಧ್ಯಕ್ಷ ದಾಮೋದರ ನಿಸರ್ಗರು ತುಳು ಕೂಟದ ಧ್ಯೇಯ್ಯೋದ್ದೇಶಗಳ ಬಗ್ಗೆ ಪ್ರಸ್ತಾಪಿಸುತ್ತಾ ಸರ್ವ ತುಳುವರ ಸಹಕಾರವನ್ನು ಕೋರಿದರು.
ಹಿರಿಯ ನ್ಯಾಯವಾದಿಗಳಾದ ಕೆ. ಮಹಾಬಲ ಶೆಟ್ಟಿಯವರು ‘ಹರಿಕಥೆಯಲ್ಲಿ ತುಳು ಸಾಹಿತ್ಯ’ ಎಂಬ ವಿಷಯದ ಬಗ್ಗೆ ಉಪನ್ಯಾಸವಿತ್ತರು. ಯುಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಪ್ರೋ.ಭಾಸ್ಕರ ರೈ ಕುಕ್ಕುವಳ್ಳಿಯವರು ‘ಯುಕ್ಷಗಾನದಲ್ಲಿ ತುಳು ಪ್ರಸಂಗ ಹಾಗೂ ತುಳು ಭಾಷೆ’ಯ ಬಗ್ಗೆ ವಿಸ್ತಾರವಾಗಿ ವಿವರಿಸಿದರು.
ಬಳಿಕ ಪುಷ್ಕಳ ಕುಮಾರ್ ತೋನ್ಸೆಯವರಿಂದ ‘ಸೀತೆನ ಮದ್ಮೆ’ ಎಂಬ ತುಳುಹರಿಕಥೆ ನಡೆಯಿತು. ಶ್ರೀ ಅಶೋಕ್ ಬೋಳೂರು, ಶ್ರೀ ಶಿವಪ್ರಸಾದ್ ಪ್ರಭು, ಶ್ರೀ ವಿಘ್ನೇಶ್ ಶೆಟ್ಟಿ ಬೋಳೂರು, ಶ್ರೀ ಧೀರಜ್ ಆಚಾರ್ಯ. ಶ್ರೀ ದಯಾನಂದ ಜಿ. ಕತ್ತಲ್ಸಾರ್, ಶ್ರೀ ಸದಾಶಿವ ಆಳ್ವ ತಲಪಾಡಿ ಮತ್ತು ಶ್ರೀ ಪುಷ್ಪರಾಜ ಕುಕ್ಕಾಜೆಯವರ ತಂಡದಿಂದ ‘ಕಾರ್ನಿಕೊದ ಕೊರಗಜ್ಜೆ’ ಎಂಬ ತುಳು ತಾಳಮದ್ದಲೆ ನಡೆಯಿತು.
ಗೋಪಾಲಕೃಷ್ಣ ಪಿ, ರಮೇಶ ಕುಲಾಲ್ ಬಾಯಾರು, ದಿನೇಶ್ ಕುಂಪಲ, ಡಾ. ರಾಕೇಶ್ ಕುಮಾರ್ ಬಿ. ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಹಾಗೂ ಹೇಮಾ ನಿಸರ್ಗ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷರಾದ ಲ. ಜೆ.ವಿ.ಶೆಟ್ಟಿ ಸ್ವಾಗತಿಸಿ, ಖಚಾಂಚಿ ಚಂದ್ರಶೇಖರ ಸುವರ್ಣರು ಧನ್ಯವಾದವಿತ್ತರು.