ಕಾಸರಗೋಡು : ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿದ 14ನೇ ಸಂಗೀತ ಕಛೇರಿ ‘ಮಂಜುನಾದ’ವು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಪ್ರತಿಷ್ಠಾನದ ಸಹಯೋಗದಲ್ಲಿ ದಿನಾಂಕ 29-07-2023ರಂದು ನಡೆಯಿತು.
ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಗಡಿನಾಡು ಕಾಸರಗೋಡಿನಲ್ಲಿ ಚಾರಿತ್ರಿಕ ಕಾರ್ಯಕ್ರಮ ಆಯೋಜಿಸಿ ಸಿರಿಬಾಗಿಲು ಪ್ರತಿಷ್ಠಾನದ ಯೋಜನೆ ಯೋಚನೆ ಅದ್ವಿತೀಯ. ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾಯಕ ಪ್ರತಿಷ್ಠಾನ ನಡೆಸುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಕೃತಿಗಳನ್ನು ಆಧಾರಿಸಿ ಮಣಿಕೃಷ್ಣ ಸ್ವಾಮಿ ಅಕಾಡಮಿಯು ಇಂತಹ ಅಪೂರ್ವವಾದ ಕೊಡುಗೆ ಸಮಾಜಕ್ಕೆ ನೀಡುತ್ತಿದೆ” ಎಂದರು.
ಮಣಿ ಕೃಷ್ಣಸ್ವಾಮಿ ಅಕಾಡಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಪೇಜಾವರ ಮಾತನಾಡಿ, “ಹಲವು ಕ್ಷೇತ್ರದಲ್ಲಿ ಸಂಗೀತ ಕಾರ್ಯಾಗಾರ ನಡೆಸಿದ್ದೇವೆ. ಯಕ್ಷಗಾನ ಕ್ಷೇತ್ರದ ಪ್ರಧಾನ ಕೇಂದ್ರವಾಗಿರುವ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಇದೇ ಪ್ರಥಮ” ಎಂದರು.
ಧಾರ್ಮಿಕ ಮುಂದಾಳು ವೆಂಕಟ್ರಮಣ ಹೊಳ್ಳ ಕಾಸರಗೋಡು, ನಿವೃತ್ತ ಪ್ರಾಧ್ಯಾಪಕ ಪ್ರೊ. ಶ್ರೀನಾಥ್, ಮೋಹನದಾಸ್ ಶೆಟ್ಟಿ ಸಿರಿಬಾಗಿಲು, ಸಂಗೀತ ವಿದುಷಿ ರಾಧಾ ಮುರಳೀಧರನ್, ಲಕ್ಷ್ಮೀ ನಾರಾಯಣ ಕಾವುಮಠ ಉಪಸ್ಥಿತರಿದ್ದರು. ಸಿರಿಬಾಗಿಲು ರಾಮಕೃಷ್ಣ ಮಯ್ಯ ಸ್ವಾಗತಿಸಿದರು.
ಬಳಿಕ ಶ್ರೇಯಾ ಕೊಳತ್ತಾಯ ಸುರತ್ಕಲ್, ಉಷಾ ರಾಮಕೃಷ್ಣ ಭಟ್ ಮಣಿಪಾಲ, ಶರಣ್ಯಾ ಕೆ.ಎನ್. ಸುರತ್ಕಲ್, ಸುಮೇಧಾ ಕೆ.ಎನ್. ಸುರತ್ಕಲ್, ಮೇಧಾ ಉಡುಪ ಮಂಗಳೂರು ಇವರಿಂದ ಮಂಜುನಾದ ಸಂಗೀತ ಕಛೇರಿ ನಡೆಯಿತು. ವಯಲಿನ್ ನಲ್ಲಿ ತನ್ಮಯೀ ಉಪ್ಪಂಗಳ ಪುತ್ತೂರು, ಮೃದಂಗದಲ್ಲಿ ಕೌಶಿಕ್ ರಾಮಕೃಷ್ಣನ್ ಕಾಸರಗೋಡು ಸಹಕರಿಸಿದರು.