ದಿನಾಂಕ 10-07-2023ರಂದು ಒಂದು ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಹ ಅವಕಾಶ ನನಗೆ ಒದಗಿ ಬಂತು. ಇದು ತುಳುಲಿಪಿಯ ಪುನರುಜ್ಜೀವನದ ಕಾರ್ಯದಲ್ಲಿ ಐತಿಹಾಸಿಕ ಘಟನೆ ಎಂದರೆ ತಪ್ಪಾಗಲಾರದು ಎಂದು ಭಾವಿಸುತ್ತೇನೆ. ಯಾಕೆಂದರೆ ನಿನ್ನೆ ತುಳುಲಿಪಿಯ ಪ್ರಪ್ರಥಮ ಭಗವದ್ಗೀತೆ ಪುಸ್ತಕದ ಬಿಡುಗಡೆ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ ಸಮ್ಮುಖದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠದಲ್ಲಿ ನಡೆಯಿತು.
ಇದರ ಲೇಖಕರು ವಿದುಷಿ ಶ್ರೀಮತಿ ಅಪರ್ಣಾ ಕೊಡಂಕಿರಿಯವರು. ಇವರು ಮೂಲತಃ ನೃತ್ಯ ವಿದ್ವಾಂಸರಾದರೂ ಸಹ ತಮಗೆ ತುಳು ಭಾಷೆಯ ಮೇಲಿರುವ ಅಕ್ಕರೆಯನ್ನು, ಗ್ರಾಂಥಿಕವಾಗಿ ತುಳುನಾಡಿನ ಸಮಸ್ತ ಜನರಿಗೂ ಭಗವದ್ಗೀತೆ ಅನುವಾದದ ಮೂಲಕ ಸಮರ್ಪಿಸಿದರು. ಇವರ ಅನುಜ ಮುಕುಂದ ಉಂಗ್ರುಪುಳಿತ್ತಾಯ ಅವರು ಉಡುಪಿಯಲ್ಲಿ ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಮಾಡುವಲ್ಲಿ ತುಳು ಲಿಪಿಯ ಪರಿಚಯವಾಯಿತು. ತಮ್ಮನಿಂದ ಕಲಿತ ಲಿಪಿಯನ್ನು ಹವ್ಯಾಸಕ್ಕಾಗಿ ಅಭ್ಯಾಸ ಮಾಡುತ್ತಿರುವಾಗ ಬಂದಂತಹ ಆಲೋಚನೆಯೇ ಈ ಪುಸ್ತಕದ ಹಿಂದಿನ ಸ್ಪೂರ್ತಿ.
ಅಷ್ಟಕ್ಕೂ ಈ ಪುಸ್ತಕದಲ್ಲೇನಿದೆ ಮಹಾ! ಇನ್ನೊಂದು ಭಗವದ್ಗೀತೆಯ ಅನುವಾದವಷ್ಟೇ ಎಂದುಕೊಂಡರೆ ಮೂರ್ಖತನವಾಗುವುದು, ಏಕೆಂದರೆ, ಈ ಅನುವಾದ ತುಳು ಲಿಪಿ ಕಲಿಕೆಯ ಕೈಪಿಡಿ ಆಗುವ ಎಲ್ಲಾ ಸಾಮರ್ಥ್ಯ ಹೊಂದಿದೆ. ನನ್ನ ಮಾತೃಭಾಷೆ ತುಳು. ಆದರೆ ವಿಷಾದನೀಯ ವಿಷಯವೆಂದರೆ ನನಗೆ ನನ್ನ ಮಾತೃಭಾಷೆಯ ಲಿಪಿಯೇ ತಿಳಿದಿಲ್ಲ. ನನಗಷ್ಟೇ ಯಾಕೆ, ತುಳುನಾಡಿನಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಬಿಟ್ಟರೆ ಇನ್ಯಾರಿಗೂ ತಿಳಿದಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ! ದಕ್ಷಿಣ ಕನ್ನಡ, ಉಡುಪಿ, ಕಸರಗೋಡು ಜಿಲ್ಲೆಗಳಲ್ಲಿ ಸಾಮಾನ್ಯರಿಂದ ಸಾಮಾನ್ಯ ಜನರು ಮಾತನಾಡುವ ಭಾಷೆ ತುಳು. ಆದರೆ, ತುಳುಲಿಪಿ ಅಳಿವಿನಂಚಿನವರೆಗೆ ತಲುಪಿ ಓಲಾಡುತ್ತಿರುವುದು ನಂಬಲಸಾಧ್ಯವಾದರೂ ನಿಜ! ಇಂತಹ ಪರಿಸ್ಥಿತಿಯಲ್ಲಿ, ತುಳುಲಿಪಿ ಕಲಿಯಲು ಆಕಾಂಕ್ಷಿಗಳಾಗಿರುವ ಎಲ್ಲರಿಗೂ ಈ ಪುಸ್ತಕ ಅತ್ಯುತ್ತಮ ಕೊಡುಗೆ. ಏಕೆಂದರೆ, ಇದರಲ್ಲಿ ತುಳು ಲಿಪಿಯ ವರ್ಣಮಾಲೆಯ ಸಹಿತ ಸಂಪೂರ್ಣ ಭಗವದ್ಗೀತೆಯನ್ನು ತುಳು ಹಾಗೂ ಕನ್ನಡದಲ್ಲಿ ಅಕ್ಕಪಕ್ಕದ ಪುಟಗಳಲ್ಲಿ ಸುಲಭವಾಗಿ ಹೊಂದಿಸಿ ನೋಡುವಂತೆ ನೀಡಲಾಗಿದೆ, ಎಡಪುಟದಲ್ಲಿ ತುಳುವಿನಲ್ಲೇ ಅರ್ಥ ಸಹಿತ ಶ್ಲೋಕ, ಬಲಪುಟದಲ್ಲಿ ಕನ್ನಡದಲ್ಲಿ ಶ್ಲೋಕ ಹಾಗೂ ಕನ್ನಡ ಲಿಪಿಯಲ್ಲಿ ಬರೆದ ತುಳು ಭಾಷಾರ್ಥ ನೀಡಲಾಗಿದೆ. ತುಳುಲಿಪಿ ಕಲಿಯುವವರಿಗೆ ಭಗವದ್ಗೀತೆಯಿಂದಲೇ ಪ್ರಾರಂಭಿಸುವ ಅವಕಾಶ, ಲಿಪಿ ಬಲ್ಲವರಿಗೆ ತುಳುವಿನಲ್ಲೇ ಓದುವ ಅವಕಾಶ ಮಾಡಿಕೊಟ್ಟಂತಹ ಶ್ರೇಯ ಅಪರ್ಣಾ ಕೊಡೆಂಕಿರಿ ಅವರಿಗೆ ಸಲ್ಲಬೇಕು.
ಈ ಲೋಕಾರ್ಪಣಾ ಕಾರ್ಯಕ್ರಮವೂ ಕೂಡ ಅದರದ್ದೇ ಆದ ವಿಶಿಷ್ಟ ರೂಪದಲ್ಲಿ ಆಯೋಜಿಸಲ್ಪಟ್ಟಿತ್ತು. ಶಂಖನಾದ, ವೇದಘೋಷದಿಂದ ಪ್ರಾರಂಭವಾಗಿ ಧನ್ಯವಾದದವರೆಗೂ ತುಳುವಿನಲ್ಲೇ ನಿರೂಪಣೆ ಹಾಗೂ ಭಾಷಣಗಳು ನಡೆಯಿತು. ಸುಬ್ರಹ್ಮಣ್ಯ ಮಠದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರಾಗಿ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನತೀರ್ಥರು, ಗಣ್ಯ ಅತಿಥಿಗಳಾಗಿ ಖ್ಯಾತಚಿಂತಕ ಲಕ್ಷ್ಮೀಶ ತೋಳ್ಪಾಡಿ ಹಾಗೂ ವೇದವ್ಯಾಸ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಆನಂದತೀರ್ಥ ಸಗ್ರಿಯವರು ಉಪಸ್ಥಿತರಿದ್ದರು. ಇನ್ನೊಂದು ಮುಖ್ಯವಾದ ಆಕರ್ಷಣೆಯೆಂದರೆ, ಪುಸ್ತಕ ಬಿಡುಗಡೆಯ ನಂತರ ಆಯೋಜಿಸಿದ ಅದ್ಭುತ ನೃತ್ಯ ಪ್ರದರ್ಶನ. ಲೇಖಕಿಯಾದ ಅಪರ್ಣಾ ಹಾಗೂ ಅವರ ತಾಯಿ ಆಶಾ ಉಂಗ್ರುಪುಳಿತ್ತಾಯ ಅವರು ಸುಬ್ರಹ್ಮಣ್ಯ ಹಾಗೂ ನರಸಿಂಹ ದೇವರಿಗೆ ಸಲ್ಲಿಸಿದ ಭರತನಾಟ್ಯವೂ ಅದ್ಭುತವಾಗಿ ಮೂಡಿ ಬಂತು.
ಈ ಪುಸ್ತಕಕ್ಕೆ ಸಹಕಾರವಿತ್ತಂತಹ ಪ್ರಮುಖರೆಲ್ಲರನ್ನೂ ಆದರದಿಂದ ಸತ್ಕರಿಸಿದರು. ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಿದ ಸುಬ್ರಹ್ಮಣ್ಯ ಶ್ರೀಗಳು ಭಗವದ್ಗೀತೆಯ ಮಹತ್ವ, ಅಮೂಲ್ಯತೆ ಬಗ್ಗೆ ಆಶೀರ್ವಚಿಸಿದರು. ಪ್ರಹ್ಲಾದನ ಉದಾಹರಣೆಯನಿತ್ತು ಗರ್ಭಿಣಿಯಾಗಿರುವಂತಹ ಸಮಯದಲ್ಲಿ ಮಾಡಿದ ಈ ಮಹತ್ತರ ಕಾರ್ಯ ಅವರ ಮಗುವಿನ ಮೇಲೆ ಬೀರುವ ಉತ್ತಮ ಪ್ರಭಾವದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಸ್ವಾಮೀಜಿಯವರ ಮೂಲಕ ಆನಂದತೀರ್ಥ ಸಗ್ರಿಯವರು ನೀಡಿದ ಮುಂದಾಳತ್ವವೂ ಸಹಾಯಕವಾಯಿತು. ಇವರು ಖುದ್ದು ತುಳುಲಿಪಿ ಬಲ್ಲವರು. ಸುಬ್ರಹ್ಮಣ್ಯ ಮಠದ ವೇದವ್ಯಾಸ ಸಂಶೋಧನಾ ಕೇಂದ್ರದಲ್ಲಿ ಸಂಶೋಧಕರಾಗಿರುವ ಕಾರ್ತಿಕ್ ಶಗ್ರಿತ್ತಾಯ ಅವರ ತಾಂತ್ರಿಕ ಸಹಾಯವೂ ಅಪಾರ. ಈ ಉತ್ತಮ ಕಾರ್ಯಕ್ಕೆ ಪ್ರೋತ್ಸಾಹಿಸುತ್ತಾ ಲಕ್ಷ್ಮೀಶ ತೋಳ್ಪಾಡಿಯವರು ಭಾಷೆಗೆ ಲಿಪಿಯ ಮಹತ್ವದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಜಗತ್ತಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ತನ್ನೊಳಗೊಳಗೊಂಡ ಜ್ಞಾನ ಭಂಡಾರ ಭಗವದ್ಗೀತೆ. ಈ ಗ್ರಂಥವನ್ನು ನನ್ನ ಮಾತೃಭಾಷೆಯಲ್ಲಿ ಓದಬಹುದು ಎಂಬುದು ಸಂತೋಷದ ಸಂಗತಿ. ತುಳುಲಿಪಿ ಅಧ್ಯಯನಕ್ಕೆ ಪ್ರೇರಣಾತ್ಮಕ ಗ್ರಂಥವಾಗಿ ಮೂಡಿಬಂದ ಈ ಪುಸ್ತಕ ಯಶಸ್ವಿಯಾಗಲು “ನಮೊ ಮಾಂತೆರ್ಲಾ ಸಹಾಯ ಮಾಂಪೊಡು.”
ಪುಸ್ತಕದ ಬೆಲೆ ರೂಪಾಯಿ 300 ಆಗಿದ್ದು, ಪುಸ್ತಕಗಳು ಆಮೆಜಾನ್ ನಲ್ಲಿ ಲಭ್ಯವಿದ್ದು https://amzn.eu/d/5LleMhj ಈ ಲಿಂಕ್ ಬಳಸಿ ಕೊಂಡುಕೊಳ್ಳಬಹುದು ಅಥವಾ 8277243211 ಸಂಖ್ಯೆಯನ್ನು ಸಂಪರ್ಕಿಸಿಬಹುದು.
- ಶ್ರೀ ಪೂರ್ಣಾನಂದ ಎಚ್. ಉಪಾಧ್ಯಾಯ
ಕಡಬದ ಸಮೀಪವಿರುವ ಹೊಸಮಟದ ಶ್ರೀ ಪೂರ್ಣಾನಂದ ಎಚ್. ಇವರು ಶ್ರೀ ವಿಷ್ಣುಮೂರ್ತಿ ಎಚ್. ಮತ್ತು ಶ್ರೀಮತಿ ಸವಿತಾ ಸಿ. ಇವರ ಸುಪುತ್ರರು. ಮೆಕ್ಯಾನಿಕಲ್ ಇಂಜಿನೀಯರಿಂಗ್ ಪದವೀಧರರಾದ ಇವರು ಕರ್ನಾಟಿಕ್ ಶಾಸ್ತ್ರೀಯ ಸಂಗೀತ ಹಾಡುಗಾರರು ಮತ್ತು ಉತ್ತಮ ಮೃದಂಗ ವಾದಕರೂ ಆಗಿದ್ದಾರೆ.
2 Comments
ತುಳು ಭಾಷೆಯ ಭಗವದ್ಗೀತೆಯನ್ನು ಖರೀದಿ ಮಾಡಲಿದ್ದರೆ ಅದರ ಪ್ರಕಾಶಕರು ಯಾರು ಕ್ರಯ ಎಷ್ಟು ಎಂದೆಲ್ಲಾ ವಿವರಣೆ ಕೊಡುತ್ತಿದ್ದರೆ ನಿಮ್ಮ ಲೇಖನ ಶ್ರೇಯಸ್ಕರವಾಗುತ್ತಿತು.
RS SHETTY
[email protected]
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಪುಸ್ತಕದ ಬೆಲೆ ರೂಪಾಯಿ 300 ಆಗಿದ್ದು, ಪುಸ್ತಕಗಳು ಆಮೆಜಾನ್ ನಲ್ಲಿ ಲಭ್ಯವಿದ್ದು https://amzn.eu/d/5LleMhj ಈ ಲಿಂಕ್ ಬಳಸಿ ಕೊಂಡುಕೊಳ್ಳಬಹುದು ಅಥವಾ 8277243211 ಸಂಖ್ಯೆಯನ್ನು ಸಂಪರ್ಕಿಸಿಬಹುದು.