ಮಂಗಳೂರು : ಕಳೆದ 23 ವರ್ಷಗಳಿಂದ ಸಾಹಿತ್ಯ ಮತ್ತು ಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು ನೂರಕ್ಕೂ ಅಧಿಕ ಪುಸ್ತಕ ಪ್ರಕಟಿಸಿರುವ ಮಂಗಳೂರಿನ ಕಲ್ಲಚ್ಚು ಪ್ರಕಾಶನ, ವಾರ್ಷಿಕವಾಗಿ ಕೊಡಮಾಡುವ 2023ರ 14ನೇ ಆವೃತ್ತಿಯ ಪ್ರತಿಷ್ಠಿತ ‘ಕಲ್ಲಚ್ಚು ಪ್ರಶಸ್ತಿ’ಗೆ ಹಿರಿಯ ಸಾಹಿತಿ, ಕಿರುತೆರೆ ಮತ್ತು ಚಲನಚಿತ್ರ ರಂಗದ ಚಿತ್ರಕಥೆ ಹಾಗೂ ಸಂಭಾಷಣೆಕಾರ ತುರುವೇಕೆರೆ ಪ್ರಸಾದ್ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ ತಿಂಗಳ 2ನೇ ತಾರೀಕಿನಂದು ವಿವಿಧ ಕ್ಷೇತ್ರಗಳ ಆತಿಥಿಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ.
ತುರುವೇಕೆರೆ ಪ್ರಸಾದ್ ಅವರು ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ಕ್ರಿಯಾಶೀಲರಾಗಿದ್ದು, ಹಾಸ್ಯ ಬರವಣಿಗೆಯಲ್ಲಿ ವಿಶೇಷ ಹೆಸರು ಗಳಿಸಿರುತ್ತಾರೆ. 20ಕ್ಕೂ ಅಧಿಕ ವಿವಿಧ ಕೃತಿಗಳನ್ನು ಹೊರತಂದಿರುವುದು ಇವರ ಹೆಗ್ಗಳಿಕೆ. ಕಿರುತೆರೆ ಹಾಗೂ ಸಿನಿಮಾರಂಗದ ಅನೇಕ ದಿಗ್ಗಜರೊಂದಿಗೆ ಕೆಲಸ ಮಾಡಿ ಧಾರಾವಾಹಿ, ಚಲನಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ರಚಿಸಿರುವ ಇವರು ವಿವಿಧ ಪತ್ರಿಕೆಗಳ ಅಂಕಣಕಾರರೂ ಆಗಿದ್ದು, ನಾಡಿನ ಚಿರಪರಿಚಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.