ಪುತ್ತೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ಶ್ರೀ ರಾಮಸೌಧ, ದರ್ಬೆ, ಪುತ್ತೂರು. ಇವರ ನೇತೃತ್ವದಲ್ಲಿ ‘ಪುಸ್ತಕ ಹಬ್ಬ, ಪುಸ್ತಕದಾನಿಗಳ ಮೇಳ ಮತ್ತು ಸಾಹಿತ್ಯ ವೈಭವ’ವು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ದಿನಾಂಕ 11-08-2023, 12-08-2023 ಮತ್ತು 13-08-2023ರಂದು ನಡೆಯಲಿದೆ.
ಪ್ರಸ್ತುತ ಕಾರ್ಯಕ್ರಮವು ದಿನಾಂಕ 11-08-2023ರಂದು ಸಂಜೆ 4 ಗಂಟೆಗೆ ನಡೆಯಲಿದ್ದು, ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ್ ವಹಿಸಲಿದ್ದಾರೆ. ಪುತ್ತೂರಿನ ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರು ದೀಪ ಪ್ರಜ್ವಲನೆ ಮಾಡಿ, ದ್ವಾರಕಾ ಕನ್ಸ್ ಸ್ಟ್ರಕ್ಷನ್ಸ್ ನ ಶ್ರೀ ಗೋಪಾಲಕೃಷ್ಣ ಭಟ್ ಪುಸ್ತಕ ಮೇಳದ ಉದ್ಘಾಟನೆ ಮಾಡಲಿರುವರು. ಪ್ರಥಮ ಪುಸ್ತಕ ದಾನಿಗಳಾದ ಪ್ರೊ.ಬಿ.ವಿ.ಅರ್ತಿಕಜೆ, ಹಿರಿಯ ವೈದ್ಯರಾದ ಡಾ.ಸುಧಾ ರಾವ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಶ್ರೀಮತಿ ಸಂಧ್ಯಾ ದತ್ತಾತ್ರೇಯ ರಾವ್ ಇವರ ‘ಸಕ್ಕರೆ ಗೊಂಬೆ’ (ಮಕ್ಕಳ ಕವನ ಸಂಕಲನ) ಹಾಗೂ ‘ಭಾವ ದ್ಯುತಿ’ (ಕವನ ಸಂಕಲನ) ಕೃತಿಗಳನ್ನು ಹಿರಿಯ ಸಾಹಿತಿಗಳಾದ ಡಾ.ಎಚ್.ಜಿ.ಶ್ರೀಧರ್ ಬಿಡುಗಡೆ ಮಾಡಲಿದ್ದಾರೆ. ಪುತ್ತೂರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯೆಯರಿಂದ ‘ಮಾಗಧ ವಧೆ’ ಪ್ರಸಂಗದ ತಾಳಮದ್ದಳೆ ನಡೆಯಲಿದೆ.
ದಿನಾಂಕ 12-08-2023ರಂದು ಪೂರ್ವಾಹ್ನ 10 ಗಂಟೆಗೆ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರ – ಯಶಸ್ ನೆಹರುನಗರ, ಪುತ್ತೂರು ಇವರ ಸಹಯೋಗದೊಂದಿಗೆ ಆಸಕ್ತ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಮತ್ತು ಸಾರ್ವಜನಿಕರಿಗೆ ‘ಐ.ಎ.ಎಸ್- ಐ.ಪಿ.ಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ ಹಾಗೂ ‘ಐ.ಎ.ಎಸ್ ದರ್ಶನ’ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ ಗೊಳ್ಳಲಿದೆ.
ಇದೇ ವೇದಿಕೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಸುದಾನ ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ಸಹಯೋಗದಲ್ಲಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಇವರ ಆತ್ಮಕಥನ ‘ದೀವಿಗೆ’ ಕೃತಿ ಲೋಕಾರ್ಪಣೆಗೊಳ್ಳಲಿದೆ. ಸಂಜೆ 4.30ಕ್ಕೆ ಹಿರಿಯ ಸಾಹಿತಿಗಳಾದ ಶ್ರೀ ತೀರ್ಥರಾಮ ವಳಲಂಬೆ ಇವರೊಂದಿಗೆ ‘ಪುನರ್ಜನ್ಮ – ಪುರುಷಾರ್ಥ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ರಿಂದ ‘ಕುಶಲ ಹಾಸ್ಯಪ್ರಿಯರ ಸಂಘ’ದ ಸದಸ್ಯರಿಂದ ‘ಹಾಸ್ಯ ಸಂಜೆ’ ಕಾರ್ಯಕ್ರಮ ಜರಗಲಿದೆ.
ದಿನಾಂಕ 13-08-2023ರಂದು ಪೂರ್ವಾಹ್ನ 10 ಗಂಟೆಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಹಿರಿಯ ಸಾಹಿತಿಗಳಾದ ಗಣೇಶ್ ಪ್ರಸಾದ್ ಪಾಂಡೆಯಲು ಅವರ ನೇತೃತ್ವದಲ್ಲಿ ‘ಕವಿಗೋಷ್ಠಿ’ ಹಾಗೂ ಮಧ್ಯಾಹ್ನ 3 ಗಂಟೆಗೆ ಪುತ್ತೂರಿನ ಸುನಾದ ಸಂಗೀತ ಶಾಲೆಯ ಕಾಂಚನ ಈಶ್ವರ ಭಟ್ ಶಿಷ್ಯ ವೃಂದದವರಿಂದ ‘ಸಂಗೀತ ಕಾರ್ಯಕ್ರಮ’ ನಡೆಯಲಿದೆ.
ಸಂಜೆ 5 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಕ.ಸಾ.ಪ.ದ ಅಧ್ಯಕ್ಷರಾದ ಪುತ್ತೂರು ಶ್ರೀ ಉಮೇಶ್ ನಾಯಕ್ ಇವರು ವಹಿಸಲಿದ್ದು, ಬಜತ್ತೂರಿನ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿಯಾದ ಶ್ರೀಮತಿ ಪುಷ್ಪಲತಾ ಎಂ. ಸಮಾರೋಪ ಭಾಷಣ ಮಾಡಲಿದ್ದಾರೆ. ಯಕ್ಷಗಾನ ಅರ್ಥದಾರಿ, ಸಮಾಜ ಸೇವಕರಾದ ಶ್ರೀ ಸೀತಾರಾಮ್ ಕುಂಜತ್ತಾಯ ಪಣಿಯೆ ಇವರಿಗೆ ‘ಅಡೂರು ಸೂರ್ಯನಾರಾಯಣ ಕಲ್ಲುರಾಯ ಸ್ಮರಣಾರ್ಥ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪುತ್ತೂರು ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಶ್ರೀ ಅವಿನಾಶ ಕೊಡಿಂಕಿರಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಶ್ರೀ ನಾ.ಕಾರಂತ ಪೆರಾಜೆ ಮತ್ತು ದ.ಕ.ಜಿಲ್ಲಾ ಕ.ಸಾ.ಪ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಸುಂದರ ನಾಯ್ಕ್ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಯಿಂದ ಶ್ರೀ ಸತೀಶ ಪುಣಿಂಚತ್ತಾಯ ಬಳಗದಿಂದ ‘ಯಕ್ಷಗಾನ ಗಾನವೈಭವ’ ನಡೆಯಲಿದೆ.