ಮಂಗಳೂರು : ದಿನಾಂಕ 03-08-2023ರಂದು ಮಂಗಳೂರಿನ ಶಾರದಾ ಪ.ಪೂ.ಕಾಲೇಜಿನಲ್ಲಿ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆ ‘ಸೌರಭ-2023’ನಡೆಯಿತು. ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗದ ನಿರ್ದೇಶಕ ಎಂ.ಶಶಿಧರ ಕೋಟ್ಯಾನ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಇಂದಿನ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂದೆಂದಿಗಿಂತ ಹೆಚ್ಚು ಸೌಲಭ್ಯ ಮತ್ತು ಅವಕಾಶಗಳು ದೊರೆಯುತ್ತಿರುವುದು ಸಂತೋಷದ ವಿಚಾರ. ಇದನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆ, ಅಂತಃಶಕ್ತಿಗಳನ್ನು ಹೊರ ಜಗತ್ತಿಗೆ ಪ್ರಸ್ತುತ ಪಡಿಸುವ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಹಾಗಾದಾಗ ಮಾತ್ರ ಅವರ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆ ಸಾಧ್ಯ. ಶಿಕ್ಷಣದೊಂದಿಗೆ ಸಂಸ್ಕೃತಿ ಸಂಪನ್ನರಾದ ಯುವಜನಾಂಗ ರೂಪುಗೊಂಡಾಗ ನಮ್ಮ ಸಮಾಜ, ರಾಷ್ಟ್ರ ವಿಶ್ವಮಾನ್ಯವಾಗಬಹುದು.” ಎಂದು ಅಭಿಪ್ರಾಯಪಟ್ಟರು.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಪ್ರದೀಪ ಕುಮಾರ ಕಲ್ಕೂರ, ಟ್ರಸ್ಟಿಗಳಾದ ಶ್ರೀ ಸುಧಾಕರ ರಾವ್ ಪೇಜಾವರ, ಶಿಕ್ಷಕ-ರಕ್ಷಕ ಸಂಘದ ಸದಸ್ಯ ಶ್ರೀ ಪ್ರಕಾಶ್ ಇಳಂತಿಲ, ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹಾಬಲೇಶ್ವರ ಭಟ್ ಎಸ್ ಮತ್ತು ಉಪ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಕು.ಭೂಮಿಕಾ ಮತ್ತು ಕು.ಪ್ರತೀಕ್ಷಾ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಂಘದ ಸಂಯೋಜಕಿ ಶ್ರೀಮತಿ ಅನುಪಮ ಜಿ.ಕೆ ಸ್ವಾಗತಿಸಿದರು. ವಿದ್ಯಾರ್ಥಿನಿ ಕು.ದಿಯಾ ಆರ್.ಬಂಗೇರ ಅತಿಥಿಗಳನ್ನು ಪರಿಚಯಿಸಿ, ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ನಿಹಾರಿಕಾ ವ೦ದಿಸಿ, ವಿದ್ಯಾರ್ಥಿ ತುಷಾರ್ ಮಯ್ಯ ನಿರೂಪಿಸಿದರು