ಮುಡಿಪು : ಮಂಗಳೂರು ವಿ.ವಿ.ಯ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ‘ಯಕ್ಷಗಾನ ಹಿಮ್ಮೇಳ ತರಗತಿ’ಯ ಉದ್ಘಾಟನೆಯು ದಿನಾಂಕ 03-08-2023ರಂದು ನಡೆಯಿತು.
ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ “ಯಕ್ಷಗಾನ ಜಗತ್ತಿನ ಸರ್ವಶ್ರೇಷ್ಠ ಕಲೆಯಾಗಿದೆ. ಸಂಪ್ರದಾಯಬದ್ಧವಾಗಿ ಯಕ್ಷಗಾನವನ್ನು ಕಲಿಸಿ ಬೆಳೆಸುವುದರೊಂದಿಗೆ ಯಕ್ಷಗಾನದ ಬೇರುಗಳನ್ನು ಗಟ್ಟಿಗೊಳಿಸುವ ಕಾರ್ಯ ಸಂಘ ಸಂಸ್ಥೆಗಳ ಮೂಲಕ ನಿರಂತರವಾಗಿ ನಡೆಯ ಬೇಕಿದೆ. ಯಕ್ಷಗಾನ ಸಂಗೀತ ಪರಂಪರೆಗೆ ಬಹಳ ದೊಡ್ಡ ಇತಿಹಾಸವಿರುವುದನ್ನು ಶಿವರಾಮ ಕಾರಂತರು ಗುರುತಿಸಿದ್ದಾರೆ. ಯಕ್ಷಗಾನಕ್ಕೆ ಇಂದು ಯುವ ಸಮುದಾಯವೂ ಆಕರ್ಷಿತವಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಯಕ್ಷಗಾನಕ್ಕೆ ಸಂಬಂದಿಸಿದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದು, ಇದರೊಂದಿಗೆ ಯಕ್ಷಗಾನ ಹಿಮ್ಮೇಳ ತರಬೇತಿಯನ್ನು ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.” ಎಂದು ಹೇಳಿದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಮಾತನಾಡಿ, “ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಕಲೆಯಾಗಿದ್ದು, ಈ ಕಲೆಯು ಇಂದು ಸಾವಿರಾರು ಜನರ ವೃತ್ತಿ ಬದುಕಿಗೆ ದಾರಿದೀಪವಾಗಿದೆ. ಕಲೆಯ ಸಾಂಪ್ರದಾಯಿಕತೆ ಹಾಗೂ ಅದರ ಮಹತ್ವವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರವು ಹಲವಾರು ಶೈಕ್ಷಣಿಕ ಕಾರ್ಯಯೋಜನೆಗಳೊಂದಿಗೆ ಮುನ್ನಡೆಯುತ್ತಿದೆ” ಎಂದರು.
ಯಕ್ಷಗಾನ ಹಿಮ್ಮೇಳ ಗುರುಗಳಾದ ಕುಸುಮಾಕರ್ ಮುಡಿಪು ಅವರು ಉಪಸ್ಥಿತರಿದ್ದರು. ಯಕ್ಷಗಾನ ಅಧ್ಯಯನ ಕೇಂದ್ರದ ಡಾ.ಸತೀಶ್ ಕೊಣಾಜೆ ವಂದಿಸಿ, ವಿದ್ಯಾರ್ಥಿನಿ ಮನಿಷಾ ಕಾರ್ಯಕ್ರಮ ನಿರೂಪಿಸಿದರು.