ಮಡಿಕೇರಿ : ಸಾಹಿತಿ ಹಾಗೂ ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಕೆ. ಭರತ್ ಅವರು ಬರೆದ ಹನಿಗವನಗಳ ಸಂಕಲನ ‘ಧ್ಯಾನಕ್ಕೆ ಬಿದ್ದ ಅಕ್ಷರಗಳು’ ಕೃತಿ ದಿನಾಂಕ 06-08-2023ರಂದು ಅನಾವರಣಗೊಂಡಿತು.
ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್ ಕೊಡಗು ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು “ಸಂಕಷ್ಟ ಮತ್ತು ನೋವಿನ ಬದುಕಿನಲ್ಲಿ ಸುಂದರವಾದ ಕವನ ಹುಟ್ಟುತ್ತದೆ. ಕೆಲವರ ಬರವಣಿಗೆಯಲ್ಲಿ ಸಂದೇಶಗಳಿರುವುದಿಲ್ಲ, ಚಂದವಾಗಿ ಕಾಣುತ್ತದಷ್ಟೆ. ಅಂತಹ ಬರಹಗಾರರು ಹೆಚ್ಚಿದ್ದಾರೆ. ಆದರೆ ಅನುಭವವನ್ನು ಬರಹಕ್ಕೆ ಇಳಿಸುವವರ ಸಂಖ್ಯೆ ಕಡಿಮೆ ಇದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಮಾರುತಿ ದಾಸಣ್ಣವರ್, ಮಿಲನಾ ಭರತ್ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು, ಮತ್ತಷ್ಟು ಕೃತಿಗಳನ್ನು ಹೊರತರಲು ಮುಂದಾಗಬೇಕೆಂದು ಹೇಳಿದರು. ಪುಸ್ತಕದ ಕುರಿತು ಮಾತನಾಡಿದ ಸಾಹಿತಿ ಕಾಜೂರು ಸತೀಶ್, ಸಂವಹನ ವಿಭಾಗದ ಮುಖ್ಯಸ್ಥೆ ಡಾ. ಬಾಲಾಡಿ ಮೌಲ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಅಭಿನಯ ಕಲಾ ಮಿಲನ ಕೊಡಗು ಸಂಸ್ಥೆಯ ಟ್ರಸ್ಟಿ ಕುದುಕುಳಿ ಜೆ. ಭರತ್ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ ವಹಿಸಿದ್ದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಿಶೋರ್ ರೈ ಕತ್ತಲೆಕಾಡು, ರೆಜಿತ್ ಕುಮಾರ್ ಗುಹ್ಯ ಸ್ವಾಗತಿಸಿದರು. ಕೆದಂಬಾಡಿ ಕಾಂಚನಾ ವಿಶೇಷ ಆಹ್ವಾನಿತರ ಪರಿಚಯ ಮಾಡಿ, ಲೇಖಕಿ ಮಿಲನಾ ಭರತ್ ವಂದಿಸಿದರು.