ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಮತ್ತು ಶ್ರೀಮತಿ ವನಜಾಕ್ಷಿ ಚಾರಿಟೆಬಲ್ ಟ್ರಸ್ಟ್ ಜಂಟಿಯಾಗಿ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ ಮಹಾಕವಿ ರತ್ನಾಕರವರ್ಣಿ ಸಭಾಂಗಣದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರಿಗಾಗಿ ಆಯೋಜಿಸಿದ ‘ಕನ್ನಡ ಭಾಷಾ ಬೋಧನಾ ಕಾರ್ಯಾಗಾರ’ ದಿನಾಂಕ 09-08-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಶ್ರೀ ಅಭಯಚಂದ್ರ ಜೈನ್ ಮಾತನಾಡುತ್ತಾ “ಉತ್ತಮ ಅಧ್ಯಯನದ ಮುಖಾಂತರ ತರಗತಿಯಲ್ಲಿ ಕನ್ನಡ ಭಾಷೆಯ ಮೇಲಿನ ಒಲವನ್ನು ಹೆಚ್ಚಿಸಬೇಕು. ಕನ್ನಡ ಭಾಷೆ ಪ್ರತಿಯೊಬ್ಬರ ಜವಾಬ್ದಾರಿ. ಕನ್ನಡದ ಬಗ್ಗೆ ನಮಗೆ ಗೌರವವಿರಬೇಕು. ಇತ್ತೀಚೆಗಿನ ದಿನಗಳಲ್ಲಿ ರಾಮಾಯಣ ಮಹಾಭಾರತದಂತಹ ಪುರಾಣಗಳ ಚಿಂತನೆಯನ್ನು ಜನರಿಗೆ ತಲುಪಿಸಲು ಯಕ್ಷಗಾನದ ಬಳಕೆಯಾಗುತ್ತಿರುವುದು ಒಂದರ್ಥದಲ್ಲಿ ಕನ್ನಡ ಭಾಷಾ ಬೆಳವಣಿಗೆಗೆ ಸಹಕಾರಿ. ಕನ್ನಡದ ಬಗ್ಗೆ ಶಿಕ್ಷಕರಲ್ಲಿ ಒಲವು ಇರಬೇಕು. ಇಂಗ್ಲೀಷ್ ಪರಿವರ್ತನೆಗೆ ಒಳಗಾಗುತ್ತಿರುವ ಶಿಕ್ಷಕರಿಗೆ ತರಗತಿಯಲ್ಲಿ ಕನ್ನಡ ಭಾಷಾ ಬೋಧನೆಯ ಕುರಿತು ಹಮ್ಮಿಕೊಂಡಿರುವ ವಿಶೇಷ ಕಾರ್ಯಾಗಾರ ಅವರ ಜ್ಞಾನ ಭಂಡಾರ ವೃದ್ಧಿಸಲು ಸಹಾಯವಾಗಲಿದೆ. ರಾಜ್ಯದಲ್ಲಿ ಕನ್ನಡ ಭಾಷೆಯ ಉಳಿವಿಗೆ ಹಿಂದಿನಿಂದಲೂ ಆದ್ಯತೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೊಮ್ಮೆ ಸದನದಲ್ಲಿ ಕನ್ನಡ ವ್ಯಾಕರಣದ ಪಾಠ ಮಾಡಿದ ನೆನಪನ್ನು ಮೆಲುಕು ಹಾಕಿದರು ಹಾಗೂ ಇಂದಿಗೂ ಕೂಡ ಸಿದ್ದರಾಮಯ್ಯ ಅವರು ಕಡತಗಳಿಗೆ ಕನ್ನಡದಲ್ಲೇ ಸಹಿ ಹಾಕುವುದು ಅನುಕರಣೀಯ” ಎಂದು ಹೇಳಿದರು.
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಬಿ.ರಾಜಶ್ರೀ “ಕನ್ನಡ ಸಾಹಿತ್ಯಕ್ಕೆ ಕನ್ನಡ ಭಾಷೆಗೆ ಕೊಡುಗೆ ನೀಡಿದವರ ಸಂಖ್ಯೆ ದೊಡ್ಡದು. ಶಾಲೆಗೆ ಸೇರಿದ ಪ್ರತೀ ಮಗುವಿಗೆ ಕನ್ನಡ ಓದಲು ಬರುವಂತೆ ಶಿಕ್ಷಕರಾದ ನಾವು ಮಾಡಬೇಕು” ಎಂದು ಹೇಳಿದರು. ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
‘ಕನ್ನಡ ಬೋಧಕರಿಗೆ ಇರಬೇಕಾದ ಪೂರ್ವ ಜ್ಞಾನ’ದ ಕುರಿತು ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಮುನಿರಾಜ ರೆಂಜಾಳ, ‘ಕನ್ನಡ ಪಠ್ಯ-ಪದ್ಯಗಳ ವಾಚನ ಗಾಯನ’ದ ಕುರಿತು ಆಳ್ವಾಸ್ ಪಿಯು ಕಾಲೇಜಿನ ಉಪನ್ಯಾಸಕ ಶ್ರೀ ರಾಮಪ್ರಸಾದ ಕಾಂಚೋಡು, ‘ಕನ್ನಡ ಬೋಧನೆಯಲ್ಲಿ ಭಾಷಾ ಶುದ್ದಿ’ ಕುರಿತು ಡಾ. ಪಾದೆಕಲ್ಲು ವಿಷ್ಣು ಭಟ್ ಹಾಗೂ ‘ತರಗತಿಯಲ್ಲಿ ರಂಗ ಚಟುವಟಿಕೆಯ ಸಾಧ್ಯತೆ’ ಕುರಿತು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಶ್ರೀ ಜೀವನ್ ರಾಂ ಸುಳ್ಯ ಕಾರ್ಯಾಗಾರ ನಡೆಸಿದರು.
ಕಸಾಪ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಮಕೃಷ್ಣ ಶಿರೂರು ಮತ್ತು ಕ.ಸಾ.ಪ. ಮೂಡುಬಿದಿರೆ ಘಟಕದ ಕಾರ್ಯದರ್ಶಿ ಶ್ರೀ ಸದಾನಂದ ನಾರಾವಿ ಉಪಸ್ಥಿತರಿದ್ದರು. ಘಟಕದ ಗೌರವ ಕೋಶಾಧ್ಯಕ್ಷ ಅಂಡಾರು ಶ್ರೀ ಗುಣಪಾಲ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಡಾ. ಸುಧಾರಾಣಿ ನಿರೂಪಿಸಿ, ವಂದಿಸಿದರು.