ಔಪಚಾರಿಕ ಶಿಕ್ಷಣವು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ. ಶಿಕ್ಷಣವು ಸಾಮಾಜಿಕ, ಆರ್ಥಿಕ ಮತ್ತು ಬೌದ್ಧಿಕವಾಗಿ ವ್ಯಕ್ತಿಯ ಅಭ್ಯುದಯವನ್ನು ಸಾಧಿಸಲು ಸಹಕಾರಿಯಾಗಿದೆ. ಔಪಚಾರಿಕ ಶಿಕ್ಷಣವು ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಸುವ್ಯವಸ್ಥಿತವಾಗಿರಿಸಲು ಅನುಕೂಲ ಮಾಡಿಕೊಡುತ್ತದೆ ಎಂಬುದು ಬಹುತೇಕ ಚಿಂತಕರ ಅಭಿಪ್ರಾಯ. ಶಿಕ್ಷಣದ ಮಹತ್ವವನ್ನು ಅರಿಸ್ಟಾಟಲ್, ಪ್ಲೇಟೋರಂತಹ ತತ್ತ್ವಜ್ಞಾನಿಗಳು ಜಗತ್ತಿಗೆ ಸಾರಿದ್ದಾರೆ.
ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕೇವಲ ಔಪಚಾರಿಕ ಶಿಕ್ಷಣದಿಂದ ಮಾತ್ರವೇ ಬದುಕಿನ ಎಲ್ಲಾ ಮಜಲುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ಸಂಗೀತ, ಚಿತ್ರಕಲೆ, ಕ್ರೀಡೆ , ಕರಕುಶಲ ಇತ್ಯಾದಿ ಕಲೆಗಳು ಇತ್ಯಾದಿಗಳನ್ನು ಮಕ್ಕಳಿಗೆ ಕಲಿಸಲಾಗುತ್ತದೆ.
ಅರ್ವತ್ತನಾಲ್ಕು ಪ್ರಮುಖ ವಿದ್ಯೆಗಳಲ್ಲಿ ಒಂದಾದ ನೃತ್ಯ ಕಲೆಗೆ ಮಾರುಹೋಗಿ, ಅದನ್ನು ಕಲಿಯುತ್ತಿರುವ ಮಕ್ಕಳಿಗೇನೂ ಕೊರತೆಯಿಲ್ಲ. ಶಾಸ್ತ್ರೀಯ ನೃತ್ಯದ ಕಡೆಗೆ ಮಕ್ಕಳು ಹಾಗೂ ಮುಖ್ಯವಾಗಿ ಅವರ ಪೋಷಕರ ಒಲವು ಅಧಿಕವಾಗಿರಲು ಕಾರಣ – ಶಾಸ್ತ್ರೀಯ ನೃತ್ಯವು ದೈವಿಕ ಕಲೆಯಾಗಿ, ಪರಮಾತ್ಮನನ್ನು ಸಾಕ್ಷಾತ್ಕರಿಸಲು ಸಹಕಾರಿ. ಅದರ ಜೊತೆ ಜೊತೆಗೆ ದೇಹ – ಮನಸ್ಸು ಎರಡನ್ನೂ ಸದೃಢವಾಗಿರಿಸಿ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಪಡಿಸುವಲ್ಲಿ ಸಹಕಾರಿ. ಶಾಸ್ತ್ರೀಯ ನೃತ್ಯವು ವಿಶೇಷ ಚೇತನ ಮಕ್ಕಳನ್ನು ತನ್ನೆಡೆಗೆ ಸೆಳೆದುಕೊಂಡು, ಅವರಲ್ಲಿ ಹೊಸ ಬಗೆಯ ಚೈತನ್ಯ ಸೃಷ್ಟಿಸಿರುವ ಅಂಶವೇ ಅದರ ಮಹತ್ವವನ್ನು ಸಾರುತ್ತದೆ. ಇದನ್ನು ಕಲಿಯುತ್ತಿರುವ ಮಕ್ಕಳಲ್ಲಿ ಕಷ್ಟ – ಸಹಿಷ್ಣುತೆ, ಸಹನೆ, ಮೃದು ಸ್ವಭಾವ, ಮಂದಹಾಸ, ಸಂಯಮ, ಏಕಾಗ್ರತೆ, ನಿರ್ದಿಷ್ಟ ಗುರಿ, ಬುದ್ಧಿಶಕ್ತಿಯ ಮಟ್ಟ ಹೆಚ್ಚಳ ಮುಂತಾದ ಅನೇಕ ಧನಾತ್ಮಕ ಬದಲಾವಣೆಗಳು ಉಂಟಾಗುವುದರಲ್ಲಿ ಎರಡು ಮಾತಿಲ್ಲ. ಶಾಸ್ತ್ರೀಯ ನೃತ್ಯವು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದು, ಅದೆಷ್ಟೋ ವಿದೇಶಿಯರು ಇದಕ್ಕೆ ಮನಸೋತು ಶ್ರದ್ದೆಯಿಂದ ಕಲಿಯುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ.
ಆದರಿಂದು ಶಾಸ್ತ್ರೀಯ ನೃತ್ಯವನ್ನು ಕಲಿಯುವ ಮಕ್ಕಳು ಒಂದು ಹಂತದವರೆಗೆ ಶ್ರದ್ಧಾ ಮನೋಭಾವವನ್ನು ಇರಿಸಿ ಕಲಿಯುತ್ತಾರೆ. ನಂತರದಲ್ಲಿ ಅದೇ ಮನೋಭಾವ, ಆಸಕ್ತಿ ಅವರಲ್ಲಿ ಕಾಣೆಯಾಗಿರುತ್ತದೆ. ಹತ್ತನೇ ತರಗತಿಗೋ ಅಥವಾ ಪಿಯುಸಿಗೋ ಬಂದಾಗ ಮಕ್ಕಳು ನೃತ್ಯದ ಮೇಲಿರುವ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ಪ್ರಮುಖ ಕಾರಣ – ಔಪಚಾರಿಕ ಶಿಕ್ಷಣವನ್ನು ನೃತ್ಯದೊಂದಿಗೆ ಹೊಂದಿಸಿ, ಒಂದೇ ಗತಿಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಾಗದೇ ಇರುವುದು. ಪ್ರತಿಭೆಯಿದ್ದರೂ ನೃತ್ಯವನ್ನು ಮುಂದುವರಿಸಲು ವಿಫಲರಾಗುತ್ತಾರೆ. ಪೋಷಕರು, ಮಕ್ಕಳನ್ನು ಈ ಹೊಂದಿಸಿಕೊಳ್ಳುವ (ಔಪಚಾರಿಕ ಶಿಕ್ಷಣ ಮತ್ತು ನೃತ್ಯ) ಪ್ರಕ್ರಿಯೆಗೆ ಸಹಕರಿಸುವ ಬದಲು ಅವರನ್ನು ಶಾಸ್ತ್ರೀಯ ನೃತ್ಯದಿಂದ ದೂರ ಉಳಿಯುವುದಕ್ಕೆ ಸಹಮತಿ ನೀಡುತ್ತಾರೆ.
“ಸಾರ್, ನನ್ನ ಮಗಳಿಗೆ ಈಗ ಸಮಯ ಸಿಗುತ್ತಿಲ್ಲ. ಇಡೀ ದಿನ ಆನ್ಲೈನ್ ತರಗತಿಯಲ್ಲೇ ಬಿಝಿ ಇರುತ್ತಾಳೆ. ಇನ್ನು ನೃತ್ಯ ತರಗತಿಗೆ ಬರಲು ಸಾಧ್ಯವಿಲ್ಲ” ಇಂತಹ ಅದೆಷ್ಟೋ ಮಾತುಗಳು ಪೋಷಕರಿಂದ ಬಂದಾಗ, ಅದನ್ನು ಕೇಳಿಯೂ ಅವರನ್ನು ಅರ್ಥಮಾಡಿಸಲಾಗದೆ ಮಾನಸಿಕವಾಗಿ ನೊಂದುಕೊಂಡು ಪುನಃ ನಮ್ಮ ಕಲಾ ಪ್ರಪಂಚದೊಳಗೆ ಮುಳುಗಿರುತ್ತೇವೆ. ಆದರೆ ಅದೆಷ್ಟೋ ವರ್ಷಗಳ ಕಾಲ ಕಲಿಯುವ ಮಕ್ಕಳನ್ನು ತಿದ್ದಿ – ತೀಡಿ, ನೃತ್ಯ ಕ್ಷೇತ್ರದೊಳಗೆ ಒಂದೊಳ್ಳೆಯ ಕಲಾವಿದರನ್ನಾಗಿ ರೂಪಿಸುವ ನೃತ್ಯ ಶಿಕ್ಷಕರ ಕನಸು ಅರ್ಧದಲ್ಲೇ ನಿಂತಿರುತ್ತದೆ ಮತ್ತು ಮಕ್ಕಳ ಪ್ರತಿಭೆಗೆ ಪೂರ್ಣವಿರಾಮ ಬಿದ್ದಿರುತ್ತದೆ.
ಹಾಗಾದರೆ ನೃತ್ಯ ಮತ್ತು ಔಪಚಾರಿಕ ಕಲಿಕೆಯನ್ನು ಸಮನಾಗಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲವೇ? ಖಂಡಿತವಾಗಿಯೂ ಸಾಧ್ಯವಿದೆ. ಕಲಿಕೆಯಲ್ಲೂ, ನೃತ್ಯದಲ್ಲೂ ಸಮನಾಗಿ ತೊಡಗಿಸಿಕೊಂಡು, ಕೆಲವೊಮ್ಮೆ ನೃತ್ಯವನ್ನೇ ಕಲಿಕೆಗಿಂತಲೂ ಅಧಿಕವಾಗಿ ನೆಚ್ಚಿಕೊಂಡ ಬದ್ಧತೆಯ ವಿದ್ಯಾರ್ಥಿಗಳು ಪರೀಕ್ಷಾ ದಿನದ ಮೊದಲ ದಿನವೂ ನೃತ್ಯ ತರಗತಿಗೋ, ನೃತ್ಯ ಪ್ರದರ್ಶನಕ್ಕೋ ಹಾಜರಾಗಿ ಫಲಿತಾಂಶದಲ್ಲಿ ರ್ಯಾಂ ಕ್ ಗಳಿಸಿದ ಅದೆಷ್ಟೋ ಉದಾಹರಣೆಗಳಿವೆ. ನೃತ್ಯವನ್ನು ತಪಸ್ಸಿನಂತೆ ನೆಚ್ಚಿಕೊಂಡ ವಿದ್ಯಾರ್ಥಿಗಳಲ್ಲಿ ಸಾಧಿಸಬೇಕೆಂಬ ಛಲ ಅಗಾಧವಾಗಿರುತ್ತದೆ ಮತ್ತು ಆ ಛಲದ ಹಿಂದೆ ಗುರುಗಳ ಪರಿಶ್ರಮ ಮತ್ತು ಪೋಷಕರ ನಿರಂತರ ಪ್ರೋತ್ಸಾಹವೂ ಇರುತ್ತದೆ. ಆದರೆ ಇಂತಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ.
ಯಶಸ್ಸು ಗಳಿಸುವ ಛಲ ವಿದ್ಯಾರ್ಥಿಗಳಲ್ಲಿ ಇದ್ದಾಗ ಏನನ್ನು ಬೇಕಾದರೂ ಸಾಧಿಸಬಹುದು, ಬಂದಂತಹ ಅಡೆ ತಡೆಗಳನ್ನು ಎದುರಿಸಬಹುದು. ಬಹುತೇಕ ಪೋಷಕರು ನೃತ್ಯ ಶಿಕ್ಷಣ ನಿರಂತರವಾಗಿ ಸಾಗಿದರೆ ತಮ್ಮ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಾರೆ ಎಂಬ ತಪ್ಪು ಭಾವನೆಯಿಂದ, ತಮ್ಮ ಮಕ್ಕಳಲ್ಲಿ ಇರುವ ಅಗಾಧವಾದ ಪ್ರತಿಭೆಯನ್ನು ಅರಿಯದೆ ನೃತ್ಯವನ್ನು ಅರ್ಧದಲ್ಲೇ ಮೊಟುಕುಗೊಳಿಸಿ ಬಿಡುತ್ತಾರೆ. ಆ ಕ್ಷಣವನ್ನು ಸರಿಯಾಗಿ ಎದುರಿಸಿ, ಪೋಷಕರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ನಾವು ಎಡವುತ್ತಿದ್ದೇವೆ. 2017ರ ಒಂದು ಸರ್ವೆಯ ಪ್ರಕಾರ, ಪದವಿ ಮಟ್ಟದ ಶೇಕಡಾ 95 ರಷ್ಟು ವಿದ್ಯಾರ್ಥಿಗಳು ಮೊಬೈಲ್ ಅಥವಾ ಲ್ಯಾಪ್ ಟಾಪ್ ಹೊಂದಿದ್ದಾರೆ. ಹೊಂದಿರುವುದೇನೋ ಸಂತೋಷದ ಸಂಗತಿ. ಆದರೆ ಅದನ್ನು ಒಳ್ಳೆಯ ಕೆಲಸಗಳಿಗೆ ಮಾತ್ರ ಬಳಸಿ, ಮಕ್ಕಳು ಋಣಾತ್ಮಕವಾಗಿ ಸಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಹಲವಾರು ಚಟಗಳು, ಋಣಾತ್ಮಕ ಹವ್ಯಾಸಗಳು ಅವರನ್ನು ನೃತ್ಯದಿಂದ ವಿಮುಖರನ್ನಾಗಿಸಬಹುದು.
ನೃತ್ಯದ ಪ್ರಯೋಜನಗಳೇನು? ಅದನ್ನು ಆಳವಾಗಿ ಕಲಿತು, ನಿರಂತರ ಅಭ್ಯಾಸ ಕೈಗೊಂಡರೆ ದೈಹಿಕ ಆರೋಗ್ಯ ಮತ್ತು ಸದೃಢತೆಯ ಜೊತೆಗೆ ಮಾನಸಿಕವಾಗಿ ಏಕಾಗ್ರತೆಯನ್ನು ಸಾಧಿಸಿ, ವಿಚಾರಶೀಲತೆ ಮತ್ತು ಸ್ಮರಣಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬ ಪರಿಣಾಮಕಾರಿ ವಿಚಾರವನ್ನು ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಲು ನಾವು ಎಡವಿರುತ್ತೇವೆ ಅಥವಾ ಪೋಷಕರಿಗೆ ಸರಿಯಾಗಿ ಅರ್ಥವಾಗಿರುವುದಿಲ್ಲ.
ನೃತ್ಯವನ್ನು ಕಲಿತು, ವಿದ್ಯಾರ್ಥಿಗಳು ನಪಾಸಾದ ಉದಾಹರಣೆಗಳು ಖಂಡಿತಾ ಸಿಗದು. ನೃತ್ಯ ಮತ್ತು ಓದಿಗೆ ನಿರ್ದಿಷ್ಟವಾದ ಸಮಯ ಇರಿಸಿ, ಸಾಧಿಸುವ ಛಲ-ಬದ್ಧತೆ ಹೆಚ್ಚಿಸಿಕೊಂಡರೆ ಎರಡು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಬಹುದು. ಇದಕ್ಕೆ ವಿದ್ಯಾರ್ಥಿಗಳೊಂದಿಗೆ ಸಹಕರಿಸಬೇಕಾಗಿರುವವರು ವಿದ್ಯಾರ್ಥಿಗಳ ಪೋಷಕರು.
ಪೋಷಕರಿಗೆ ಸೂಕ್ತ ಸಲಹೆ ನೀಡಿ ನೃತ್ಯದ ಆಳ ಅಗಲಗಳ ಬಗ್ಗೆ ಸರಿಯಾಗಿ ತಿಳಿಹೇಳಿದಾಗ ಅವರ ಮನಃಸ್ಥಿತಿ ಖಂಡಿತವಾಗಿ ಬದಲಾಗುತ್ತದೆ. ಶಾಸ್ತ್ರೀಯ ನೃತ್ಯವನ್ನು ಪೂರ್ಣ ಪ್ರಮಾಣದ ವೃತ್ತಿಯಾಗಿ ಸ್ವೀಕರಿಸಿ ಗೆಲ್ಲುವ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ, ಜೊತೆಗೆ ಪೋಷಕರಲ್ಲಿ ಮೂಡಿಸಬೇಕು. ನೃತ್ಯವು ಕೇವಲ ಕಲಿಕೆಗೆ ಮಾತ್ರವಲ್ಲದೆ, ಪರೀಕ್ಷೆಯನ್ನು ನಡೆಸುವ ಮುಖಾಂತರ ಶೈಕ್ಷಣಿಕವಾಗಿಯೂ ವಿದ್ಯಾರ್ಥಿಗಳನ್ನು ರೂಪಿಸಬಲ್ಲದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಶಾಸ್ತ್ರೀಯ ನೃತ್ಯವು ಉದ್ಯೋಗಾವಕಾಶಗಳನ್ನು ವಿಶ್ವವಿದ್ಯಾನಿಲಯ ಮಟ್ಟದಲ್ಲಿ, ಪ್ರಾಥಮಿಕ-ಪ್ರೌಢಶಾಲೆಗಳಲ್ಲಿ, ಅಂತೆಯೇ ರೈಲ್ವೇ ಇಲಾಖೆಗಳಲ್ಲಿಯೂ ದೊರಕಿಸಬಲ್ಲದು ಎಂಬುದನ್ನು ತಿಳಿಸಿಕೊಡಬೇಕು. ಆಗ ಪೋಷಕರ ಮನಃಸ್ಥಿತಿಯಲ್ಲಿ ಖಂಡಿತವಾಗಿ ಬದಲಾವಣೆಗಳಾಗಬಹುದು.
ಇದಕ್ಕಾಗಿ ನೃತ್ಯ ಶಿಕ್ಷಕರು ಕೆಲವೊಂದು ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನೋ ಅಥವಾ ಎರಡೂ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಎಲ್ಲಾ ಪೋಷಕರಿಗೆ ಪರಿಚಯಿಸಿ ನೃತ್ಯದ ಬಗೆಗಿನ ಪೋಷಕರ ಧೋರಣೆಯನ್ನು ಬದಲಿಸಬೇಕಾದ ಅನಿವಾರ್ಯತೆ ಇದೆ.
- ವಿದ್ವಾನ್ ಮಂಜುನಾಥ ಎನ್ ಪುತ್ತೂರು