ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ಆರನೇ ವರ್ಷದ ಭ್ರಾಮರೀ ಯಕ್ಷವೈಭವ-2023 ಕಾರ್ಯಕ್ರಮ ದಿನಾಂಕ 12-08-2023ರಂದು ಜರಗಿತು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿಯವರು ಮಾತನಾಡುತ್ತಾ “ಯಕ್ಷಗಾನ ಕಲೆ ವಿರೂಪಗೊಳ್ಳಲು ಅವಕಾಶ ನೀಡಲೇಬಾರದು. ಇದಕ್ಕಾಗಿ ಕಲಾವಿದರು ಹಾಗೂ ಮೇಳದ ಯಜಮಾನರು ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ಬೇರೆಯವರನ್ನು ದೂರುವ ಬದಲು ನಾವೆಲ್ಲ ಸೇರಿ ವ್ಯವಸ್ಥೆಯನ್ನು ಸರಿ ಮಾಡಬೇಕಿದೆ. ಕಲೆಯನ್ನು ಒಳ್ಳೆಯದು ಮಾಡಲು ಎಲ್ಲರೂ ಜತೆಯಾಗಬೇಕು. ಕಲೆಗಳಲ್ಲಿ ಬೇಡದ್ದು ಬಂದರೆ ಅದು ಹೋಗುವುದಿಲ್ಲ. ಯಕ್ಷಗಾನಕ್ಕೆ ತನ್ನದೇ ಆದ ಘನತೆ ಇದೆ. ಹೊಸ ಪ್ರೇಕ್ಷಕರನ್ನು ತಲುಪುವ ಕಾರ್ಯ ನಡೆಯಬೇಕಿದೆ” ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, “ಯಕ್ಷಗಾನ ಸಹಿತ ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಆಯೋಜಿಸುವ ಎಲ್ಲಾ ಆಯಾಮದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕಿದೆ” ಎಂದು ಆಶಿಸಿದರು.
ಮೇಯರ್ ಜಯಾನಂದ ಅಂಚನ್ ಶುಭ ಹಾರೈಸಿದರು. ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮುಖ್ಯ ಅತಿಥಿಗಳಾಗಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೋಡಿ ಕೃಷ್ಣ (ಕುಷ್ಠ) ಗಾಣಿಗ ಅವರಿಗೆ ಹದಿನೈದು ಸಾವಿರ ನಗದು ಸಹಿತ ‘ಭ್ರಾಮರೀ ಯಕ್ಷಮಣಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ’ವನ್ನು ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ಮಂಗಳೂರು ಹಾಗೂ ಕಟೀಲು ಮೇಳದ ನೇಪಥ್ಯ ಕಲಾವಿದ ವಿಠಲ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಚೆಂಡೆ ಜುಗಲ್‌ಬಂದಿ, ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ‘ಶರಣ ಸೇವಾರತ್ನ’, ‘ರಾಣಿ ಶಶಿಪ್ರಭೆ’ ಮತ್ತು ‘ಶ್ರೀದೇವಿ ಕೌಶಿಕೆ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.
ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟಿನ ಸತೀಶ್ ಮಂಜೇಶ್ವರ ಸ್ವಾಗತಿಸಿ ಪ್ರಸ್ತಾವಿಸಿದರು. ವಿನಯಕೃಷ್ಣ ಕುರ್ನಾಡು ವಂದಿಸಿ, ಗುರುರಾಜ ಹೊಳ್ಳ ಬಾಯಾರು ನಿರೂಪಿಸಿದರು.