ವರ್ಷದ ಹಿಂದೆ ಮಂಗಳೂರಿನದೇ ಕಲಾಭೀ ರಂಗಸಂಸ್ಥೆ ವಿಶೇಷ ಮತ್ತು ಪುಟ್ಟ ರಂಗ ಮಂಚ ಹಾಗೂ ಮಂದಿರದಲ್ಲಿ ಪ್ರಯೋಗಿಸಿದ ಬುನ್ರಾಕು (ಜಪಾನೀ ಗೊಂಬೆಯಾಟ), ರಸಿಕ ವರ್ಗದಲ್ಲಿ ಆಶ್ಚರ್ಯದ ಬಹುದೊಡ್ಡ ಅಲೆಯನ್ನೇ ಎಬ್ಬಿಸಿತ್ತು. ಅದರ ನಿರ್ಮಾಣ ಮತ್ತು ನಿರ್ದೇಶಕ ಶ್ರವಣ್ ಹೆಗ್ಗೋಡು. ಇವರು ರಂಗಕಲೆಗಳಲ್ಲಿ ನೀನಾಸಂ ಪದವೀಧರ. ಅದರ ಮೇಲೆ, ದಿಲ್ಲಿಯಲ್ಲಿ ಕನಿಷ್ಠ ಆರು ವರ್ಷಗಳ ಕಾಲ ಅಕ್ಷರಶಃ ‘ಗುರುಸೇವೆ’ಯಂತೆ ಪರಿಶ್ರಮಿಸಿ, ಈ ಬುನ್ರಾಕನ್ನು ಗಳಿಸಿಕೊಂಡರು.
ಮೊದಲ ಮಂಗಳೂರ ಪ್ರದರ್ಶನಕ್ಕೂ ಮುನ್ನ ಇವರು ಬುನ್ರಾಕಿನೊಡನೆ, ಮೈಸೂರು ರಂಗಾಯಣ ಸೇರಿದಂತೆ ಕೆಲವು ತಂಡಗಳಲ್ಲೂ ಕೆಲವು ಪೂರ್ಣ ಪ್ರಮಾಣದ ಪ್ರಯೋಗಗಳನ್ನು ನಡೆಸಿದ್ದರು. ಆ ಅನುಭವಗಳ ಮೊತ್ತವೆಂಬಂತೆ, ಈ ಬಾರಿ ಪೂರ್ಣ ರಂಗಮಂಚವನ್ನು ಬಳಸುವ ನಾಟಕದೊಡನೆ ಬುನ್ರಾಕು ಬೆಸೆದು ಬಂದ ಪ್ರಯೋಗ – ಬೇಲಿಯಾಚಿನ ಗೆಳೆಯ (ಎ ಫ್ರೆಂಡ್ ಬಿಯಾಂಡ್ ದ ಫೆನ್ಸ್).
ಎರಡನೇ ಮಹಾಯುದ್ಧ ಕಾಲದ ಜರ್ಮನ್ ಕ್ರೌರ್ಯದ ಸತ್ಯಗಳಿಗೆ ಶ್ರವಣ್ ನಾಟಕದ ರೂಪ ಕೊಟ್ಟು, ನಿರ್ದೇಶನ ಮಾಡಿದ ಪ್ರಯೋಗ ಬೇಲಿಯಾಚಿನ ಗೆಳೆಯ. (ಇದಕ್ಕೆ ಪ್ರೇರಣೆ ಕೊಟ್ಟ ಕಾದಂಬರಿ, ಸಿನಿಮಾಗಳ ಉಲ್ಲೇಖ ಚರ್ಚಾಕಾಲದಲ್ಲಿ ಬಂದಿದೆ) ಯುದ್ಧ ಮನುಷ್ಯ ಸಂಕಟಗಳಿಗೆ ಸಮಸ್ಕಂದವಾಗಿ ಅನ್ಯ ಜೀವಜಗತ್ತನ್ನೂ ನರಳಿಸುವ ಪರಿಗೆ ಈ ನಾಟಕ ಬಹಳ ಪರಿಣಾಮಕಾರಿ ಅಭಿವ್ಯಕ್ತಿಯನ್ನು ಕೊಟ್ಟಿದೆ. ಕೊನೆಯ ದೃಶ್ಯದಲ್ಲಿ ಮುಗ್ಧ ಬಾಲಕನನ್ನು ಕಳೆದುಕೊಂಡ ಅಮ್ಮನೂ ಮುಗ್ಧ ಮರಿಯನ್ನು ಕಳೆದುಕೊಂಡ ತಾಯಿ ಆನೆಯೂ ಒಂದಾಗಿ ದುಃಖ ಹಂಚಿಕೊಳ್ಳುವ ದೃಶ್ಯಕ್ಕೆ ಹನಿಗಣ್ಣರಾಗದವರು ಇಲ್ಲ.
ನಾಟಕದಲ್ಲಿ ಆನೆ ಮತ್ತದರ ಮರಿಯನ್ನು ನೈಜ ಗಾತ್ರ ಮತ್ತು ಕ್ರಿಯಾ ವಿವರಗಳಲ್ಲಿ ಕಾಣಿಸುವಂತಾದ ಬುನ್ರಾಕು ತಂತ್ರಕ್ಕೆ ಮರುಳಾಗದವರಿಲ್ಲ. ಹಿಂದೆ ಪುಟ್ಟ ರಂಗದಲ್ಲಿ ಕಂಡ ಪುಟ್ಟ ಗೊಂಬೆ ಮತ್ತು ರಂಗ ಚಲನೆಗಳನ್ನೂ ಶಕ್ತ ಧ್ವನಿ ಮತ್ತು ಬೆಳಕಿನ ನಿಯಂತ್ರಣಗಳೊಂದಿಗೆ, ಕಥೆಗೆ ಪೂರಕವಾಗಿ ಬಳಸಿಕೊಂಡದ್ದು ತುಂಬ ಚೆನ್ನಾಗಿತ್ತು.
ಬುನ್ರಾಕು ಮತ್ತು ನಾಟಕ ಬೆಸುಗೆಗೆ ಸ್ಪಷ್ಟ ಸಾಕ್ಷಿಯಂತೆ ಮೂರು ಮಂದಿ ಸೇನಾ ದಿರಿಸಿನವರು ಸೂತ್ರಧಾರನ ಗೊಂಬೆಯಾಡಿಸಿದ್ದರು. ಈ ಸನ್ನಿವೇಶ “ಏಕಕಾಲಕ್ಕೆ ಸರ್ವಾಧಿಕಾರಿಯ ‘ಕರಾಳ ಹಸ್ತ’ದ ರೂಪಕವೂ ಆಗಿ ಕಾಣಿಸಿತು” ಎಂಬ ಮಾತು ಚರ್ಚಾಕಾಲದಲ್ಲೂ ಕೇಳಿಸಿತು. ಅದೇ ವೇದಿಕೆಯಲ್ಲಿ “ಆನೆಗಳೆರಡರ ರಚನೆ ಮತ್ತು ಕ್ರಿಯಾ ಸಾಧ್ಯತೆಗಳ ಕುರಿತು ನಾವಿನ್ನೂ ಶ್ರಮಿಸುವುದು ಬಾಕಿ ಉಳಿದಿದೆ” ಎಂಬ ಶ್ರವಣ್ ವಿನಯ, ಅವರಿನ್ನೂ ಏರಲಿರುವ ಎತ್ತರವನ್ನು ಸೂಚಿಸುತ್ತದೆ. ಶ್ರವಣ್, ಕಲಾಭಿಗೆ ಹಾರ್ದಿಕ ಶುಭಾಶಯಗಳು.
ಜಿ.ಎನ್.ಅಶೋಕವರ್ಧನ
ಸಾಹಿತಿ, ವಿಮರ್ಶಕ