ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಕ್) ಇದರ ಮಂಗಳೂರು ಅಧ್ಯಾಯ, ಆರ್ಟ್ ಕೆನರಾ ಟ್ರಸ್ಟ್ ಮತ್ತು ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಸಹಯೋಗದೊಂದಿಗೆ ‘ಎ ಮಾರ್ನಿಂಗ್ ವಿತ್ ಪಂಡಿತ್ ರವಿಕಿರಣ್ ಮಣಿಪಾಲ್’ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಗೋಷ್ಠಿಯು ದಿನಾಂಕ 03-09-2023ರ ಭಾನುವಾರ ಬೆಳಿಗ್ಗೆ ನಗರದ ಕೊಡಿಯಲ್‌ಗುತ್ತು ಪಶ್ಚಿಮದಲ್ಲಿರುವ ಕೊಡಿಯಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು.
ಪಂಡಿತ್ ರವಿಕಿರಣ್ ಮಣಿಪಾಲ್ ಅವರು ಮಂಗಳೂರು ಆಕಾಶವಾಣಿಯ ಪ್ರಥಮ ದರ್ಜೆ ಕಲಾವಿದರಾಗಿರುವರು. ಇವರು ಆಗ್ರಾ ಗ್ವಾಲಿಯರ್ ಘರಾನಾದ ಪ್ರಸಿದ್ಧ ಗುರುಗಳಾದ ಉಡುಪಿಯ ಪಂಡಿತ್ ಮಾಧವ ಭಟ್ ಅವರಲ್ಲಿ ತಮ್ಮ ಆರಂಭಿಕ ತರಬೇತಿಯನ್ನು ಪಡೆದು ನಂತರ ನಾರಾಯಣ ಪಂಡಿತ್ ಅವರಲ್ಲಿ ತಮ್ಮ ವ್ಯಾಸಂಗ ಮುಂದುವರೆಸಿದರು. ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯದಿಂದ ‘ಸಂಗೀತ ಅಲಂಕಾರ’ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ‘ವಿದ್ವತ್’ ಪದವಿ ಪಡೆದಿರುವ ಇವರು ಭಾರತದ ಅನೇಕ ಪ್ರತಿಷ್ಠಿತ ಸಂಗೀತ ಉತ್ಸವಗಳಲ್ಲಿ ಪ್ರದರ್ಶನ ನೀಡಿರುವುದು ಮಾತ್ರವಲ್ಲದೆ ಗಲ್ಫ್ ದೇಶಗಳು, ಮಲೇಷ್ಯಾ ಮತ್ತು ಸಿಂಗಾಪುರಗಳಲ್ಲೂ ಪ್ರದರ್ಶನ ನೀಡಿದ್ದಾರೆ.
ಈ ಬೈಠಕ್ ಬೆಳಗಿನ ರಾಗಗಳ ನಿರಂತರ ಸುರಿಮಳೆಯಾಗಿತ್ತು. ಈ ಕಛೇರಿಯು ನಟ್ ಭೈರವಿಯಲ್ಲಿ ಮೂರು ಸಂಯೋಜನೆಗಳು ಮತ್ತು ಜಯಂತ್ ಮಲ್ಹಾರ್ ನ ಎರಡು ಸಂಯೋಜನೆಗಳು ಮತ್ತು ಇವುಗಳ ಸುಂದರ ನಿರೂಪಣೆಯೊಂದಿಗೆ ಪ್ರಾರಂಭವಾಯಿತು ಮತ್ತು ರಾಗ್ ಪಿಲುನಲ್ಲಿ ಹಿತವಾದ ತುಮ್ರಿಯೊಂದಿಗೆ ಮುಕ್ತಾಯವಾಯಿತು. ಇದು ಇಂಟಾಕ್ ಮಂಗಳೂರು ಆಯೋಜಿಸಿರುವ ಮ್ಯೂಸಿಕಲ್ ಹೆರಿಟೇಜ್ ಆಫ್ ಕರ್ನಾಟಕ ಸರಣಿಯಡಿಯಲ್ಲಿ ಕೊಡಿಯಾಲ್ ಗುತ್ತುವಿನಲ್ಲಿ ನಡೆದ ಐದನೇ ಬೈಠಕ್ ಕಾರ್ಯಕ್ರಮವಾಗಿದೆ. ಈ ಪಾರಂಪರಿಕ ಮನೆಯ ಒಳ ವಿನ್ಯಾಸವು ಶಾಸ್ತ್ರೀಯ ಸಂಗೀತದ ಅನುಭವಕ್ಕಾಗಿ ಪರಿಪೂರ್ಣ ವಾತಾವರಣವನ್ನು ಒದಗಿಸಿತು.
ಈ ಕಾರ್ಯಕ್ರಮದಲ್ಲಿ ಪಂಡಿತ್ ರವಿಕಿರಣ್ ಮಣಿಪಾಲ್ ಅವರೊಂದಿಗೆ ಸಹಕಲಾವಿದರಾಗಿ ತಬಲಾದಲ್ಲಿ ಭಾರವಿ ದೇರಾಜೆ, ಹಾರ್ಮೋನಿಯಂನಲ್ಲಿ ಶಶಿಕಿರಣ್ ಮಣಿಪಾಲ, ತಾನ್ಪುರದಲ್ಲಿ ಡಾ.ದಾಮೋದರ್ ಹೆಗ್ಡೆ ಸಹಕರಿಸಿದರು.
ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಸ್ ಚಂದ್ರ ಬಸು ಸ್ವಾಗತಿಸಿ ಬೈಠಕ್‌ಗೆ ಚಾಲನೆ ನೀಡಿದರು. ಶರ್ವಾಣಿ ಭಟ್ ಕಲಾವಿದರನ್ನು ಪರಿಚಯಿಸಿದರು. ಚಿರಂತನ ಚಾರಿಟೇಬಲ್ ಟ್ರಸ್ಟಿನ ಮೈಥಿಲಿ ವಂದಿಸಿದರು. ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.