ಮಂಗಳೂರು : ಮಂಗಳೂರಿನ ಬೋಳೂರಿನಲ್ಲಿರುವ ಶ್ರೀ ಅಮೃತಾನಂದಮಯಿ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ 26 ಆಗಸ್ಟ್ 2024ರಂದು ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರ ಶ್ರೀಕೃಷ್ಣನ ಕುರಿತ ವಿಶೇಷ ಭರತನಾಟ್ಯ ಕಾರ್ಯಕ್ರಮ ಜನಮನ ರಂಜಿಸಿತು.
‘ಶ್ರೀಕೃಷ್ಣ ಲೀಲಾತರಂಗಿಣಿ’ಯಿಂದ ಆಯ್ದ ‘ದಿವ್ಯ ಗೋವೃಂದಗಳು’ ಎಂಬ ಭಾಗವನ್ನು ತನ್ನ ನೃತ್ಯಪ್ರಸ್ತುತಿಗೆ ಅಯನಾ ಪೆರ್ಲ ಆಯ್ದುಕೊಂಡಿದ್ದರು. ಶ್ರೀಕೃಷ್ಣನಿಗೆ ಗೋವುಗಳೊಂದಿಗೆ ಇರುವ ಸಂಬಂಧ, ಒಡನಾಟ ಮತ್ತು ಆ ಮೂಲಕ ಗೋಪಿಕಾ ಸ್ತ್ರೀಯರ ಗೆಳೆತನ ಮೊದಲಾದ ಭಾಗವನ್ನು ವಿವಿಧ ನೃತ್ತಭಂಗಿ, ಲಾಸ್ಯಭರಿತ ನೃತ್ಯ ಹಾಗೂ ಭಾವಪೂರ್ಣ ಅಭಿನಯಗಳೊಂದಿಗೆ ಅಯನಾ ಪೆರ್ಲ ಮನೋಜ್ಞವಾಗಿ ಪ್ರಸ್ತುತಪಡಿಸಿದರು. ರಾಗಮಾಲಿಕೆ, ತಾಳಮಾಲಿಕೆಯಲ್ಲಿರುವ ಈ ರಚನೆಗೆ ಖ್ಯಾತ ಅಭಿನೇತ್ರಿ ದೆಹಲಿಯ ವಿದುಷಿ ರಮಾ ವೈದ್ಯನಾಥನ್ ನೃತ್ಯಸಂಯೋಜನೆ ಮಾಡಿದ್ದಾರೆ.
ಅನಂತರ ಅಯನಾ ಇವರು ದಾಸರ ಪದ ‘ಕಡೆಗೋಲ ತಾರೆನ್ನ ಚಿಣ್ಣವೇ’ ಎಂಬುದನ್ನು ಭಾವಪೂರ್ಣವಾಗಿ ಅಭಿನಯಿಸಿದರು. ಯಶೋದೆ ಮತ್ತು ಕೃಷ್ಣನ ನಡುವಿನ ಪ್ರೀತಿಯ ಆಟ – ಜಗಳ, ಆಕೆಯ ವಾತ್ಸಲ್ಯ ಮತ್ತು ಪ್ರೇಮಗಳು ತುಂಬಿ ತುಳುಕುವ ಈ ಹಾಡಿನ ಅಭಿನಯವು ಸುಂದರವಾಗಿ ಮೂಡಿ ಬಂತು. ವಿದ್ವಾನ್ ಪ್ರವೀಣ್ ಕುಮಾರ್ ಇದಕ್ಕೆ ನೃತ್ಯಸಂಯೋಜನೆ ಮಾಡಿದ್ದಾರೆ. ಒಟ್ಟಿನಲ್ಲಿ ಕೃಷ್ಣರೂಪಕಗಳಿಂದ ಜನ್ಮಾಷ್ಟಮಿಯು ಸರ್ವಂ ಕೃಷ್ಣಮಯವಾಗಿ ಪರಿಣಮಿಸಿತು.
ಭಾವ, ಭಾಷೆ, ನೃತ್ತ, ನೃತ್ಯಗಳು ಒಟ್ಟಾಗಿ ತನ್ನ ಪ್ರಬುದ್ಧ ಅಭಿನಯದಿಂದ ಕಲಾಪ್ರಸ್ತುತಿ ನೀಡುತ್ತಿರುವ ವಿದುಷಿ ಅಯನಾ ಪೆರ್ಲ ಇವರು ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರದರ್ಶನ ನೀಡಿ ಹೆಸರಾಗಿದ್ದಾರೆ. ದೂರದರ್ಶನದ ಗ್ರೇಡೆಡ್ ಕಲಾವಿದೆಯಾಗಿರುವ ಇವರು ಕರಾವಳಿ ಪ್ರದೇಶದ ಹೆಮ್ಮೆಯ ಕಲಾವಿದೆಯಾಗಿ ಮೂಡಿ ನಿಂತಿದ್ದಾರೆ.
ಅನೀಶ್ ಕೃಷ್ಣ ಹವ್ಯಾಸಿ ಬರಹಗಾರರು