ಮಡಿಕೇರಿ : ಕರ್ನಾಟಕ ಜಾನಪದ ಅಕಾಡೆಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ‘ಕೊಡಗು ಜಾನಪದ ಬೆಡಗು – ಜಾನಪದ ನಡೆ ವಿದ್ಯಾರ್ಥಿಗಳ ಕಡೆ’ ಎನ್ನುವ ವಿಶಿಷ್ಟ ಕಾರ್ಯಕ್ರಮವು ದಿನಾಂಕ 24 ಫೆಬ್ರವರಿ 2025ರಂದು ಕಾಲೇಜು ಸಭಾಂಗಣದಲ್ಲಿ ಸಂಪನ್ನಗೊಂಡಿತು.
ಈ ಕಾರ್ಯಕ್ರಮವನ್ನು ದುಡಿಯನ್ನು ನುಡಿಸಿ ಉದ್ಘಾಟಿಸಿದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರನಾದ್ ಇವರು ಮಾತನಾಡಿ “ನಾಡಿನ ಮೂಲ ಜನಪದ ಸಂಸ್ಕೃತಿ, ಆಚಾರ ವಿಚಾರ, ಪರಂಪರೆಗಳು ಸಮಾಜವನ್ನು ಕಟ್ಟುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇಂತಹ ಜಾನಪದ ಕಲೆಯ ಸತ್ಯವನ್ನು ಯುವ ಪೀಳಿಗೆ ಒಳಗಣ್ಣಿನ ಮೂಲಕ ಅರಿತುಕೊಂಡು ಮುಂದಿನ ಭವಿಷ್ಯವನ್ನು ರೂಪಿಸಬೇಕು. ದಕ್ಷತೆ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವಗಳಿಂದ ಪುಟ್ಟ ‘ಕೊಡಗು’ ಅತ್ಯಂತ ವಿಶೇಷವಾಗಿ ಕಾಣುತ್ತದೆ. ಅನುಮಾನಗಳೇ ತುಂಬಿರುವ ಸಮಾಜದಲ್ಲಿ ನೆಲ, ಜಲ, ಗಾಳಿ ವಿಷಯುಕ್ತವಾಗುತ್ತಿದೆ. ಅಭಿವೃದ್ಧಿ ಎನ್ನುವುದು ಎಂದಿಗೂ ಅವಸಾನಕ್ಕೆ ಕಾರಣವಾಗಬಾರದು. ಕಟ್ಟಲು ಸಾವಿರ ಕೈ…ಮುರಿಯಲು ಒಂದು ಕೈ ಸಾಕು’ ಎನ್ನುವ ನಾಣ್ಣುಡಿಯಂತೆ ವಿದ್ಯಾರ್ಥಿಗಳು ಸಮಾಜವನ್ನು ಕಟ್ಟುವ ಕೈಗಳಾಗಬೇಕು. ಯುವ ಸಮೂಹಕ್ಕೆ ಜನಪದವನ್ನು ತಲುಪಿಸುವ ಉದ್ದೇಶದಿಂದ ಅಕಾಡೆಮಿ ರಾಜ್ಯದಾದ್ಯಂತ ‘ಜಾನಪದ ನಡೆ ವಿದ್ಯಾರ್ಥಿಗಳ ಕಡೆ’ ಕಾರ್ಯಕ್ರಮ ರೂಪಿಸಿದೆ. ಮುಂಬರುವ ದಿನಗಳಲ್ಲಿ ‘ಜನಪದ ನಡೆ ಹಟ್ಟಿ ಹಾಡಿಗಳ ಕಡೆ’ ಕಾರ್ಯಕ್ರಮ ರೂಪಿಸಲಾಗುತ್ತದೆ” ಎಂದು ತಿಳಿಸಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಜಾನಪದ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಮೈಸೂರು ಉಮೇಶ್ ಮಾತನಾಡಿ, “ರಾಷ್ಟ್ರದ ಪ್ರಗತಿಯ ಪಥವನ್ನು ಗಮನಿಸಿದಾಗ ನಾವಿಂದು ಬಹು ಸಂಸ್ಕೃತಿಯನ್ನು ತೊಡೆದು ಏಕ ಸಂಸ್ಕೃತಿಯತ್ತ ಸಾಗುತ್ತಿರುವುದು ಗೋಚರಿಸುತ್ತದೆ. ಬಹುಸಂಸ್ಕೃತಿಯ ನಾಡಿನಲ್ಲಿ ‘ಜಾನಪದ’ವೆನ್ನುವುದು ಬಹುತ್ವವನ್ನು ಪ್ರತಿಬಿಂಬಿಸುತ್ತದೆ. ಈ ಹಿನ್ನೆಲೆ ಬಹುತ್ವದ ನೆಲೆಯನ್ನು ಜನಪದದ ಮೂಲಕ ಅರ್ಥೈಸುವ ಪ್ರಯತ್ನ ನಡೆಸಲಾಗುತ್ತಿದೆ. ಯುವ ಸಮೂಹ ಜನಪದದ ಆಶಯಗಳನ್ನು ಕೈಗೆತ್ತಿಕೊಂಡು, ಅದೆಂದಿಗೂ ಮುಕ್ಕಾಗದಂತೆ ಸಂರಕ್ಷಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು” ಎನ್ನುವ ಆಶಯ ವ್ಯಕ್ತಪಡಿಸಿದರು.
ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮೃತ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಅಕಾಡೆಮಿ ರಾಜ್ಯದ ವಿವಿಧೆಡೆ ಜನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಜನಪದವನ್ನು ಅಪ್ಪಿಕೊಳ್ಳುವ ಮೂಲಕ ನಾಡಿನ ಸಂಸ್ಕೃತಿಯ ನಿಜ ರಾಯಭಾರಿಗಳಾಗಲೆಂದು ಹಾರೈಸಿದರು. ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಅಂಬೆಕಲ್ ನವೀನ್ ಮಾತನಾಡಿ, “ಸ್ಥಳೀಯ ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳಿಗೆ ಈ ಶಾಲೆ ಸಾಕಷ್ಟು ಒತ್ತು ನೀಡುತ್ತಲೇ ಬಂದಿದೆ. ಇಂತಹ ಕಾರ್ಯಕ್ರಮ ನಾಡಿನಾದ್ಯಂತ ನಡೆಯುವ ಮೂಲಕ ಜನಪದ ಸಂಸ್ಕೃತಿ ಪಸರಿಸಲಿ” ಎಂದರು.
ಐಕ್ಯೂಎಸಿಯ ಸಂಚಾಲಕರಾದ ಡಾ. ನಿರ್ಮಲ ಕೆ.ಡಿ. ಮಾತನಾಡಿ, ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ತಲೆಮಾರುಗಳಿಂದ ಹರಿದು ಬಂದ ಅತ್ಯಂತ ಶ್ರೀಮಂತ ಜನಪದ ಸಂಸ್ಕೃತಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅಸಕ್ತಿ ಕಡಿಮೆಯಾಗುತ್ತಿದೆ. ಈ ಕಾರಣದಿಂದ ಜಾನಪದ ಅಕಾಡೆಮಿಯ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು.
ವಿಚಾರಗೋಷ್ಠಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಕಾವೇರಿ ಪ್ರಕಾಶ್ ಅವರು ‘ಕೊಡಗಿನ ಸಾಂಪ್ರದಾಯಿಕ ಉಟೋಪಚಾರಗಳು’ ವಿಷಯದ ಕುರಿತು ಮತ್ತು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾದ ಕುಡಿಯರ ಮುತ್ತಪ್ಪ ಅವರು, ‘ಬುಡಕಟ್ಟು ಸಂಸ್ಕೃತಿಯಲ್ಲಿ ಕುಡಿಯರು’ ವಿಷಯದ ಕುರಿತು ವಿಚಾರ ಮಂಡಿಸಿದರು. ಕಾಲೇಜಿನ ಪ್ರಬಾರ ಪ್ರಾಂಶುಪಾಲರಾದ ವಸಂತ ಕುಮಾರಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕಡ್ಲೇರ ತುಳಸಿ ಮೋಹನ್ ತಂಡದಿಂದ ‘ಸುಗ್ಗಿ ಕುಣಿತ’, ವಿಷ್ಣು ಪ್ರಿಯ ಮತ್ತು ತಂಡದಿಂದ ‘ಕೊಡವ ಜಾನಪದ ನೃತ್ಯ’, ಕುಡಿಯರ ಮುತ್ತಪ್ಪ ತಂಡದಿಂದ ‘ದುಡಿಕೊಟ್ಸ್ ಪಾಟ್’ ಪ್ರದರ್ಶನಗೊಂಡಿತು.