ಚನ್ನರಾಯಪಟ್ಟಣ : ಸಾಮಾನ್ಯವಾಗಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ವೇದಿಕೆಯ ಕಾರ್ಯಕ್ರಮ, ನಾಟಕ ಮಾಡುವುದು, ರಂಗಭೂಮಿ ಕುರಿತು ಉಪನ್ಯಾಸ ಹೀಗೆ ಕಾರ್ಯಕ್ರಮ ಸಂಯೋಜನೆ ವಾಡಿಕೆ. ಆದರೆ ನಮ್ಮ ರಂಗ ಲೋಕದಲ್ಲಿ ದಿನಾಂಕ 27 ಮಾರ್ಚ್ 2025ರಂದು ಈ ಬಾರಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿದೆವು.
ವೇದಿಕೆಯ ಮೇಲೆ ನಾಟಕಗಳಿಗೆ ತಯಾರಿಸಿದ ರಂಗ ಪರಿಕರಗಳು, ವಸ್ತ್ರಗಳು ಒಂದು ಕಡೆ, ಮತ್ತೊಂದು ಕಡೆ ನಮ್ಮ ಪೌರಾಣಿಕ ಸಮವಸ್ತ್ರಗಳು, ರಂಗ ಪರಿಕರಗಳನ್ನು ಪ್ರದರ್ಶನಕ್ಕಿಟ್ಟಿದ್ದು, ನಂತರ ಎಲ್ಲಾ ಕಲಾವಿದರು ಒಂದು ಪಾತ್ರಾಭಿನಯ ಆಯ್ಕೆ ಮಾಡಿಕೊಂಡು, ಎರಡೂ ವಿಭಾಗದ ಸಮವಸ್ತ್ರಗಳು, ರಂಗ ಪರಿಕರಗಳನ್ನು ಆಯ್ಕೆ ಮಾಡಿ ಪ್ರದರ್ಶಿಸುವುದು. ಪ್ರದರ್ಶನ ನೀಡಿದ ಒಂದು ಪಾತ್ರ ಎರಡೂ ವಿಭಾಗದ ಸಮವಸ್ತ್ರಗಳಿಂದ ತಮಗೆ ಆದ ಅನುಭವ ಏನು ಎಂಬುದರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳಬೇಕು ಎಂಬುದು ಕಾರ್ಯಕ್ರಮದ ಉದ್ದೇಶ. ಎಲ್ಲಾ ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅಭಿನಯದಲ್ಲಿ ಒಂದು ವಸ್ತ್ರವಿನ್ಯಾಸ ಹೇಗೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ, ಜೊತೆಗೆ ಕಲಾವಿದನ ಮೇಲೆ ಹೇಗೆ ಪ್ರಭಾವ ಬೀರುತ್ತದೆ, ಪ್ರೇಕ್ಷಕರ ಮೇಲೆ ಒಂದು ಸಮವಸ್ತ್ರವು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನ ಕಲಾವಿದರಿಗೆ ಮನವರಿಕೆ ಮಾಡಿಕೊಡುವ ಉದ್ದೇಶ ನಮ್ಮದಾಗಿತ್ತು. ಒಂದು ಬೇಸರದ ಸಂಗತಿ ಎಂದರೆ ಈ ಕಾರ್ಯಕ್ರಮದಲ್ಲಿ ನಮ್ಮ ಮಕ್ಕಳು ಭಾಗಿಯಾಗಲಿಲ್ಲ. ಪರೀಕ್ಷೆಗಳು ಇದ್ದ ಕಾರಣ ಈ ಕಾರ್ಯಕ್ರಮದಲ್ಲಿ ಅವರ ಅನುಪಸ್ಥಿತಿ ಎದ್ದುಕಾಣುತಿತ್ತು. ಮಕ್ಕಳ ಕಲರವವೇ ಹೆಚ್ಚಿದ್ದ ನಮ್ಮ ರಂಗ ಲೋಕದಲ್ಲಿ ಅದು ಕಾಣಲಿಲ್ಲ.
ಇದರ ಜೊತೆಗೆ ರಂಗ ಆಟಗಳು, ಗೆದ್ದವರಿಗೆ ಬಹುಮಾನ ಹೀಗೆ ವಿಶಿಷ್ಟವಾಗಿ ಕಾರ್ಯಕ್ರಮ ಜರುಗಿತು. ಈ ವಿಶಿಷ್ಠವಾದ ಕಾರ್ಯಕ್ರಮಕ್ಕೆ ನಮ್ಮ ಮೈಸೂರು ಆಕಾಶವಾಣಿಯ ಕೃಷಿ ವಿಭಾಗದ ಮುಖ್ಯಸ್ಥರಾದ ಕೇಶವ ಮೂರ್ತಿಯವರು ಚಾಲನೆ ನೀಡಿದರು. ಜೊತೆಗೆ ಆಕಾಶವಾಣಿಯಲ್ಲಿ ನಾಟಕಗಳು ಹೇಗೆ ಪ್ರಸಾರವಾಗುತ್ತವೆ, ಅದರ ತಯಾರಿಗಳು ಹೇಗಿರುತ್ತವೆ, ಅಲ್ಲಿ ಅಭಿನಯ, ಸಮವಸ್ತ್ರಗಳು ಯಾವುದು ಉಪಯೋಗಕ್ಕೆ ಬರುವುದಿಲ್ಲ, ಕೇವಲ ಮಾತಿಗೆ ಮಾತ್ರ ಅವಕಾಶ, ಧ್ವನಿ ಪರೀಕ್ಷೆ ಹೇಗೆ ಮಾಡಲಾಗುತ್ತದೆ, ಆಕಾಶವಾಣಿಯಲ್ಲಿ ಪ್ರಸಾರ ಮಾಡುವ ನಾಟಕಗಳನ್ನು ಹೇಗೆ ಭಾಷಾಂತರ ಮಾಡುತ್ತಾರೆ ಎಂಬುದನ್ನ ನಮ್ಮ ಕಲಾವಿದರಿಗೆ ವಿವರವಾಗಿ ಮನವರಿಕೆ ಮಾಡಿದರು. ಮತ್ತೊಮ್ಮೆ ಎಲ್ಲರಿಗೂ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳೊಂದಿಗೆ ಸಹಕರಿಸಿದ ಎಲ್ಲಾ ಸಹೃದಯರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಲಾಯಿತು.
ಉಮೇಶ್ ತೆಂಕನಹಳ್ಳಿ
ಅಧ್ಯಕ್ಷರು ಪ್ರತಿಮಾ ಟ್ರಸ್ಟ್ ಚನ್ನರಾಯಪಟ್ಟಣ