ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿದ್ಯಾರಣ್ಯ ಪ್ರತಿಷ್ಠಾನ ಸ್ಥಾಪಿಸಿರುವ ವಿದ್ಯಾರಣ್ಯ ಸಮಗ್ರ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ವಿದ್ವಾಂಸ ಪ್ರೊ. ಅ. ರಾ. ಮಿತ್ರ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನ ಮತ್ತು ಗೌರವದಿಂದ ವಿದ್ಯಾರಣ್ಯ ಪ್ರತಿಷ್ಠಾನವು ಇಪ್ಪತ್ತು ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ದತ್ತಿಯನ್ನು ಇರಿಸಿದ್ದು, ಇದರಿಂದ ನಾಡು ನುಡಿಗೆ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸ ಬೇಕೆಂದು ತಿಳಿಸಿರುತ್ತಾರೆ. ಅ.ನ. ಕೃಷ್ಣರಾಯರ ಸ್ಮಾರಕ ನೀಡಲಾಗುವ ‘ವಿದ್ಯಾರಣ್ಯ ಸಮಗ್ರ ಸಾಹಿತ್ಯ ಪ್ರಶಸ್ತಿ’, ಕೆ. ಎಸ್. ನರಸಿಂಹ ಸ್ವಾಮಿ ಸ್ಮಾರಕ ನೀಡಲಾಗುವ ‘ವಿದ್ಯಾರಣ್ಯ ಕನ್ನಡ ಕಾವ್ಯ ಪ್ರಶಸ್ತಿ’, ಪ್ರೊ. ಜಿ. ವೆಂಕಟಸುಬ್ಬಯ್ಯ ಸ್ಮಾರಕ ನೀಡಲಾಗುವ ‘ವಿದ್ಯಾರಣ್ಯ ಕನ್ನಡ ಭಾಷಾ ಪ್ರಶಸ್ತಿ’, ಹಾರನಹಳ್ಳಿ ಸ್ಮಾರಕ ನೀಡಲಾಗುವ ‘ವಿದ್ಯಾರಣ್ಯ ಕನ್ನಡ ಆಡಳಿತ ಪ್ರಶಸ್ತಿ’, ಟಿ.’ಎಸ್.’ರಾಮಚಂದ್ರ ರಾವ್ ಸ್ಮಾರಕ ನೀಡಲಾಗುವ ‘ವಿದ್ಯಾರಣ್ಯ ಕನ್ನಡ ಪತ್ರಿಕೋದ್ಯಮ ಪ್ರಶಸ್ತಿ’ ಇವುಗಳನ್ನು ಆವರ್ತವಾಗಿ ನೀಡಬೇಕೆಂದು ದತ್ತಿದಾನಿಗಳು ಅಪೇಕ್ಷಿಸಿರುತ್ತಾರೆ.
ವಿದ್ಯಾರಣ್ಯ ಪ್ರತಿಷ್ಠಾನ ಪುರಸ್ಕಾರದ ಆವರ್ತವು ‘ಅ. ನ. ಕೃಷ್ಣರಾಯರ ಸ್ಮಾರಕ ‘ವಿದ್ಯಾರಣ್ಯ ಸಮಗ್ರ ಸಾಹಿತ್ಯ ಪ್ರಶಸ್ತಿ’ ಯಿಂದ ಆರಂಭವಾಗಿದ್ದು 2025ನೆಯ ಸಾಲಿನ ಈ ಪುರಸ್ಕಾರಕ್ಕೆ ಹಿರಿಯ ವಿದ್ವಾಂಸ, ಪ್ರಾಧ್ಯಾಪಕ, ಚಿಂತಕ, ವಿಮರ್ಶಕ, ಮಾತುಗಾರ, ಸಜ್ಜನ ಪ್ರೊ. ಅ. ರಾ. ಮಿತ್ರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಕುಮಾರ ವ್ಯಾಸ ಭಾರತದ ವ್ಯಾಖ್ಯಾನ, ಹಾಸ್ಯೋತ್ಸವಗಳ ಮೂಲಕ ಕರ್ನಾಟಕದ ಮನೆ ಮನೆಯಲ್ಲಿಯೂ ಹೆಸರಾಗಿರುವ ಮಿತ್ರ ಅವರಿಗೆ ಈಗ ತೊಂಬತ್ತು ವರ್ಷ. ಇಂದಿಗೂ ಎಲ್ಲರಲ್ಲಿಯೂ ಉತ್ಸಾಹ ತುಂಬುವ ಅವರು ಚಿರಯುವಕರು. ಅವರ ‘ಛಂದೋಮಿತ್ರ’ ಸುಲಭವಾಗಿ ಎಲ್ಲರೂ ಕನ್ನಡ ಛಂದಸ್ಸನ್ನು ಅರಿಯಲು ನೆರವಾಯಿತು. ಪ್ರಾಚೀನ ಕಾವ್ಯಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಪ್ರೊ. ಅ .ರಾ. ಮಿತ್ರರು ‘ಪಂಪ ಭಾರತ ಸಂಗ್ರಹ’ ಮತ್ತು ‘ಅಜಿತನಾಥ ಪುರಾಣ’ವನ್ನು ಸಂಪಾದಿಸಿದ್ದಾರೆ. ‘ಮಹಾ ಭಾರತದ ಪಾತ್ರ ಸಂಗತಿಗಳು’ ಅವರ ಇನ್ನೊಂದು ಮಹತ್ವದ ಕೃತಿ. ‘ನಾನೇಕೆ ಕೊರೆಯುತ್ತೇನೆ’ ಹಾಗೂ ‘ಆರತಕ್ಷತೆ’ ಅವರ ಸಮಗ್ರ ಪ್ರಬಂಧಗಳ ಎರಡು ಸಂಪುಟಗಳು. ವಿಮರ್ಶೆ, ಅನುವಾದ ಕ್ಷೇತ್ರಗಳಲ್ಲಿಯೂ ಮಹತ್ವದ ಕೃತಿಗಳನ್ನು ಪ್ರಕಟಿಸಿರುವ ಪ್ರೊ. ಅ. ರಾ. ಮಿತ್ರ ಸಾಹಿತ್ಯದ ಎಲ್ಲಾ ಕ್ಷೇತ್ರಗಳಿಗೂ ಗಣನೀಯ ಕೊಡುಗೆಗಳನ್ನು ನೀಡಿದವರು. ಕನ್ನಡ ಸಾಹಿತ್ಯ ಪರಿಷತ್ತಿನ ‘ಸಂಕ್ಷಿಪ್ತ ಕನ್ನಡ –ಕನ್ನಡ ನಿಘಂಟು’ ರೂಪುಗೊಳ್ಳುವುದರಲ್ಲಿಯೂ ಅವರು ಮುಖ್ಯ ಪಾತ್ರವನ್ನು ವಹಿಸಿದ್ದರು.
ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ಸೇರಿದ್ದ ಆಯ್ಕೆ ಸಮಿತಿಯು ಪಾರದರ್ಶಕವಾಗಿ ಮತ್ತು ಕೂಲಂಕುಶವಾಗಿ ಪರಿಶೀಲಿಸಿ ಈ ಪುರಸ್ಕಾರದ ಮೊದಲಿಗರಾಗಿ ಪ್ರೊ. ಅ. ರಾ. ಮಿತ್ರ ಅವರನ್ನು ಆಯ್ಕೆ ಮಾಡಿದೆ. ಆಯ್ಕೆ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಗಳಾದ ನೇ. ಭ. ಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಮತ್ತು ದತ್ತಿದಾನಿಗಳ ಪರವಾಗಿ ಸತ್ಯನಾರಾಯಣ ಮತ್ತು ವಿಷಯತಜ್ಞರಾಗಿ ಡಾ.ಎಸ್.ಎಲ್.ಶ್ರೀನಿವಾಸ ಮೂರ್ತಿ ಮತ್ತು ಡಾ.ವರದಾ ಶ್ರೀನಿವಾಸ್ ಹಾಜರಿದ್ದರು.
Subscribe to Updates
Get the latest creative news from FooBar about art, design and business.
ಅ. ನ. ಕೃಷ್ಣರಾಯರ ಸ್ಮಾರಕ ‘ವಿದ್ಯಾರಣ್ಯ ಸಮಗ್ರ ಸಾಹಿತ್ಯ ಪ್ರಶಸ್ತಿ’ಗೆ ವಿದ್ವಾಂಸ ಪ್ರೊ. ಅ. ರಾ. ಮಿತ್ರ ಆಯ್ಕೆ
No Comments2 Mins Read
Previous Articleಪುತ್ತೂರಿನ ಸರ್ವೆ ಬಳಿಯ ಮೇಗಿನಗುತ್ತು ಮನೆಯಲ್ಲಿ ತಾಳಮದ್ದಲೆ
Next Article ‘ಅನ್ವೇಷಣೆ ರಾಷ್ಟ್ರ ಪ್ರಶಸ್ತಿ’ಗೆ ಅರ್ಜಿ ಆಹ್ವಾನ