ತೀರ್ಥಹಳ್ಳಿ : ನಟಮಿತ್ರರು ಹವ್ಯಾಸಿ ಕಲಾ ತಂಡದ ಆಶ್ರಯದಲ್ಲಿ ನಟಮಿತ್ರರು ತಂಡದ ಹಿರಿಯ ಕಿರಿಯ ಕಲಾವಿದರ ಸಮ್ಮಿಲನದಲ್ಲಿ ತೀರ್ಥಹಳ್ಳಿಯ ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ದಿನಾಂಕ 24 ಮತ್ತು 25 ಆಗಸ್ಟ್ 2025ರಂದು ಸಂಜೆ 6-30 ಗಂಟೆಗೆ ‘ಆ ಊರು ಈ ಊರು’ ಎನ್ನುವ ವಿಭಿನ್ನ ಶೈಲಿಯ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ್ ಜವಳಿಯವರು ತಿಳಿಸಿದ್ದಾರೆ.
ದಿನಾಂಕ 20 ಆಗಸ್ಟ್ 2025ರಂದು ಗೋಪಾಲಗೌಡ ರಂಗ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ನಾಟಕದ ಪೋಸ್ಟರ್ ಗಳನ್ನು ಸಹ ಕಲಾವಿದರುಗಳ ಜೊತೆಗೂಡಿ ಬಿಡುಗಡೆಗೊಳಿಸಿ ಮಾತನಾಡಿದ ಸಂದೇಶ್ ಜವಳಿ “ಈ ನಾಟಕದ ರಚನೆಯನ್ನು ಡಾ. ಜಿ.ಬಿ. ಜೋಷಿ (ಜಡಭರತ)ಯವರು ಮಾಡಿದ್ದು, ನಾಡಿನ ಖ್ಯಾತ ರಂಗಕರ್ಮಿಗಳಲ್ಲಿ ಒಬ್ಬರಾಗಿರುವ ಹುಲಗಪ್ಪ ಕಟ್ಟೀಮನಿಯವರು ವಿನ್ಯಾಸ ಮತ್ತು ನಿರ್ದೇಶನ ಮಾಡಲಿದ್ದಾರೆ. ಶಿವಕುಮಾರ್ ಟಿ.ಆರ್. ಇವರ ಸಹ ನಿರ್ದೇಶನ, ಅರವಿಂದ ಟಿ.ಆರ್. ಇವರ ರಂಗ ಸಜ್ಜಿಕೆ, ಗುರುರಾಜ್ ಪಿ.ವಿ. ಇವರ ಪ್ರಸಾಧನ ಮತ್ತು ಹರಿವಿನಾಯಕ ಇವರ ಸಂಗೀತ ನಿರ್ವಹಣೆ ಇದೆ. ಹಾಗೆಯೇ ಈ ನಾಟಕದಲ್ಲಿ 3 ವರ್ಷದ ಮಗುವಿನಿಂದ ಹಿಡಿದು ಎಲ್ಲಾ ವಯೋಮಾನದ ಮತ್ತು ಎಲ್ಲಾ ವರ್ಗದ ಹವ್ಯಾಸಿ ಕಲಾವಿದರು ನಟಿಸಿರುವುದು ವಿಶೇಷವಾಗಿದೆ” ಎಂದು ಹೇಳಿದರು.
ಯಾವುದೇ ಸಭಾ ಕಾರ್ಯಕ್ರಮವಿರುವುದಿಲ್ಲ ಮತ್ತು ನಾಟಕ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳುವುದು. ಈ ನಾಟಕಕ್ಕೆ ಸಾಕಷ್ಟು ವೆಚ್ಚ ತಗಲುತ್ತಿದೆ ಹಾಗೂ ಎಲ್ಲಾ ಕಲಾವಿದರು ಕಳೆದ ಅನೇಕ ದಿನಗಳಿಂದ ಅಭ್ಯಾಸ ನಿರತರಾಗಿದ್ದಾರೆ. ಆದರೂ ಸಾಂಕೇತಿಕವಾಗಿ ಪ್ರವೇಶ ಧನ ಕೇವಲ ರೂ.50/- ಇರಿಸಿದ್ದೇವೆ. ಕಳೆದ ಅನೇಕ ದಿನಗಳಿಂದ ಈ ನಾಟಕದ ನಿರ್ದೇಶನಕ್ಕಾಗಿ ತೀರ್ಥಹಳ್ಳಿಯಲ್ಲಿ ತಂಗಿರುವ ಹಿರಿಯ ರಂಗಕರ್ಮಿ ಹುಲುಗಪ್ಪ ಕಟ್ಟೀಮನಿಯವರು, ಈ ನಾಟಕ ರಚನೆ ಹೇಗಾಯಿತು ಮತ್ತು ಇದರ ವಿಶೇಷತೆ (ಆಹ್ವಾನ ಪತ್ರಿಕೆಯಲ್ಲಿ ವಿವರಗಳಿವೆ ಗಮನಿಸಿ)ಗಳನ್ನು ವಿವರಿಸಿದರು. ಒಂದು ಊರಿನ ಜನ ಸಾತ್ವಿಕರಾಗಿದ್ದರೆ, ಮತ್ತೊಂದು ಊರಿನ ಜನ ಇದಕ್ಕೆ ತದ್ವಿರುದ್ದವಾಗಿರುವ ಕಥಾ ಹಂದರವನ್ನು ಈ ನಾಟಕ ಹೊಂದಿದ್ದು, ಉತ್ತರ ಕರ್ನಾಟಕದ ಭಾಷೆಯಲ್ಲಿ ಇದು ಸಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಈ ನಾಟಕದಲ್ಲಿ ಅಭಿನಯಿಸುತ್ತಿರುವ ಆಶಾ ಡೇನಿಯಲ್, ನಿತಿನ್ ಹೆಗ್ಡೆ, ಕೃಷ್ಣ ಎಂ. ಜಾಧವ್, ಶ್ಯೆಲಾ ಪುರುಷೋತ್ತಮ, ವಿ. ನಿರಂಜನ, ಟಿ.ಪಿ. ಚೇತನ್, ಯು. ಆದಿತ್ಯ, ವಿಶ್ರಾಂತಿ ವಿ. ಪೈ, ನಿರೀಕ್ಷಾ ಶೆಟ್ಟಿ, ಸುಬ್ರಹ್ಮಣ್ಯ ಟಿ.ಆರ್., ಮನೋಜ್ ಬಿ.ಟಿ., ಪ್ರಥ್ವಿ ಹೊಸಗದ್ದೆ, ಕ್ಷಿತಿಜ್, ಶಿವಾಜಿ, ಕಾರ್ತೀಕ್ ಕುಮಾರ್, ಲಕ್ಷ್ಮೀ ರವಿಶಂಕರ್, ಧನ್ಯಶ್ರೀ, ಸೃಷ್ಟಿ ರೆಡ್ಡಿ, ಮನು ಟಿ.ಜಿ., ಶ್ರೇಷ್ಟ ಇವರುಗಳು ಉಪಸ್ಥಿತರಿದ್ದರು.