ಮಂಗಳೂರು : ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಕ್ಕಲಡ್ಕ ಯುವಕ ಮಂಡಲ (ರಿ) ಹಾಗೂ ಡಿ. ವೈ. ಎಫ್. ಐ. ಘಟಕದ ಜಂಟಿ ಆಶ್ರಯದಲ್ಲಿ ಉಚಿತವಾಗಿ ನಡೆಯುವ ‘ಆಟ ಪಾಠ’ ಮಕ್ಕಳ ಸಂತಸ ಕಲಿಕಾ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 05-05-2024ರಂದು ಬಜಾಲ್ ಇಲ್ಲಿನ ಪಕ್ಕಲಡ್ಕ ಯುವಕ ಮಂಡಲದಲ್ಲಿ ನಡೆಯಿತು.
ಶಿಬಿರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದ ಸಮುದಾಯ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು ಮಾತನಾಡಿ “ಶಿಕ್ಷಣ ವ್ಯವಸ್ಥೆ ಸಂಪೂರ್ಣ ಖಾಸಗೀಕರಣಗೊಂಡು ಬರೀ ವ್ಯಾಪಾರದ ಹಿತದೃಷ್ಟಿಯನ್ನು ಹೊಂದಿದೆ. ವಿದ್ಯಾರ್ಥಿಗಳನ್ನು ಅವರ ಸರಕಾಗಿಸಿ ಅವರಲ್ಲಿ ಶಿಕ್ಷಣದ ಒತ್ತಡವನ್ನು ತರುವ ಮೂಲಕ ಬರಿಯ ಅಂಕದ ಫಲಿತಾಂಶವನ್ನು ತರಬಯಸುವ ಯಾಂತ್ರಿಕತೆಗೆ ತಳ್ಳಿದ್ದಲ್ಲದೆ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳಿಗೂ ಇಲ್ಲಿ ಯಾವೊಂದು ಅವಕಾಶಗಳೂ ಇಲ್ಲದೇ ಇರೋದು ಬಹಳ ದುರಂತ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳು ಅನಾವರಣಗೊಳ್ಳಬೇಕಾದರೆ ಇಂತಹ ಬೇಸಿಗೆ ಶಿಬಿರಗಳು ಪರಿಣಾಮಕಾರಿ. ಶಿಕ್ಷಣದ ಒತ್ತಡಕ್ಕೆ ಒಳಗಾದ ಮಕ್ಕಳು ಇಂದು ಆಟದ ಮೈದಾನ ಕಡೆಗೆ ಮುಖ ಮಾಡುತ್ತಿಲ್ಲ. ಕ್ರೀಡಾ ಮತ್ತಿತ್ತರ ಪಠ್ಯೇತರ ಚಟುವಟಿಕೆಗಳಿಗೆ ಆಸಕ್ತಿ ವಹಿಸುತ್ತಿಲ್ಲ. ಮತ್ತು ಇದಕ್ಕೆ ಪೂರಕವಾದ ವಾತಾವರಣಗಳು ಇಲ್ಲದೇ ಇರುವ ಕಾರಣ ಹೆಚ್ಚು ಹೆಚ್ಚು ಮಕ್ಕಳು ಅತಿಯಾದ ಮೊಬೈಲ್ ಬಳಕೆಗೆ ಒಳಗಾಗುತ್ತಿದ್ದಾರೆ. ಇದರಿಂದ ಮಕ್ಕಳನ್ನು ಹೊರತರಬೇಕಾದರೆ ಇಂತಹ ಬೇಸಿಗೆ ಶಿಬಿರಗಳು ಬಹಳ ಉಪಕಾರಿ. ನಗರದೆಲ್ಲೆಡೆ ಇಂದು ಶಿಕ್ಷಣದ ಜೊತೆ ರಜಾ ದಿನಗಳ ಬೇಸಿಗೆ ಶಿಬಿರಗಳೂ ವ್ಯಾಪಾರಿಕರಣಗೊಂಡಿರುವುದು ಬಹಳ ಕಳವಳಕಾರಿಯಾದ ಅಂಶ. ಅಂತಹ ಸಂಸ್ಥೆಗಳ ನಡುವೆ ಕಳೆದ 25 ವರುಷಗಳಿಂದ ಉಚಿತವಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಾ ಬಂದಿರುವ ಪಕ್ಕಲಡ್ಕ ಯುವಕ ಮಂಡಲ ಹಾಗೂ ಡಿ. ವೈ. ಎಫ್. ಐ. ನಂತಹ ಸಂಘಟನೆಗಳು ಮಾದರಿಯಾಗಿವೆ.” ಎಂದರು.
ಸಂತ ಜೋಸೇಫರ ಪ್ರೌಢಶಾಲೆಯ ಶಿಕ್ಷಕಿ ಚಂಚಲಾಕ್ಷಿ ಮಾತನಾಡಿ “ಬೇಸಿಗೆ ಶಿಬಿರಗಳಿಂದ ಮಕ್ಕಳಲ್ಲಿ ಪರಿಸರ ಕಾಳಜಿ, ಜನಪರ ಕಾಳಜಿಗಳನ್ನೆಲ್ಲಾ ಬೆಳಸಲು ಇದು ಸಹಕಾರಿ. ಪಠ್ಯದ ವಿಷಯಗಳಲ್ಲದೆ ಸಮಾಜದಲ್ಲಿ ಬದುಕು ಕಲಿಸುವ ವಿಚಾರಗಳು, ಪರಿಸರ ಮಾಲಿನ್ಯದಿಂದ ಭೂಮಿಯ ವಾತಾವರಣದ ಮೇಲಾಗುವ ಬದಲಾವಣೆಗಳ ಪರಿಹಾರವನ್ನು ಕಂಡುಕೊಳ್ಳಲು ಉತ್ತೇಜಿಸುವಂತಹ ಕಾರ್ಯಗಳನ್ನು ಇಂತಹ ಶಿಬಿರಗಳು ಕಲಿಸಿಕೊಡುತ್ತದೆ. ಇಂತಹ ಬೇಸಿಗೆ ಶಿಬಿರಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುವ ಮೂಲಕ ತಮ್ಮ ಪ್ರತಿಭೆಗಳಿಗೆ ಒರೆ ಹಚ್ಚುವ ವೇದಿಕೆಯಾಗಿ ಬಳಸಿಕೊಳ್ಳಲು ಸಾಧ್ಯವಾಗಬೇಕು.” ಎಂದು ತಿಳಿಸಿದರು.
ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ನಾಗರಾಜ್ ಬಜಾಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿ. ವೈ. ಎಫ್. ಐ. ದ. ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಪಕ್ಕಲಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ದೀಪಕ್ ಬಜಾಲ್, ಡಿ. ವೈ. ಎಫ್. ಐ. ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್, ಡಿ. ವೈ. ಎಫ್. ಐ. ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಆನಂದ ಎನೆಲ್ಮಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಪ್ರೀತೇಶ್ ಬಜಾಲ್ ಸ್ವಾಗತಿಸಿ, ನಿರೂಪಿಸಿ, ಡಿ. ವೈ. ಎಫ್. ಐ. ಮುಖಂಡ ಧೀರಜ್ ಬಜಾಲ್ ವಂದಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ಸ್ಥಳೀಯ ಮುಖಂಡರಾದ ಪ್ರಕಾಶ್ ಶೆಟ್ಟಿ, ಅಶೋಕ್ ಎನೆಲ್ಮಾರ್, ವರಪ್ರಸಾದ್, ಸಿಂಚನ್, ಅಶ್ವಿನಿ ಬಜಾಲ್, ನವೀನ್ ನಾಯಕ್ ಮುಂತಾದವರು ವಹಿಸಿದ್ದರು.
ದಿನಾಂಕ 11-05-2024 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ರಚಿಸಿದ ಕಲಾಕೃತಿಗಳ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ಕಿರು ನಾಟಕ ಪ್ರದರ್ಶನಗೊಂಡಿತು. ಶಿಬಿರದ ನಿರ್ದೇಶಕ ಪ್ರವೀಣ್ ಬಜಾಲ್ ವಿಸ್ಮಯ ನಿರ್ದೇಶನದಲ್ಲಿ ಶಿಬಿರುವು ಸಂಪನ್ನಗೊಂಡಿತು.