ಬೆಂಗಳೂರು : ಅಭಿನಯ ತರಂಗ ಪ್ರಸ್ತುತ ಪಡಿಸುವ ಶ್ವೇತಾ ರಾಣಿ ಹೆಚ್.ಕೆ. ಇವರ ರಂಗವಿನ್ಯಾಸ, ವಸ್ತ್ರವಿನ್ಯಾಸ ಮತ್ತು ನಿರ್ದೇಶನದ ‘ಆತಂಕವಾದಿಯ ಆಕಸ್ಮಿಕ ಸಾವು’ ನಾಟಕವು ದಿನಾಂಕ 16-12-2023ರಂದು ಸಂಜೆ ಗಂಟೆ 7ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕಕ್ಕೆ ಸಹ ನಿರ್ದೇಶನ ಸ್ಕಂದಾ ಘಾಟೆ ಮಾಡಿದ್ದು, ಬೆಳಕು ವಿನ್ಯಾಸ ಮಂಜು ನಾರಾಯಣ್ ಹಾಗೂ ಬೆಳಕು ನಿರ್ವಹಣೆ ಸಚಿನ್ ಇವರದ್ದು. ಈ ನಾಟಕದ ಪಾತ್ರವರ್ಗದಲ್ಲಿ ಕಾರ್ತಿಕ್ ಎಚ್.ಆರ್., ಅಮಿತ್, ಚಂದನ್, ಚೇತನ್, ಶರತ್, ನಂದಿನಿ, ಯೋಗೀಶ್, ಲಕ್ಷ್ಯ, ದರ್ಶನ ಮತ್ತು ರಂಗವೇಂದ್ರ ಅಭಿನಯಿಸಲಿದ್ದಾರೆ.
ನಿರ್ದೇಶಕರು ಶ್ವೇತಾ ರಾಣಿ ಹೆಚ್.ಕೆ.
ಹಾಸನ ಜಿಲ್ಲೆಯವರಾದ ಶ್ವೇತಾ ರಾಣಿ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಪದವಿ, ನೀನಾಸಂ ತಿರುಗಾಟದಲ್ಲಿ ನಟರಾಗಿ ತಂತ್ರಜ್ಞರಾಗಿ ಕೆಲಸ ಮಾಡಿರುತ್ತಾರೆ. ರಾಷ್ಟ್ರೀಯ ನಾಟಕ ಶಾಲೆ ದೆಹಲಿಯಲ್ಲಿ ಪದವಿ ಪಡೆದ ನಂತರ ಕರ್ನಾಟಕದ ಹಲವು ಕಡೆ ಅಭಿನಯ ಶಿಬಿರಗಳನ್ನು ನಡೆಸಿದ್ದಾರೆ. ಅನೇಕ ನಾಟಕಗಳಿಗೆ ರಂಗ ವಿನ್ಯಾಸಕರಾಗಿ, ವಸ್ತ್ರ ವಿನ್ಯಾಸಕರಾಗಿ ಕೆಲಸ ಮಾಡಿದ ಅನುಭವ ಇವರದು. ಹಲವು ರಂಗ ತಂಡಗಳಿಗೆ ಇವರು ನಿರ್ದೇಶಿಸಿದ ನಾಟಕಗಳು ತಪ್ಪಿದ ಎಳೆ, ಸೀಗಲ್, ವಾರ್ಷಿಕೋತ್ಸವ, ಎಗ್ಸೈಲ್, ಉಪ್ಪು, ಫೀದ್ರಾ, ಡಂಪ್ಡ್, ಆ ಲಯ ಈ ಲಯ ಹಾಗೂ ಅಭಿನಯ ತರಂಗದ ‘ಮಿತಿಮೀರಿದ ಮೋಜುಗಾರ’ ನಾಟಕಕ್ಕೆ ರಂಗ, ವಸ್ತ್ರ, ಮೇಕಪ್ ವಿನ್ಯಾಸವನ್ನು ಮಾಡಿದ್ದು, ಪ್ರಸ್ತುತ ‘ಆತಂಕವಾದಿಯ ಆಕಸ್ಮಿಕ ಸಾವು’ ನಾಟಕವನ್ನು ನಿರ್ದೇಶಿಸಿದ್ದಾರೆ.