ಬದಿಯಡ್ಕ (ಕಾಸರಗೋಡು): ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರ ವಿಶೇಷ ಭರತನಾಟ್ಯ ಪ್ರಸ್ತುತಿಯು ಸಂಗೀತ ಸಂಸ್ಥೆಯಾದ ‘ನಾರಾಯಣೀಯಂ’ನ ವೀಣಾವಾದಿನಿ ಸಂಗೀತ ವಿದ್ಯಾಪೀಠದ ಇಪ್ಪತ್ತೈದನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 7 ಡಿಸೆಂಬರ್ 2024ರ ಶನಿವಾರದಂದು ತುಂಬಿದ ಸಭಾಗೃಹದಲ್ಲಿ ಪ್ರದರ್ಶಿಸಲ್ಪಟ್ಟಿತು.
ಮೋಹನಕಲ್ಯಾಣಿ ರಾಗದ ಆದಿತಾಳದಲ್ಲಿರುವ ‘ಭುವನೇಶ್ವರಿಯ ನೆನೆ ಮಾನಸವೇ… ‘ ಎಂಬ ಹಾಡಿಗೆ ಅಯನಾ ಪೆರ್ಲ ಅವರು ಮನೋಜ್ಞವಾಗಿ ಅಭಿನಯಿಸಿದರು. ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಇದಕ್ಕೆ ನೃತ್ಯಸಂಯೋಜನೆ ಮಾಡಿದ್ದಾರೆ.
ಅನಂತರ ಆಂಗಿಕ ಹಾಗೂ ಅಭಿನಯಕ್ಕೆ ವಿಪುಲ ಅವಕಾಶಗಳಿರುವ ಪದವರ್ಣವನ್ನು ತನ್ನ ಪ್ರಸ್ತುತಿಗೆ ಆಯ್ದುಕೊಂಡರು. ಭೈರವಿ ರಾಗದಲ್ಲಿರುವ ಇದು ಆದಿತಾಳದಲ್ಲಿ ನಿಬದ್ಧವಾಗಿದೆ. ಇದು ಪೆರಿಯಸಾಮಿ ತೂರನ್ ಇವರ ರಚನೆಯಾಗಿದ್ದು, ಪ್ರಸಿದ್ಧ ಕಲಾವಿದೆ ಜಾನಕಿ ರಂಗರಾಜನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿದುಷಿ ಅಯನಾ ಅವರು ಉತ್ತಮವಾದ ಆಂಗಿಕ, ಅಭಿನಯ ಹಾಗೂ ಸಾಂದರ್ಭಿಕ ನಡೆಗಳಿಂದ ಆಕರ್ಷಕ ಮತ್ತು ಅರ್ಥಪೂರ್ಣ ಅಭಿನಯ ನೀಡಿದರು.
ಬಳಿಕ ಯಮನ್ ರಾಗದ ಆದಿತಾಳದಲ್ಲಿರುವ ಶ್ರೀಕೃಷ್ಣನ ಕುರಿತ ‘ಕಡೆಗೋಲ ತಾರೆನ್ನ ಚಿನ್ನವೇ’ ಪದ್ಯಕ್ಕೆ ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಅಭಿನಯ ನೀಡಿದರು.
ಕೊನೆಯಲ್ಲಿ ರಾಗಮಾಲಿಕೆ ತಾಳಮಾಲಿಕೆಯಲ್ಲಿರುವ ಡಿ. ವಿ. ಪ್ರಸನ್ನಕುಮಾರ್ ರಚನೆಯ ‘ತೋಡಯಮಂಗಲಂ’ ಹಾಡಿಗೆ ಅಯನಾ ತನ್ನ ಅಭಿನಯದ ಶ್ರೇಷ್ಠತೆಯನ್ನು ಎತ್ತಿ ತೋರಿಸಿದರು. ನೃತ್ಯಗುರು ಶ್ರೀಲತಾ ನಾಗರಾಜ್ ಇದಕ್ಕೆ ನೃತ್ಯಸಂಯೋಜನೆ ಮಾಡಿದ್ದಾರೆ.
ರಾಷ್ಟ್ರೀಯ ಮಟ್ಟದ ನೃತ್ಯ ಕಲಾವಿದೆಯಾಗಿರುವ ಹಾಗೂ ದೂರದರ್ಶನದ ಅಂಗೀಕೃತ ನೃತ್ಯಪಟುವಾಗಿರುವ ವಿದುಷಿ ಅಯನಾ ಅವರ ಕಲಾಭಿಜ್ಞತೆ ನೆರೆದಿದ್ದ ಪ್ರೇಕ್ಷಕರ ಹೃದಯದಲ್ಲಿ ನಾಲ್ಕುಕಾಲ ನೆಲೆನಿಲ್ಲುವಂತೆ ಅಭಿನೀತವಾಯಿತು.