04 ಫೆಬ್ರವರಿ 2023, ಉಳ್ಳಾಲ: ಉಲ್ಲಾಳದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಆಶ್ರಯದಲ್ಲಿ ಉಳ್ಳಾಲ ನಗರ ಸಭೆಯ ಬಳಿ ಇರುವ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ನಡೆಯಿತು. ವಿವಿಧ ಗೊಂಬೆಗಳ ಬಳಗ, ಕರಾವಳಿಯ ಗಂಡು ಕಲೆ ಯಕ್ಷಗಾನ, ಚೆಂಡೆ,ವಾದ್ಯ, ತಾಸೆ, ಕೀಲು ಕುದುರೆ, ವೈವಿಧ್ಯಮಯ ವರ್ಣರಂಜಿತ ಉಡುಗೆ ತೊಡುಗೆಗಳು ಕೂಡಿದ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಲಯ ಮತ್ತು ನಗರದ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಅಸಂಖ್ಯಾತ ಅಬ್ಬಕ್ಕಳ ಅಭಿಮಾನಿಗಳು, ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯರನ್ನೊಳಗೊಂಡ ಜನಸ್ತೋಮದೊಂದಿಗೆ ಅದ್ಧೂರಿಯ ಮೆರವಣಿಗೆ ಉತ್ಸವದ ವೇದಿಕೆಯತ್ತ ಸಾಗುತ್ತಿರುವಾಗ, ವೇದಿಕೆಯಲ್ಲಿ ವಿದ್ವಾನ್ ಸಂಜೀವ್ ಉಳ್ಳಾಲ್, ಸ್ವರಸಂಜೀವಿನಿ ಸಂಗೀತ ಸಭಾ ತಂಡದಿಂದ ಮನಸ್ಸಿಗೆ ಮುದನೀಡುವ ವಂದನಾ ಕಾರ್ಯಕ್ರಮ ನಡೆಯುತ್ತಿತ್ತು. ಮೆರವಣಿಗೆ ಮಹಾತ್ಮಗಾಂಧಿ ರಂಗಮಂದಿರ ತಲುಪಿದ ಕೂಡಲೆ ಎಂದಿನ ವಾಡಿಕೆಯಂತೆ ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶ್ರೀ ಸಂದೀಪ್ ಜಿ. ಎಸ್ ಧ್ವಜಾರೋಹಣಗೈದರು. ಮೆರವಣಿಗೆಯಲ್ಲಿದ್ದ ಪ್ರತೀ ಸಾಂಸ್ಕೃತಿಕ ತಂಡವೂ ವೇದಿಕೆ ಏರಿ ತಮ್ಮ ಸಾಂಸ್ಕೃತಿಕ ಪ್ರತಿಭೆಯ ಪ್ರದರ್ಶನ ನೀಡಿದವು, ಮತ್ತು ಇದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ “ಅಬ್ಬಕ್ಕ ಭವನಕ್ಕೆ ನಿಗದಿ ಪಡಿಸಿದ ಜಾಗದಲ್ಲಿ ಅಬ್ಬಕ್ಕ ಭವನವಾಗಬೇಕು. ಪೋರ್ಚುಗೀಸರನ್ನು ಉರಿಯುವ ಪಂಜಿನಿಂದ ಸದೆಬಡಿದ ವಿರಾರಣಿಯಯ ಚರಿತ್ರೆ ಭಾರತದಾದ್ಯಂತ ಪ್ರಚರವಾಗಲು ಸಹಾಯಕವಾಗುವ ಥೀಮ್ ಪಾರ್ಕ್ ಉಳ್ಳಾಲದಲ್ಲಿ ನಿರ್ಮಾಣವಾಗಬೇಕು. ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕನ ಹೆಸರಿಡುವಂತೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುವೆ”ಎಂದು ಹೇಳಿದರು.
ವಿಧಾನ ಪರಿಷದ್ ಸಭಾಪತಿ ಬಸವರಾಜ ಹೊರಟ್ಟಿಯವರು “ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಅಬ್ಬಕ್ಕಳ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು. ಅಂದು ಸ್ವಾತಂತ್ಯ ಹೋರಾಟದಲ್ಲಿ ದುಡಿದ ಮಹಿಳೆಯರೆಲ್ಲರೂ ಎಲ್ಲಾ ಜಾತಿ ಧರ್ಮದವರನ್ನು ಒಂದುಗೂಡಿಸಿ ಪರಕಿಯರೋಂದಿಗೆ ಹೋರಾಡಿದವರು.” ಎಂದರು
ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉತ್ಸವವನ್ನು ಉದ್ಘಾಟಿಸಿದರು. “ಕಾಂತಾರ” ಖ್ಯಾತಿಯ ನಟಿ ವಿದುಷಿ ಮಾನಸಿ ಸುಧೀರ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಪಾನೀರ್ ದಯಾಮತೆಯ ದೇವಾಲಯದ ಧರ್ಮಗುರು ವಂ. ಫಾ. ವಿಕ್ಟರ್ ಡಿಮೆಲ್ಲೋ, ಜಿಲ್ಲಾಧಿಕಾರಿ ರವಿ ಕುಮಾರ್ ಎಂ ಆರ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಕೆ.ಉಪಸ್ಥಿತರಿದ್ದರು.ಸ್ವಾಗತ ಸಮಿತಿ ಅಧ್ಯಕ್ಷ ಕೆ.ಜಯರಾಮ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉತ್ಸವ ಸಮಿತಿಯ ಅಧ್ಯಕ್ಷ ದಿನಕರ್ ಉಳ್ಳಾಲ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ ವಂದಿಸಿದರು. ನಿವೃತ್ತ ಶಿಕ್ಷಕ ಎಂ ವಾಸುದೇವ ರಾವ್ ನಿರೂಪಿಸಿದರು.
ಉದ್ಘಾಟನೆಯ ನಂತರ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಅನುದಾನಿತ ಭಾರತ್ ಪ್ರೌಢ ಶಾಲೆ ಮಾಸ್ತಿಕಟ್ಟೆ ಉಳ್ಳಾಲ, ಭಾರತಿ ಆಂಗ್ಲ ಮಾಧ್ಯಮ ಶಾಲೆ ಮಾಸ್ತಿಕಟ್ಟೆ ಉಳ್ಳಾಲ ಇವರು ಸುಂದರ, ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನೀಡಿದರು. ಮುಂದೆ ಉತ್ಸವ ವೇದಿಕೆಯಲ್ಲಿ ಬ್ಯಾರಿ ಕಾರ್ಯಕ್ರಮವನ್ನು ನಡೆಸಿಕೊಟ್ಟವರು “ಮೇಲ್ತೆನೆ” ತಂಡ (ಉಳ್ಳಾಲ ತಾಲೂಕು ಬ್ಯಾರಿ ಎಲ್ತ್ ಗಾರ್ ಪಿನ್ನೆ ಕಲಾವಿದ ಮಾರೊ ಕೂಟ) ಅಂತೂ ವೇದಿಕೆಯನ್ನು ಶೂನ್ಯವಾಗಿಸದೆ ಕಾರ್ಯಕ್ರಮ ನಡೆಯುತ್ತಲೇ ಇತ್ತು.
ಸಂಘಟನೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಲ್ಲಿ ಅವಕಾಶ ನೀಡಲಾಗಿತ್ತು. ದುರ್ಗವಾಹಿನಿ ಮಹಿಳಾ ಮಂಡಲ ಕುತ್ತಾರು ಇವರಿಂದ ಸುಂದರ ನೃತ್ಯಗಳ ಪ್ರದರ್ಶನ, ಓಜಾಸ್ ಟ್ರಸ್ಟ್ ಬಳಗದವರಿಂದ ವೈವಿಧ್ಯಮಯ ಕಾರ್ಯಕ್ರಮ, ಜಗದೀಶ್ ಮುಕ್ತಾ ತೊಕ್ಕೊಟ್ಟು ಇವರಿಂದ ಮೈ ಮನ ತುಂಬುವ ಗಾಯನ, ಅನುದಾನಿತ ಮೊಗವೀರ ಹಿರಿಯ ಪ್ರಾಥಮಿಕ ಶಾಲೆ ಉಳ್ಳಾಲದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ. ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೇರಿದ ಜನ ಸ್ತೋಮ ಆಸಕ್ತಿಯಿಂದ ವೀಕ್ಷಿಸಿತು.
ಬಹುಭಾಷಾ ಮಹಿಳಾ ಕವಿ- ಕಾವ್ಯ – ಗಾಯನದಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ ಎಂಟು ಮಂದಿ ಕವಿಗಳು ಸಂಭ್ರಮದಿಂದ ಪಾಲ್ಗೊಂಡರು. ಕನ್ನಡ ಭಾಷೆಯಲ್ಲಿ ಕವನ ವಾಚನ ಮಾಡಿದ ಶ್ರೀಮತಿ ಅರುಣಾ ನಾಗರಾಜ್ ಇವರು ಈ ಕವಿ ಗೋಷ್ಠಿಯ ಅಧ್ಯಕ್ಷರಾಗಿದ್ದರು. ತುಳು ಭಾಷೆಯಲ್ಲಿ ಶ್ರೀಮತಿ ಪ್ರಮೀಳಾ ರಾಜ್, ಕೊಂಕಣಿ ಭಾಷೆಯಲ್ಲಿ ಶ್ರೀಮತಿ ಸಭಿತಾ ಕಾಮತ್ ಮರೋಳಿ, ಶ್ರಿಮತಿ ರೇಣುಕಾ ಸುಧೀರ್ ಶಿವಳ್ಳಿ ತುಳು ಭಾಷೆ,
ಶ್ರೀಮತಿ ಸಿಹಾನಾ ಬಿ.ಎಂ. ಬ್ಯಾರಿ ಭಾಷೆ, ಶ್ರೀಮತಿ ಗೀತಾ ಕೊಂಕೋಡಿ ಹವ್ಯಕ ಕನ್ನಡ, ನಳಿನಾಕ್ಷಿ ಉದಯರಾಜ್, ಮಲಯಾಳಂ ಭಾಷೆ, ಅರ್ಚನಾ ಎಂ ಬಂಗೇರ ತುಳುಭಾಷೆ ಹೀಗೆ ಕವಿಗಳು ವಿವಿಧ ವಿಷಯಗಳನ್ನು ತಾವೇ ಆಯ್ಕೆ ಮಾಡಿ ಕೊಂಡು ಸ್ವರಚಿತ ಕವನಗಳ ವಾಚನ ಮಾಡಿ,ಜನ ಮೆಚ್ಚಗೆ ಪಡೆದರು. ಪ್ರತಿಯೊಂದು ಕವನ ವಾಚನದ ನಂತರ ನಾದಸ್ವರ ಮಂಗಳೂರು ಇದರ ನಿರ್ದೇಶಕಿ ಶ್ರೀಮತಿ ರಾಜೇಶ್ವರಿ ಮತ್ತು ನಿರೀಕ್ಷಾ ತಮ್ಮ ಮಧುರ ಕಂಠದಿಂದ ಕವನಗಳನ್ನು ರಾಗ ಬದ್ಧವಾಗಿ ಹಾಡಿ ಪ್ರೇಕ್ಷಕರಿಗೆ ಸಂಗೀತದ ರಸದೌತಣವನ್ನು ನೀಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಸ್ತುತ ಪಡಿಸಿದ ತುಳು ಯಕ್ಷಗಾನ ರೂಪಕ “ಸತ್ಯೋಗು ಗೆಲ್ಮೆ” ಪ್ರಸಂಗವನ್ನು ಶ್ರಿಮತಿ ಯತೀಶ್ ರೈ ಅವರ ನಿರ್ದೇಶನದಲ್ಲಿ ಕಲಾಕುಂಭ ಯಕ್ಷಕೂಟ ಕುಳಾಯಿಆಡಿ ತೋರಿಸಿ ಯಕ್ಷಗಾನ ಪ್ರಿಯರನ್ನು ತೃಪ್ತಿ ಪಡಿಸುವಲ್ಲಿ ಸಫಲರಾದರು.
ಮುಂದೆ ಇಳಿಹಗಲಿನಲ್ಲಿ ಸಮಾರೋಪ ಸಮಾರಂಭದ ಸಿದ್ಧತೆ ಭರದಿಂದ ನಡೆಯುತ್ತಿದ್ದು, ವಿದ್ವಾನ್ ಪ್ರಮೋದ್ ಉಳ್ಳಾಲ್ ರಾಣಿ ಅಬ್ಬ ಇನ್ಕ್ಕ ಗೀತೆಗೆ ಸ್ವಾಗತ ನೃತ್ಯವನ್ನು ಸಂಯೋಜನೆ ಮಾಡಿ ಪ್ರಸ್ತುತ ಪಡಿಸಿದರು.ಅಬ್ಬಕ್ಕನ ಚರಿತ್ರೆಯೊಂದಿಗೆ ಆಕೆಯ ದಿಟ್ಟತನ ಧೈರ್ಯ ಸಾಹಸದ ಪುಟವನ್ನು ತೆರೆದಿಟ್ಟಂತಾಯ್ತು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಇಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೀರರಾಣಿ ಅಬ್ಬಕ್ಕ ಪ್ರಶಸ್ತಿ ಮಾನ್ಯರು ಸಾಹಿತಿ ಡಾ. ಪಾರ್ವತಿ ಜಿ ಐತಾಳ್ ಮತ್ತು ವೀರರಾಣಿ ಅಬ್ಬಕ್ಕ ಪುರಸ್ಕಾರ ಮಾನ್ಯರು ಜಾನಪದ ಕಲಾವಿದೆ ಶ್ರೀಮತಿ ಭವಾನಿ. ಡಾ. ಪಾರ್ವತಿ ಜಿ. ಐತಾಳ್ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರಿ ಡಾ ಸರಸ್ವತಿಯವರು ಪ್ರಶಸ್ತಿಯನ್ನು ಸರ್ವರ ಸಮ್ಮುಖದಲ್ಲಿ ಸ್ವೀಕರಿಸಿದರು.
ಸಮಾರೋಪ ಭಾಷಣ ಮಾಡಿದ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಅಧ್ಯಕ್ಷ ಸನ್ಮಾನ್ಯ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, ಜಾತಿ ಭೇದವಿಲ್ಲದೆ ಪಕ್ಷ ಬೇಧವಿಲ್ಲದೆ ಎಲ್ಲರೂ ಒಂದುಗೂಡಿ ಅಚ್ಚುಕಟ್ಟಾಗಿ ಅಬ್ಬಕ್ಕ ಉತ್ಸವ ಮಾಡುತ್ತಿರುವುದು ಶ್ಲಾಘನೀಯ ಎಂದರು.
ನೃತ್ಯ ರಂಜಿನಿ ಕಾರ್ಯಕ್ರಮವು ವಿದ್ವಾನ್ ಪ್ರಮೋದ್ ಉಳ್ಳಾಲ್ ಇವರ ನಿರ್ದೇಶನದಲ್ಲಿ ಜನರ ಮೆಚ್ಚುಗೆ ಪಡೆಯಿತು. ಸಭಾಂಗಣದಲ್ಲಿ ತುಂಬಿದ ಪ್ರೇಕ್ಷಕರ ಮುಂದೆ “ತುಳುನಾಡ ಸಿಂಗಾರ” ಕಾರ್ಯಕ್ರಮವನ್ನು ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯೆಯರು ಪ್ರಸ್ತುತ ಪಡಿಸಿದರು. ನಾಗರಾಜ್ ಕುಲಾಲ್ ಪೆರ್ಲಂಪಾಡಿ ಇವರ ನಿರ್ದೇಶನದಲ್ಲಿ ತುಳುನಾಡಿನ ಆಚರಣೆಗಳಾದ ಕೆಡ್ಡಸ, ಬಲಿಯೇಂದ್ರ ಪೂಜೆ, ಹಿಂದಿನಿಂದಲೂ ನಡೆದುಬಂದ ಯಕ್ಷಗಾನ,ಕಂಬಳ, ಕೋಳಿಕಟ್ಟ ಮತ್ತು “ಅಬ್ಬಕ್ಕ” ರೂಪಕ ಉತ್ಸವದ ಮೆರುಗನ್ನು ಹೆಚ್ಚಿಸಿತು. ಒಟ್ಟಿನಲ್ಲಿ ಪೂರ್ಣವಾಗಿ ವೀರರಾಣಿ ಅಬ್ಬಕ್ಕ ಉತ್ಸವ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು.