ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಪ್ರಶಸ್ತಿಗಳಲ್ಲೊಂದಾದ ಅಭಯ ಲಕ್ಷ್ಮೀ ದತ್ತಿ ಪ್ರಶಸ್ತಿ ಸಮಾರಂಭವು ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ದಿನಾಂಕ 18-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕನ್ನಡಿಗರೆಲ್ಲರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಹರಿಯುತ್ತಿರುವ ಅಷ್ಟೇ ಅಲ್ಲ ವಿಸ್ತಾರಗೊಳ್ಳುತ್ತಿರುವ ನದಿಯ ಹಾಗೆ. ಅತಿಹೆಚ್ಚು ದತ್ತಿ ಪ್ರಶಸ್ತಿಗಳು ಇಲ್ಲಿ ಸ್ಥಾಪನೆಗೊಂಡಿದ್ದು ಇದರ ಆರ್ಥಿಕ ಮೊತ್ತಕ್ಕಿಂತಲೂ ಅದನ್ನು ಸ್ಥಾಪಿಸಿದವರ ಭಾವನೆಗಳು ಮುಖ್ಯ, ಇಂತಹ ಭಾವನಾತ್ಮಕ ಬೆಂಬಲದಿಂದಲೇ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಯುವುದು ಸಾಧ್ಯ” ಎಂದರು.
ಶ್ರೀಮತಿ ಪಿ. ಜಯ ಲಕ್ಷ್ಮೀಯವರು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನದಿಂದ ತಮ್ಮ ಪತಿ ದಿವಂಗತ ಎಸ್.ಎ. ಅಭಯ ಕುಮಾರ್ ಅವರ ಹೆಸರಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಇಬ್ಬರು ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಾಷ್ಟ್ರಪತಿ ಭವನದ ಸೆಂಟ್ರಲ್ ಹಾಲ್ ಗೆ ಇರುವ ಮಹತ್ವವೇ ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀಕೃಷ್ಣ ರಾಜ ಪರಿಷತ್ತಿನ ಮಂದಿರ’ಕ್ಕೆ ಇದ್ದು, ಇಲ್ಲಿ ಕನ್ನಡ-ಕನ್ನಡಿಗರಿಗೆ ಸಂಬಂಧಪಟ್ಟ ಅನೇಕ ಕಾರ್ಯಕ್ರಮಗಳು ನಡೆದಿವೆ, ನಿರ್ಣಯಗಳು ಸ್ವೀಕಾರಗೊಂಡಿವೆ, ಕನ್ನಡವನ್ನು ಕಟ್ಟಿದ ಮೇರು ಬರಹಗಾರರು ಇಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇಲ್ಲಿ ಪ್ರಶಸ್ತಿ ಸ್ವೀಕಾರ ಮಾಡುವುದು ಭಾವನಾತ್ಮಕ ಧನ್ಯತೆಯನ್ನು ನೀಡುವಂತಹದು ಎಂದು ಹೇಳಿ ಕರ್ನಾಟಕದ ಏಕೀಕರಣ ಮತ್ತು ನಾಮಕರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರವನ್ನು ವಿವರಿಸಿ ಕನ್ನಡ-ಕರ್ನಾಟಕ-ಕನ್ನಡಿಗರ ವಿಷಯ ಬಂದಾಗ ಕನ್ನಡ ಸಾಹಿತ್ಯ ಪರಿಷತ್ತು ಸದಾ ಮಂಚೂಣಿಯಲ್ಲಿ ಇರುತ್ತದೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕರು ಮತ್ತು ಖ್ಯಾತ ವಾಗ್ಮಿಗಳೂ ಆದ ಡಾ. ಕೆ.ಪಿ. ಪುತ್ತೂರಾಯರು ಸ್ವಾರಸ್ಯಕರವಾಗಿ ಮಾತನಾಡಿ “ಅಭಾರ ಮನ್ನಣೆ ಮತ್ತು ಅಭಿನಂದನೆ ಎರಡೂ ಬಹಳ ಮುಖ್ಯವಾದ ಸಂಗತಿಗಳು. ಪುರಸ್ಕಾರಗಳನ್ನು ಸ್ಥಾಪಿಸುವುದು ಆತ್ಮಾನಂದದ ಜೊತೆಗೆ ಸಂಪತ್ತಿನ ಸಾರ್ಥಕತೆ ಕೂಡ ಆಗುತ್ತದೆ ಪ್ರಶಸ್ತಿಗಳನ್ನು ಸಕಾಲದಲ್ಲಿ ನೀಡುವುದು ಮುಖ್ಯ ಎಂದು ಹೇಳಿ ಪ್ರಶಸ್ತಿ ದಾನಿಗಳನ್ನು, ಪುರಸ್ಕೃತರನ್ನು ಮತ್ತು ಕನ್ನಡ ಸಾಹಿತ್ಯ ಪರಿಷತ್ತನ್ನು ಈ ನಿಟ್ಟಿನಲ್ಲಿ ಅಭಿನಂದಿಸುವುದಾಗಿ ಹೇಳಿದರು. ಸಾಹಿತಿಗೆ ಸಾವು ಇರಬಹುದು ಆದರ ಸಾಹಿತ್ಯಕ್ಕೆ ಸಾವಿಲ್ಲ. ಎಲ್ಲಾ ಭಾಷೆಗಳನ್ನೂ ಪ್ರೀತಿಸೋಣ ಆದರೆ ಕನ್ನಡವನ್ನು ಆರಾಧಿಸೋಣ” ಎಂದು ಹೇಳಿದರು.
ದತ್ತಿ ದಾನಿಗಳಾದ ಶ್ರೀಮತಿ ಪಿ.ಜಯಲಕ್ಷ್ಮಿ ಅಭಯ ಕುಮಾರ್ ಅವರು ಮಾತನಾಡಿ “ಪ್ರಶಸ್ತಿಯನ್ನು ಇನ್ನೊಬ್ಬರಿಗೆ ಕೊಡುವಲ್ಲಿ ಇರುವ ಆನಂದ ವರ್ಣನಾತೀತ ‘ಕೆರೆಯ ನೀರನು ಕೆರೆಗೆ ಚೆಲ್ಲುವಂತೆ’ ತಾವು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಅದು ದೈವ ಸಂಕಲ್ಪವೂ ಹೌದು” ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗಿನ ತಮ್ಮ ಒಡನಾಟವನ್ನು ನೆನಪು ಮಾಡಿಕೊಂಡ ಇವರು ಇಲ್ಲಿ ಸ್ಥಾಪಿತವಾಗುವ ದತ್ತಿ ನಿಧಿ ಅರ್ಹರಿಗೆ ಸಲ್ಲುತ್ತದೆ ಎಂದು ಹೇಳಿ ಪರಂಪರೆ ಮತ್ತು ಆಧುನಿಕತೆ ಎರಡನ್ನೂ ಒಗ್ಗೂಡಿಸಿ ಕನ್ನಡ ಸಾಹಿತ್ಯ ಪರಿಷತ್ತು ಮುನ್ನೆಡೆಯುತ್ತಿರುವ ಬಗ್ಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದರು.
ಪ್ರಶಸ್ತಿ ಪುರಸ್ಕೃತರಾದ ಡಾ. ಎಚ್.ಎ. ಪಾರ್ಶ್ವನಾಥ ಅವರು ಮಾತನಾಡಿ ಹಾಸನದಲ್ಲಿ ಕೈಲಾಸಂ ಓದಿದ ಶಾಲೆಯಲ್ಲಿ ತಾವೂ ಕೂಡ ಓದಿದ್ದನ್ನು ಭಾವನಾತ್ಮಕ ಧನ್ಯತೆ ಎಂದು ಹೇಳಿ, ರಂಗಭೂಮಿ ತಮ್ಮನ್ನು ಬಾಲ್ಯದಿಂದಲೂ ಸೆಳೆಯಿತು, ದಿಗ್ಗಜರ ಒಡನಾಟ ಇಲ್ಲಿ ಸಾಧನೆ ಮಾಡಲು ಸ್ಪೂರ್ತಿ ನೀಡಿತು ಎಂದು ಹೇಳಿ, ವೃತ್ತಿ ತಮಗೆ ತೃಪ್ತಿ ನೀಡಿದರೆ ರಂಗಭೂಮಿ ಸಂತೃಪ್ತಿ ನೀಡಿದೆ ಎಂದರು. ಇನ್ನೊಬ್ಬ ಪುರಸ್ಕೃತರಾದ ಖ್ಯಾತ ಲೇಖಕಿ ಪ್ರೇಮಾಭಟ್ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸರಸ್ವತಿ ಮಂದಿರವೆಂದು ಬಣ್ಣಿಸಿ ಇಲ್ಲಿ ಪುರಸ್ಕಾರವನ್ನು ಪಡೆಯುತ್ತಿರುವುದನ್ನು ದೈವೀಕೃಪೆ ಎಂದು ಕರೆದುಕೊಂಡರು. ವಿಶಾಲ ಕರ್ನಾಟಕದ ಕಾಲದಿಂದಲೂ ನಿರಂತರವಾಗಿ ಬರೆವಣಿಗೆ ಮಾಡುತ್ತಿರುವ ತಮಗೆ ಬರವಣಿಗೆಯೇ ಸರ್ವಸ್ವವಾಗಿದ್ದು, ಕೊನೆಯ ಉಸಿರಿರುವವರೆಗೂ ಬರೆಯುವುದಾಗಿ ತಿಳಿಸಿದರು. ಕಂಡ ಬದುಕನ್ನು ಸಾಹಿತ್ಯದಲ್ಲಿ ತಂದೆ ಎಂದ ಅವರು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗಿನ ತಮ್ಮ ನಿರಂತರ ಒಡನಾಟವನ್ನು ಸ್ಮರಿಸಿಕೊಂಡು 84ರ ಈ ವಯಸ್ಸಿನಲ್ಲಿಯೂ ಕೂಡ ತಾವು ಕನ್ನಡಪರ ಹೋರಾಟಕ್ಕೆ ಸದಾ ಸಿದ್ಧರಾಗಿರುವುದಾಗಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಅವರು ಸ್ವಾಗತಿಸಿದರೆ ಕೋಶಾಧ್ಯಕ್ಷರಾದ ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರ್ವಹಿಸಿ, ಇನ್ನೊಬ್ಬ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿಯವರು ವಂದನೆಗಳನ್ನು ಸಲ್ಲಿಸಿದರು.