ಮೈಸೂರು : ಥಿಯೇಟರ್ ತತ್ಕಾಲ್ ಮತ್ತು ಭಿನ್ನಷಡ್ಜ ಸಹಯೋಗದಲ್ಲಿ ಎರಡು ದಿನದ ಸ್ತಾನಿಸ್ಲಾವಸ್ಕಿಯ ವಾಸ್ತವವಾದಿ ಅಭಿನಯ ಕಾರ್ಯಾಗಾರವನ್ನು ದಿನಾಂಕ 02-12-2023 ಮತ್ತು 03-12-2023ರಂದು ಮೈಸೂರಿನ ಕಲಾಮಂದಿರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೈಸೂರಿನ ಕಲಾಮಂದಿರ ಆವರಣದ ಶ್ರೀರಂಗ ಮತ್ತು ಕಿರುರಂಗ ಮಂದಿರಗಳಲ್ಲಿ ಈ ಕಮ್ಮಟ ನಡೆಯಲಿದ್ದು, ಕರ್ನಾಟಕದ ವಿವಿಧೆಡೆಯಿಂದ ಸುಮಾರು ಮೂವತ್ತು ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ. ಹಿರಿಯ ರಂಗಭೂಮಿ ಶಿಕ್ಷಕ ಮತ್ತು ನಿರ್ದೇಶಕರಾದ ಶ್ರೀಯುತ ಬಿ.ಆರ್. ವೆಂಕಟರಮಣ ಐತಾಳರು ಈ ಕಮ್ಮಟದ ನಿರ್ದೇಶಕರಾಗಿದ್ದು, ಶ್ರೀಧರ ಹೆಗ್ಗೋಡು, ದಿಗ್ವಿಜಯ ಮತ್ತು ಥಿಯೇಟರ್ ತತ್ಕಾಲಿನ ಅನುಭವೀ ನಟರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಿದ್ದಾರೆ.
ದಿನಾಂಕ 02-12-2023ರಂದು ಸಂಜೆ ಶ್ರೀರಂಗ ರಂಗಮಂದಿರದಲ್ಲಿ ಅರಿವು ರಂಗ ಅರ್ಪಿಸುವ ರಿಚರ್ಡ್ ಫೇಯ್ ಮನ್ ಬದುಕನ್ನು ಆಧರಿಸಿದ QED ನಾಟಕದ ಪ್ರದರ್ಶನವಿರುತ್ತದೆ. ದಿನಾಂಕ 03-12-2023ರಂದು ಡಿಸೆಂಬರ್ 3ರ ಬೆಳಿಗ್ಗೆ ಕಿರುರಂಗ ಮಂದಿರದಲ್ಲಿ 10ರಿಂದ 2ರವರೆಗೆ ‘ಪಾತ್ರ ಪ್ರವೇಶ’ ಪುಸ್ತಕದಲ್ಲಿ ಸ್ತಾನಿಸ್ಥಾವಸ್ಕಿ ವಿವರಿಸಿರುವ ದೈಹಿಕ ಪಾತ್ರ ಚಿತ್ರಣ, ದೇಹವನ್ನು ಅಭಿವ್ಯಕ್ತಿಪೂರ್ಣ ಮಾಡುವುದು, ಚಲನೆ ಮೃದುತ್ವ, ಹಾಡು ಮತ್ತು ಮಾತು, ಲಯ ತಾಳಗಳು, ಕಾಕು ಮತ್ತು ಮೌನ ಮುಂತಾದ ಮುಖ್ಯ ವಿಷಯಗಳ ಪ್ರಾಯೋಗಿಕ ಅಭ್ಯಾಸಗಳನ್ನು ನಡೆಸಿಕೊಡಲಾಗುತ್ತದೆ. ಸಂಜೆ 6 ಗಂಟೆಗೆ ಕಿರುರಂಗಮಂದಿರದಲ್ಲಿ ಶ್ರೀಧರ ಹೆಗ್ಗೋಡು ಕನ್ನಡಕ್ಕೆ ಅನುವಾದಿಸಿರುವ ‘ಪಾತ್ರ ಪ್ರವೇಶ’ (ಸ್ತಾನಿಸ್ಲಾವಸ್ಕಿಯ ‘ಬಿಲ್ಡಿಂಗ್ ಎ ಕ್ಯಾರೆಕ್ಟರ್”) ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀಯುತರಾದ ಪ್ರಕಾಶ ರೈ, ಹೆಚ್ ಎಸ್ ಉಮೇಶ್, ಬಿ.ಆರ್. ವೆಂಕಟರಮಣ ಐತಾಳ, ಸತೀಶ್ ನೀನಾಸಮ್ ಮತ್ತು ಶ್ರೀಧರ ಹೆಗ್ಗೋಡು ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.