ಬೆಂಗಳೂರು : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ಕೆ.ಆರ್. ರೋಡ್, ಗಾಯನ ಸಮಾಜದ ಸಭಾಂಗಣದಲ್ಲಿ ದಿನಾಂಕ 03 ಆಗಸ್ಟ್ 2024ರಂದು ‘ಆಚಾರ್ಯರ ಜನ್ಮಾರಾಧನೆ 88’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ವಾಂಸ ಪ್ರೊ. ಪಾದೇಕಲ್ಲು ವಿಷ್ಣು ಭಟ್ಟ ಇವರು ಮಾತನಾಡಿ “ಯಾವುದೇ ವಿಷಯವಾಗಲಿ ಸತ್ಯವಾಗಿ ಕಂಡದ್ದನ್ನು ಯಾರ ಮುಲಾಜು ಇಲ್ಲದೇ ಹೇಳುವಂತಹ ಗುಣವನ್ನು ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ರೂಢಿಸಿಕೊಂಡಿದ್ದರು. ಗೋವಿಂದಾಚಾರ್ಯರು ಉದಯವಾಣಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಕಿಷ್ಕಂದ ಕಾಂಡ’ ಎಂಬ ಅಂಕಣವನ್ನು ನಾನು ಪ್ರೌಢಶಾಲೆಯಲ್ಲಿ ಇದ್ದಾಗ ಮಕ್ಕಳೆಲ್ಲಾ ಅತ್ಯಂತ ಕುತೂಹಲದಿಂದ ಓದುತ್ತಿದ್ದೆವು. ಸರಳವಾಗಿ, ಸ್ಪಷ್ಟವಾಗಿ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಿದ್ದರು. ಜತೆಗೆ ಯಾವುದೇ ವಿಶೇಷ ದಿನ ಅಥವಾ ಹಬ್ಬಗಳ ಸಂದರ್ಭದಲ್ಲಿ ವಿಶೇಷಗಳ ಲೇಖನಗಳು ಅವರಲ್ಲಿ ಸದಾ ಸಿದ್ಧವಾಗಿರುತ್ತಿದ್ದವು. ಬನ್ನಂಜೆಯವರು 44 ವರ್ಷಗಳ ಕಾಲ ಈ ಉತ್ಸವದಲ್ಲಿ ಉಪನ್ಯಾಸ ಮಾಡಿದ್ದಾರೆ. ರಾಮಾಯಣ, ಮಹಾಭಾರತ ಅವರಿಗೆ ಕಂಠಸ್ಥವಾಗಿತ್ತು. ಅವರು ಸಾಂಪ್ರದಾಯಿಕರನ್ನು ಹಾಗೂ ಆಧುನೀಕತೆಯರನ್ನೂ ಟೀಕಿಸುತ್ತಿದ್ದರು. ಆದರೂ ಇವರಿಬ್ಬರಿಗೂ ಪ್ರಿಯರಾಗಿದ್ದರು. ಆಕಾಶವಾಣಿಯವರು ಬನ್ನಂಜೆ ಅವರನ್ನು ಸಂದರ್ಶನ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿದ್ದರು. ಆದ್ದರಿಂದ ಅವರ ಧ್ವನಿ ಮುದ್ರಣ ಭಂಡಾರ ಜೀವಂತವಾಗಿದೆ” ಎಂದು ತಿಳಿಸಿದರು.
ಆಚಾರ್ಯರು ಹೇಳಿದ ಆತ್ಮಕಥನ ‘ಆತ್ಮನಿವೇದನೆ’ ಮತ್ತು ‘ನನ್ನ ಪಿತಾಮಹ ಪಡುಮುನ್ನೂರು ನಾರಾಯಣಾಚಾರ್ಯರು’ ಎಂಬ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ತದನಂತರ ಆತ್ಮಕಥನ ಕೃತಿಯ ಬಗ್ಗೆ ಶತಾವಧಾನಿ ಡಾ. ಆರ್. ಗಣೇಶ್ ಮಾತನಾಡಿ “ಭಾರತೀಯ ಪರಂಪರೆಯಲ್ಲಿ ವ್ಯಕ್ತಿಗಳ ದಾಖಲೆಗಳಿಂತ ಅವರ ವಿಚಾರಗಳು ದಾಖಲೆಗಳಾಗುತ್ತಿದ್ದವು. ಇದೀಗ ಬನ್ನಂಜೆ ಅವರ ಬಗ್ಗೆ ಪುಸ್ತಕ ರೂಪದಲ್ಲಿ ದಾಖಲಾಗಿರುವುದು ಸಂತಸದ ವಿಷಯ ಎನ್ನುತ್ತಾ ಈ ಪುಸ್ತಕ ಅಪ್ಪ ಅಮ್ಮ ನನ್ನ ಕುಟುಂಬ, ಬಾಲ್ಯ-ಅಧ್ಯಯನ, ಸ್ವಾಮಿಗಳು-ವಿದ್ವಾಂಸರು ಹೀಗೆ 17 ಶೀರ್ಷಿಕೆಗಳಲ್ಲಿ ಈ ಪುಸ್ತಕ ಮೂಡಿ ಬಂದಿದೆ. ಈ ಪುಸ್ತಕದಲ್ಲಿ ಬನ್ನಂಜೆ ವ್ಯಕ್ತಿತ್ವ ತುಂಬಾ ಪ್ರಾಮಾಣಿಕವಾಗಿ ಕಾಣುತ್ತದೆ” ಎಂದರು.
“ಬನ್ನಂಜೆಯವರು ಏನಾದರೂ ಕಲಿಯಬೇಕಾದರೆ ಶೂನ್ಯದಿಂದ ಅಧ್ಯಯನವನ್ನು ಪ್ರಾರಂಭಿಸಿದಾಗ ಮಾತ್ರ ಸಂಪೂರ್ಣ ದರ್ಶನ ಆಗುತ್ತದೆ ಎನ್ನುತ್ತಿದ್ದರು. ಪವಾಡಗಳ ಹಿಂದೆ ಹೋಗುವ ಬದಲು ಆಚಾರ-ವಿಚಾರ ತತ್ವಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ವಿದೇಶಗಳಲ್ಲಿಯ ಬಹುತೇಕ ಕಾರ್ಯಕ್ರಮದಲ್ಲಿ ಕನ್ನಡದಲ್ಲಿಯೇ ಉಪನ್ಯಾಸ ಮಾಡುತ್ತಿದ್ದರು” ಎಂದು ಉಡುಪಿಯ ಪ್ರಕಾಶ್ ಮಲ್ಪೆ ಸ್ಮರಿಸಿದರು.
ಅವಧೂತ ಶ್ರೀ ವಿನಯ ಗುರೂಜಿ ‘ಆಚಾರ್ಯರು, ಸತ್ಯಕಾಮ ಮತ್ತು ಉಡುಪಿಯ ಅಜ್ಜ ಕರ್ನಾಟಕದ ಋಷಿಗಳು’ ವಿಷಯ ಕುರಿತು ಮಾತನಾಡಿದರು. ಶ್ರೀ ದಿವಾಕರ ಹೆಗಡೆ ಕೆರೆಹೊಂಡ ಇವರ ‘ಭಾರತ ಮಾರುತಿ’ ಏಕವ್ಯಕ್ತಿ ತಾಳಮದ್ದಲೆಗೆ ಶ್ರೀ ಅನಂತ ಹೆಗಡೆ ಭಾಗವತರಾಗಿ ಮತ್ತು ಶ್ರೀ ಅನಂತ ಪದ್ಮನಾಭ ಘಾಟಕ್ ಮದ್ದಲೆಯಲ್ಲಿ ಸಹಕರಿಸಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಗೋವಿಂದಾಚಾರ್ಯರ ಪುತ್ರಿ ವೀಣಾ ಬನ್ನಂಜೆ ಉಪಸ್ಥಿತರಿದ್ದರು.
ಆಗ 2014ರ ಸಮಯ. “ಅಪ್ಪ ನೀವು ಯಾಕೆ ನಿಮ್ಮ ಆತ್ಮಚರಿತ್ರೆ ಬರೆಯಬಾರದು? ಇನ್ನೊಂದೆರಡು ವರ್ಷಗಳಲ್ಲಿ ನಿಮಗೆ ಎಂಬತ್ತು” ಅಂದೆ. “ಓಹ್ ಆ ನೆನಪು ಮಾಡಿಕೊಂಡು ಬರೆಯುವುದು, ನನಗಾಗದು ಮಗಳೆ” ಎಂದರು ಅಪ್ಪ. “ನೀವು ಹೇಳುತ್ತಾ ಹೋಗಿ ಅಪ್ಪ ನಾನು ಬರೆಯುತ್ತೇನೆ” ಎಂದೆ. “ಇಲ್ಲ ಇಲ್ಲ, ನನ್ನ ನೆನಪಿನ ಜೊತೆ ನಿನ್ನ ಬರವಣಿಗೆಯ ವೇಗ, ನಿಧಾನ ಹೊಂದಾಣಿಕೆ ಆಗಲಿಕ್ಕಿಲ್ಲ ಮಗಳೆ” ಅಂದರು. “ಹಾಗಾದರೆ ನೀವು ದಿನದಲ್ಲಿ ಇಷ್ಟು ಎಂದು ನನಗೆ ಸಮಯ ಕೊಡಿ ಅಪ್ಪ, ಆ ಹೊತ್ತಿನಲ್ಲಿ ನಾನು ಬಂದು ನಿಮ್ಮ ಮುಂದೆ ಕುಳಿತು ನೀವು ಹೇಳಿದ್ದನ್ನು ಧ್ವನಿಮುದ್ರಣ ಮಾಡುತ್ತೇನೆ. ಕೊನೆಗೊಮ್ಮೆ ಅಕ್ಷರ ರೂಪಕ್ಕೆ ಇಳಿಸಿದರೆ ಆಯಿತು” ಎಂದೆ. ಅಪ್ಪ ಆಗಬಹುದು ಎಂದು ಹೇಳಿ ದಿನದಲ್ಲಿ ನನಗೆ ಬೆಳಿಗ್ಗೆ ಹತ್ತರಿಂದ ಹನ್ನೆರಡು (ಎರಡು ಗಂಟೆ) ಸಮಯ ಕೊಟ್ಟರು. ಹಾಗೆ ಧ್ವನಿಮುದ್ರಿತವಾದದ್ದು ಈಗ ನಿಮ್ಮ ಮುಂದೆ ಅಕ್ಷರವಾಗಿದೆ.”
ಬನ್ನಂಜೆ ಗೋವಿಂದಾಚಾರ್ಯರ ಆತ್ಮಕಥನ ‘ಆತ್ಮನಿವೇದನೆ’ಯ ಆರಂಭದ ಪ್ಯಾರಾ ಇದು. ಆಚಾರ್ಯರು ಹೇಳಿದ್ದನ್ನ ರೆಕಾರ್ಡ್ ಮಾಡಿಟ್ಟುಕೊಂಡು ಬರೆಹರೂಪಕ್ಕಿಳಿಸಿದವರು ವೀಣಾ ಬನ್ನಂಜೆ. ಹಾಗೆಯೇ ಅವರ ಇನ್ನೊಂದು ಕೃತಿ ‘ನನ್ನ ಪಿತಾಮಹ ಪಡುಮುನ್ನೂರು ನಾರಾಯಣ ಆಚಾರ್ಯರು’ ಕೃತಿ ಕೂಡ ಲೋಕಾರ್ಪಣೆಯಾಗಿದೆ. ಇದು ಆಚಾರ್ಯರ ತಂದೆಯ ಜೀವನ ಚರಿತ್ರೆ, ಮೊಮ್ಮಗಳು ವೀಣಾ ಅಕ್ಷರದಲ್ಲಿ ಕಟ್ಟಿಕೊಟ್ಟಿದ್ದಾರೆ.
ಈ ಅಪ್ಪ – ಮಗ ಇಬ್ಬರ ಜೀವನ ಚರಿತ್ರೆಯನ್ನು ಕೂಡಿ ಓದುವವರು ಎರಡೂ ಪುಸ್ತಕಗಳನ್ನು ಒಟ್ಟಿಗೆ ಕಾಯ್ದಿರಿಸಬಹುದು. ‘ನನ್ನ ಪಿತಾಮಹ’ ಪುಸ್ತಕವನ್ನು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ) ಬೆಂಗಳೂರು ಪ್ರಕಟಿಸುತ್ತಿದೆ. ಅದರ ಮುಖ ಬೆಲೆ 100 ರೂಪಾಯಿ. ಎರಡೂ ಪುಸ್ತಕಗಳನ್ನು ಕೂಡಿ ಕೊಳ್ಳುವವರಿಗೆ 360 ರೂಪಾಯಿಗೆ ಒದಗಿಸಲಾಗುವುದು. ಈ ಪುಸ್ತಕಗಳನ್ನು ತಾವೂ ಓದಬೇಕು. ಆ ಕುತೂಹಲ ತಮಗಿದ್ದರೆ ಇಗೋ ರಿಯಾಯ್ತಿ ಬೆಲೆಯಲ್ಲಿ , ಆಗಸ್ಟ್ 16ರವರೆಗೆ ಲಭ್ಯ. ತಾವು ಮಾಡಬೇಕಾದುದಿಷ್ಟೇ.
9448110034 (Subramanya-Subbu) ನಂಬರಿಗೆ 360/- ರೂ ಗಳನ್ನು ಫೋನ್ ಪೇ/ ಗೂಗಲ್ ಪೇ ಮಾಡಿ ತಮ್ಮ ವಿಳಾಸ ಅದೇ ನಂಬರಿಗೆ ವಾಟ್ಸಾಪ್ ಮಾಡುವುದು ಅಥವಾ ಈ ಲಿಂಕ್ ಬಳಸಿ ನಮ್ಮ ವೆಬ್ ಅಂಗಡಿಯಲ್ಲಿ ಬುಕ್ ಮಾಡುವುದು. 5ನೇ ತಾರೀಕಿನ ನಂತರ ವೀಣಕ್ಕ ಅವರ ಹಸ್ತಾಕ್ಷರವಿರುವ ಪ್ರತಿ ತಮ್ಮ ಮನೆಬಾಗಿಲಿಗೇ.