ಬೆಂಗಳೂರು : ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ಬೆಂಗಳೂರು ಇವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನೀಡುವ ‘ಆದರ್ಶ ಮಹಿಳಾ ರತ್ನ ರಾಜ್ಯ ಪ್ರಶಸ್ತಿ’ಗೆ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿಯಾದ ಸಾಹಿತಿ, ಸಮಾಜ ಸೇವಕಿ ಹಾಗೂ ಸಂಘಟಕಿಯಾದ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ 09 ಮಾರ್ಚ್ 2025ರಂದು ಬೆಂಗಳೂರಿನ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ಅಡಿಟೋರಿಯಂನಲ್ಲಿ ನಡೆಯಲಿದೆ. ಪ್ರಶಸ್ತಿ ಪ್ರಧಾನವನ್ನು ರಾಜ್ಯಸಭಾ ಸದಸ್ಯರು ಹಾಗೂ ಇನ್ಫೋಸಿಸ್ ಫೌಂಡೇಶನ್ ಇದರ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಸುಧಾ ಮೂರ್ತಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಉತ್ತರ ಲೋಕಸಭಾ ಸಂಸದೆ ಶ್ರೀಮತಿ ಶೋಭಾ ಕರಂದ್ಲಾಜೆ, ರಂಗ ಕಲಾವಿದೆ ಹಾಗೂ ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌದರಿ, ಸಮಾಜ ಸೇವಕಿಯಾದ ಕುಸುಮ ಹನುಮಂತ ರಾಯಪ್ಪ, ಮಾಜಿ ಉಪ ಮಹಾ ಮೇಯರ್ ಹೇಮಲತಾ ಗೋಪಾಲಯ್ಯ, ಸಮಾಜ ಸೇವಕಿ ಶೈಲಜಾ ಸೋಮಣ್ಣ, ಕನ್ನಡ ಚಲನಚಿತ್ರ ನಟಿ ರಮ್ಯಾ, ಡಾ. ರಾಜಕುಮಾರ್ ಅವರ ಪುತ್ರಿ ಲಕ್ಷ್ಮಿ ಗೋವಿಂದರಾಜ್ ಹಾಗೂ ಕನ್ನಡ ಚಿತ್ರನಟ ನಟಿ ರೇಖಾದಾಸ್ ಅತಿಥಿಗಳಾಗಿ ಭಾಗವಹಿಸಿದ್ದಾರೆ.
ಡಾ. ಮಾಲತಿ ಶೆಟ್ಟಿ ಇವರು 19 ವರ್ಷಗಳಿಂದ ಸಾಹಿತ್ಯ ಪತ್ರಿಕೋದ್ಯಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಕಳೆದ 12 ವರ್ಷಗಳಿಂದ ಸಾಹಿತ್ಯ ಪರ ಅಮೃತ ಪ್ರಕಾಶ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಒಂಬತ್ತು ಕೃತಿಗಳನ್ನು ಬರೆದಿರುವ ಇವರು ಹಿರಿಯ ಕಿರಿಯ ಸಾಹಿತಿಗಳ 42 ಕೃತಿಗಳನ್ನು ಈಗಾಗಲೇ ಅಮೃತ ಪ್ರಕಾಶ ಸರಣಿ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದ್ದಾರೆ.
103 ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ‘ಸಾಹಿತ್ಯ ಅಭಿರುಚಿ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಮಂಗಳೂರಿನ ಅತ್ತಾವರದಲ್ಲಿ ಪತಿ ಸತ್ಯಪ್ರಕಾಶ್ ಶೆಟ್ಟಿ ಜೊತೆ ಸಾಹಿತ್ಯ ನಂದನದಲ್ಲಿ ವಾಸವಾಗಿರುವ ಇವರು ಹಲವಾರು ರಾಷ್ಟ್ರ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ