ಬೆಂಗಳೂರು : ನಗರದ ಸಂಸ್ಕೃತ ಭಾರತಿ ಸಭಾಂಗಣದಲ್ಲಿ ದಿನಾಂಕ 28-10-2023ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಆಯೋಜಿಸಿದ್ದ ‘ಆದಿಕವಿ ಪುರಸ್ಕಾರ’ ಹಾಗೂ ‘ವಾಗ್ದೇವಿ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಮಾತನಾಡುತ್ತಾ “ಕೇವಲ ಪಂಡಿತ ವರ್ಗಕ್ಕೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ತಲುಪುವಂತಹ ಸಾಹಿತ್ಯ ರಚನೆ ಇಂದಿನ ಅಗತ್ಯ. ಸಾಹಿತಿಗಳು ಸಮಾಜದ ಬಗ್ಗೆ ಯೋಚನೆ ಮಾಡಬೇಕು. ಅತ್ಯಂತ ಸರಳವಾದ ಕನ್ನಡದಲ್ಲಿ ಕೃತಿಗಳನ್ನು ರಚಿಸಿ, ಅದನ್ನು ಸಮಾಜದ ತಳಮಟ್ಟದವರೆಗೂ ತಲುಪಿಸುವ ಕೆಲಸ ಆಗಬೇಕು. ಇದರಿಂದ ಭಾರತೀಯ ಪ್ರಜ್ಞೆಯನ್ನು ಮೂಡಿಸಲು ಸಾಧ್ಯವಾಗುತ್ತದೆ. ಭಾರತೀಯತೆ, ರಾಮರಾಜ್ಯ, ಸಂಸ್ಕೃತಿ ಇತ್ಯಾದಿ ಪದ ಪ್ರಯೋಗವನ್ನು ಮಾಡುತ್ತೇವೆ. ಆದರೆ, ಅವುಗಳ ಅರ್ಥವೇ ಬಹುತೇಕರಿಗೆ ತಿಳಿದಿರುವುದಿಲ್ಲ. ಅಂತಹ ಪದಗಳ ಪರಿಚಯವನ್ನು ಜನಸಾಮಾನ್ಯರಿಗೂ ಮಾಡಿಕೊಟ್ಟರೆ ಭಾರತೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಸಾಧ್ಯ. ಅಂತಹ ಕಾರ್ಯವನ್ನು ಇವತ್ತಿನ ಸಾಹಿತಿಗಳು ಮತ್ತು ಅ.ಭಾ.ಸಾ.ಪ.ದಂತಹ ಸಂಘಟನೆಗಳು ಮಾಡಬೇಕಿದೆ. ಟಿವಿ, ಮೊಬೈಲ್, ಕಂಪ್ಯೂಟರ್ ಮೊದಲಾದ ಮಾಧ್ಯಮಗಳು ಆಧುನಿಕ ಜಗತ್ತನ್ನು ಆಳುತ್ತಿವೆ. ಅವುಗಳ ಬಳಕೆಯನ್ನು ದೂರುವ ಬದಲು ಆ ಎಲ್ಲ ಮಾಧ್ಯಮಗಳನ್ನು ಬಳಸಿಕೊಂಡು ಭಾರತೀಯ ಚಿಂತನೆಯನ್ನು ಪಸರಿಸುವ ಕೆಲಸ ಆಗಬೇಕು. ಇಂದು ಕನ್ನಡವನ್ನು ಕನ್ನಡ ಹೋರಾಟಗಾರರಿಂದ ರಕ್ಷಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದ ಶಾಂತಿಯನ್ನು ಕದಡುವ ಅಂತಹವರನ್ನು ಮೌನವಾಗಿ ಸಹಿಸುತ್ತಿರುವ ಪ್ರಜ್ಞಾವಂತರೂ ಇದಕ್ಕೆ ಹೊಣೆಯಾಗುತ್ತಾರೆ. ವಾಲ್ಮೀಕಿಯನ್ನು ಒಪ್ಪಿಕೊಳ್ಳುವ ಜನ ರಾಮನನ್ನು ವಿರೋಧಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಸರಿಯಾದ ತಿಳಿವಳಿಕೆಯನ್ನು ನೀಡುವ ಅಗತ್ಯವಿದೆ. ಕನ್ನಡದ ಇತಿಹಾಸದ ಬಗ್ಗೆ ಹಲವು ಗೊಂದಲಗಳಿವೆ. ಯಾರಿಗೂ ಈ ಕುರಿತು ಸ್ಪಷ್ಟತೆ ಇಲ್ಲ. ಏಕೆಂದರೆ ನಮ್ಮ ಇತಿಹಾಸವನ್ನು ಬರೆದವರು ಪರಕೀಯರು. ಸುಳ್ಳಿನ ವಿಜೃಂಭಣೆಯಿಂದ ನೈಜ ಇತಿಹಾಸ ಮರೆಯಾಗಿದೆ. ಸತ್ಯ ಚರಿತ್ರೆಯನ್ನು ಪುನಾರಚಿಸುವ ಕೆಲಸವನ್ನು ಸಾಹಿತಿಗಳು ಕೈಗೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಭಾಸಾಪ ರಾಜ್ಯ ಉಪಾಧ್ಯಕ್ಷ, ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು, “ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಿರಿಯ ಮತ್ತು ಕಿರಿಯ ಸಾಹಿತಿಗಳಿಬ್ಬರನ್ನು ಗುರುತಿಸಿ ಆದಿಕವಿ ಮತ್ತು ವಾಗ್ದೇವಿ ಪ್ರಶಸ್ತಿಯನ್ನು ನೀಡುತ್ತಿದೆ. ಇಂದು ಶಸ್ತ್ರಾಸ್ತ್ರಗಳ ದಾಳಿಗಿಂತ ಬೌದ್ಧಿಕ ದಾಳಿ ದೇಶವನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಬೌದ್ಧಿಕ ಕ್ಷತ್ರಿಯರನ್ನು ತಯಾರು ಮಾಡುವ ಕೆಲಸವನ್ನು ಸಾಹಿತ್ಯ ಪರಿಷತ್ ಮಾಡುತ್ತಿದೆ” ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ. ಸಂಗಮೇಶ ಸವದತ್ತಿಮಠ ಅವರಿಗೆ 2023ನೇ ಸಾಲಿನ ‘ಆದಿಕವಿ ಪುರಸ್ಕಾರ’ ಹಾಗೂ ವಿದ್ವಾಂಸ ಸತ್ಯನಾರಾಯಣ ಕಾರ್ತಿಕ್ ಅವರಿಗೆ ‘ವಾಗ್ದೇವಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಡಾ. ಸಂಗಮೇಶ ಸವದತ್ತಿಮಠ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರಿ ಸ್ಮಿತಾ ಪ್ರಶಸ್ತಿಯನ್ನು ಸ್ವೀಕರಿಸಿದರು. ‘ಆದಿಕವಿ ಪುರಸ್ಕಾರ’ ಪಡೆದ ಡಾ. ಸಂಗಮೇಶ ಸವದತ್ತಿಮಠ ಅವರು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾಗಿದ್ದಾರೆ. ‘ವಾಗ್ದೇವಿ ಪ್ರಶಸ್ತಿ’ ಪಡೆದ ಸತ್ಯನಾರಾಯಣ ಕಾರ್ತಿಕ್ ಅವರು ಸ್ವತಂತ್ರ ಸಂಶೋಧಕ ಮತ್ತು ಲೇಖಕರಾಗಿದ್ದಾರೆ.
“ವಾಲ್ಮೀಕಿ ಮಹರ್ಷಿಗಳು ಬರೀ ರಾಮನ ಕಥೆಯನ್ನು ಬರೆಯಲಿಲ್ಲ, ಬದಲಾಗಿ ರಾಮಾಯಣದ ಮೂಲಕ ಭಾರತದ ಸಾಂಸ್ಕೃತಿಕ ಸಂವಿಧಾನವನ್ನೇ ರೂಪಿಸಿದ್ದಾರೆ. ಅವರ ರಾಮಾಯಣ ಮಹಾಕಾವ್ಯ ನೂರಾರು ಜನರಿಗೆ ರಾಮಾಯಣ ರಚಿಸಲು ಪ್ರೇರಣೆ ನೀಡಿದೆ. ಅಸಂಖ್ಯ ಕವಿಗಳಿಗೆ, ಲೇಖಕರಿಗೆ ಸ್ಫೂರ್ತಿ ನೀಡಿದೆ. ಅಂತಹ ಕವಿಯ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದಕ್ಕೆ ಸಂತೋಷವಾಗುತ್ತಿದೆ. ಭಾರತೀಯ ಸಂಸ್ಕೃತಿಯ ಸಂವರ್ಧನೆಯ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಅ.ಭಾ.ಸಾ.ಪ. ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸಲು ಸಿದ್ಧ” ಎಂದು ಡಾ. ಸಂಗಮೇಶ ಸವದತ್ತಿಮಠ ತಮ್ಮ ಸಂದೇಶದ ಮೂಲಕ ತಿಳಿಸಿದರು.
ವಾಗ್ದೇವಿ ಪ್ರಶಸ್ತಿ ಪೋಷಕ, ವಾಗ್ದೇವಿ ಶಿಕ್ಷಣ ಸಮೂಹದ ಅಧ್ಯಕ್ಷ ಕೆ. ಹರೀಶ್ ಅವರು ಮಾತನಾಡಿ, “ಒಳ್ಳೆಯ ಕೆಲಸವನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕು. ಅ.ಭಾ.ಸಾ.ಪ. ನಾಡಿನ ಶ್ರೇಷ್ಠ ಸಾಹಿತಿಗಳನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡುತ್ತಿದೆ. ಈ ಉತ್ತಮ ಕಾರ್ಯದಲ್ಲಿ ನಮ್ಮ ಅಳಿಲು ಸೇವೆ ಸಲ್ಲಿಸಲು ಅವಕಾಶವಾದುದಕ್ಕೆ ಸಂತಸವಾಗುತ್ತಿದೆ” ಎಂದು ಹೇಳಿದರು.
ಆದಿಕವಿ ಪುರಸ್ಕಾರದ ಪೋಷಕ, ಉದ್ಯಮಿ ಎಸ್. ಜಯರಾಮ್ ಅವರು ಮಾತನಾಡಿ, “ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದು. ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ. ಈ ಕಾರ್ಯದಲ್ಲಿ ನಮ್ಮನ್ನು ಜೋಡಿಸಿಕೊಂಡಿದ್ದಕ್ಕೆ ಧನ್ಯವಾದ” ಎಂದು ತಿಳಿಸಿದರು.
ಅ.ಭಾ.ಸಾ.ಪ. ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ನರೂರ ಪ್ರಾಸ್ತಾವಿಕವಾಗಿ ಮಾತನಾಡಿ, ಚಂದ್ರಶೇಖರ್ ಮೈಸೂರು ನಿರೂಪಿಸಿ, ಶ್ರೀಕಂಠ ಬಾಳಗಂಚಿ ವಂದಿಸಿದರು. ಅ.ಭಾ.ಸಾ.ಪ. ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಬೆಂಗಳೂರು ಮಹಾನಗರ ಅಧ್ಯಕ್ಷ ಎಂ.ಎಸ್. ನರಸಿಂಹಮೂರ್ತಿ, ಕವಿ ಭ.ರಾ. ವಿಜಯಕುಮಾರ್ ಇನ್ನಿತರರು ಉಪಸ್ಥಿತರಿದ್ದರು.