ಉಡುಪಿ : ಉಡುಪಿಯ ಅಜ್ಜರ ಕಾಡಿನಲ್ಲಿರುವ ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 3ನೇ ದಿನದ ಕಾರ್ಯಕ್ರಮವು ದಿನಾಂಕ 27-02-2024ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ “ರಂಗ ಚಟುವಟಿಕೆಗಳು ಉತ್ಸವಗಳಾಗದೇ ಚಳವಳಿಗಳಾಗಬೇಕು. ಇಲ್ಲದೇ ಇದ್ದರೆ ಮನೋರಂಜನೆಗೆ ಸೀಮಿತವಾಗುತ್ತವೆ ಹೊರತು ಬೇರೇನನ್ನೂ ಹೇಳಲಾರವು. ರಂಗಚಟುವಟಿಕೆಗಳ ದೊಡ್ಡ ಕೇಂದ್ರವಾದ ಉಡುಪಿಯಲ್ಲಿ ಅನೇಕ ರಂಗಸಂಸ್ಥೆಗಳಿವೆ. ನಿರಂತರ ರಂಗ ಕಾರ್ಯಕ್ರಮಗಳಾಗುತ್ತಿರುತ್ತವೆ. ಆದರೆ, ಪರಸ್ಪರ ಕೊಡುಕೊಳ್ಳುವಿಕೆ ಇಲ್ಲದೇ ಸಂಸ್ಥೆಗಳು ದ್ವೀಪಗಳಾಗುತ್ತಿವೆ. ಇಲ್ಲಿ ರಂಗಚಳವಳಿಯಾಗದೇ ಇರಲು ಇದೂ ಕೂಡಾ ಕಾರಣ ಎಂದು ವಿಶ್ಲೇಷಿಸಿ ಕಲಾವಿದರಲ್ಲಿ, ಸಂಘಟಕರಲ್ಲಿ ಸಾಂಸ್ಕೃತಿಕ, ಸಾಮಾಜಿಕ ಬದ್ಧತೆ ಇರಬೇಕು. ವ್ಯವಸ್ಥೆಗೆ ಪ್ರಭುತ್ವಕ್ಕೆ ಪ್ರತಿರೋಧವಾಗಿ ರಂಗಭೂಮಿ ಹುಟ್ಟಿದೆ. ಆದರೆ ಇಂದು ಪ್ರಭುತ್ವದೊಂದಿಗೆ ಹೊಂದಾಣಿಕೆ, ರಾಜಿ ಮಾಡಿಕೊಂಡು ಪ್ರದರ್ಶನಗಳು ನಡೆಯುತ್ತಿವೆ. ಧರ್ಮ, ದೇವರು, ಭಾಷೆ ಹೀಗೆ ಎಲ್ಲವೂ ರಾಜಕೀಯ ಪ್ರಪಗಾಂಡದ ಟೂಲ್ ಆಗಿ ಬಳಕೆಯಾಗುತ್ತಿರುವ ಈ ಹೊತ್ತಿನಲ್ಲಿ ರಂಗಭೂಮಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಎಲ್ಲ ರಂಗಕರ್ಮಿಗಳು ಅರಿಯುವ ಅಗತ್ಯ ಇದೆ. ಕಗ್ಗತ್ತಲ ಕಾಲದಲ್ಲಿ ಕಗ್ಗತ್ತಲ ಕಾಲದ ಬಗ್ಗೆ ಹಾಡಬೇಕು ಎಂದು ಬ್ರೆಕ್ಟ್ ಹಿಂದೆಯೇ ಹೇಳಿದ್ದ. ನಾವು ಕೂಡ ಇಂದಿನ ಪರಿಸ್ಥಿತಿಯ ಬಗ್ಗೆ ಮಾತನಾಡಬೇಕು. ತುಳು ನಾಟಕರಂಗ ಬಹಳ ಬೆಳೆದಿದೆ. ಅದರ ಜೊತೆಗೆ ಪ್ರತಿಕ್ರಿಯಾತ್ಮಕ ಪ್ರದರ್ಶನಗಳೂ ನಡೆಯುತ್ತಿದ್ದು, ಅವುಗಳನ್ನು ಪ್ರೋತ್ಸಾಹಿಸಬೇಕು” ಎಂದು ಹೇಳಿದರು.
‘ರಂಗಸಾಧಕ’ ಸನ್ಮಾನ ಸ್ವೀಕರಿಸಿದ ಕಲಾವಿದ ವಿಜಯ್ ಆರ್. ನಾಯಕ್ ಮಾರ್ಪಳ್ಳಿ ಮಾತನಾಡಿ, “ಸುಮನಸಾ ಸಂಸ್ಥೆ ನಾಟಕ ಪ್ರದರ್ಶನ ನೀಡಲು ಸೀಮಿತಗೊಳ್ಳದೇ ಅನೇಕ ರಂಗಚಟುವಟಿಕೆಗಳನ್ನು, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ರಂಗಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸುವ ಕಾರ್ಯವನ್ನು ಕೂಡ ಮಾಡುತ್ತಿದೆ” ಎಂದು ಶ್ಲಾಘಿಸಿದರು.
ಉದ್ಯಮಿಗಳಾದ ರಂಜನ್ ಕಲ್ಕೂರ, ಸುರೇಶ್ ಯು., ಮಹೇಶ್ ಎಂ. ಬಂಗೇರ, ಸದಾನಂದ ಸಾಲ್ಯಾನ್, ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷ ಯೋಗೀಶ್ ಕೊಳಲಗಿರಿ, ಬಾಲಕೃಷ್ಣ ಶಿಬಾರ್ಲ ಉಪಸ್ಥಿತರಿದ್ದರು. ಉಪಾಧ್ಯಕ್ಷ ವಿನಯ್ ಕುಮಾರ್ ಕಲ್ಮಾಡಿ ಸ್ವಾಗತಿಸಿದರು. ಸದಸ್ಯರಾದ ಕವನಾ ವಂದಿಸಿ, ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ‘ನಗ್ನ ಥಿಯೇಟರ್ ಉಡುಪಿ’ ತಂಡದಿಂದ ‘ಅಗ್ನಿ ಮತ್ತು ಮಳೆ” ಪ್ರದರ್ಶನಗೊಂಡಿತು.








