ಮಂಗಳೂರು: ಆರ್ಟ್ ಕೆನರಾ ಟ್ರಸ್ಟ್ ಮಂಗಳೂರು, ಕವಿತಾ ಕುಟೀರ, ಪೆರಡಾಲ ಮತ್ತು ನವಜೀವನ ಹೈಸ್ಕೂಲ್ ಪೆರಡಾಲ, ಕಾಸರಗೋಡು ಇದರ ಹಿರಿಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಗಳ ಬರಹಗಾರರ ಆಯ್ದ ಕತೆ ಕವನ ಸಂಕಲನ ಕವಿ ಕಯ್ಯಾರ ಸ್ಮೃತಿ ‘ಐಕ್ಯವೇ ಮಂತ್ರ’ ಪುಸ್ತಕದ ಲೋಕಾರ್ಪಣಾ ಸಮಾರಂಭವು ದಿನಾಂಕ 28 ಸೆಪ್ಟೆಂಬರ್ 2024ರ ಶನಿವಾರದಂದು ಮಂಗಳೂರಿನ ಬಿ. ಇ. ಎಂ. ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀ ನಾಥ್ ಮಾತನಾಡಿ “ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ತನ್ನ ಬದುಕಿನ ಕೊನೆಯವರೆಗೂ ಹೋರಾಟ ನಡೆಸಿದ ಕನ್ನಡದ ಮಹಾನ್ ಹೋರಾಟಗಾರ, ಸಾಹಿತಿ ಕಯ್ಯಾರ ಕಿಂಞಣ್ಣ ರೈ ಅವರ ಕನಸು ಕೊನೆಗೂ ಈಡೇರದೆ ಇರುವುದು ಇಂದಿಗೂ ಬೇಸರ ತರುವ ವಿಷಯ. ಕನ್ನಡಕ್ಕಾಗಿ ಹೋರಾಡಿದ ಅವರ ಹೋರಾಟ ಸದಾ ಸ್ಮರಣೀಯವಾದುದು. ಕಯ್ಯಾರರು ತುಳು, ಕನ್ನಡ ಸಾಹಿತ್ಯದ ಜೊತೆಗೆ ಕೃಷಿ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಐಕ್ಯವೊಂದೇ ಮಂತ್ರ ಎನ್ನುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದವರು. ಅವರನ್ನು ಈ ಸಮಾಜ ಎಂದೂ ಮರೆಯಲು ಸಾಧ್ಯವಿಲ್ಲ.” ಎಂದರು.
ಕೃತಿ ಲೋಕಾರ್ಪಣೆಗೊಳಿಸಿದ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ “ಕಯ್ಯಾರ ಕಿಂಞಣ್ಣ ರೈಗಳು ಸಾಹಿತ್ಯ ಲೋಕದ ದೊಡ್ಡಣ್ಣ ಮಾತ್ರವಲ್ಲ, ಕನ್ನಡ ತುಳು ಸಾಹಿತ್ಯಲೋಕದ ಅಪಾರ ಜನಾಭಿಮಾನಕ್ಕೆ ಪಾತ್ರರಾದವರು.” ಎಂದರು.
ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಮೂರ್ತಿ ಕೃತಿ ಪರಿಚಯ ಮಾಡಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ದುರ್ಗಾ ಪ್ರಸಾದ್ ರೈ, ಡಾ. ಸಾಯಿಗೀತಾ ಹೆಗ್ಡೆ, ಕಯ್ಯಾರ ಕಿಂಞಣ್ಣ ರೈ ಇವರ ಶಿಷ್ಯರಾದ ಫ್ರಾನ್ಸಿಸ್ ಡಿ’ಸೋಜ, ರಾಧಾಕೃಷ್ಣ ಉಳಿಯತಡ್ಕ, ಬಿ. ಇ. ಎಂ. ಶಾಲೆಯ ಸಂಚಾಲಕ ಮನೋಜ್, ಮುಖ್ಯೋಪಾಧ್ಯಾಯ ಯಶವಂತ ಮಾಡ, ಆರ್ಟ್ ಕೆನರಾ ಟ್ರಸ್ಟ್ ಇದರ ಟ್ರಸ್ಟಿಗಳಾದ ಸುಭಾಸ್ ಚಂದ್ರ ಬಸು ಹಾಗೂ ರಾಜೇಂದ್ರ ಕೇದಿಗೆ ಉಪಸ್ಥಿತರಿದ್ದರು.
ಕವಿತಾ ಕುಟೀರದ ಅಧ್ಯಕ್ಷ ಪ್ರಸನ್ನ ರೈ ಸ್ವಾಗತಿಸಿ, ಉಪನ್ಯಾಸಕಿ ಅಕ್ಷತಾ ವಿ. ಕಾರ್ಯಕ್ರಮ ನಿರೂಪಿಸಿ, ನೇಮಿರಾಜ ಶೆಟ್ಟಿ ವಂದಿಸಿದರು.
ಸಭಾ ಕಾರ್ಯಕ್ರಮದ ಮೊದಲು ಸುರತ್ಕಲ್ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಯಮ ಪ್ರಸ್ತುತಗೊಂಡಿತು.