ಕೋಟ : ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗಮಂಟಪದಲ್ಲಿ ಭಾನುವಾರ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ವತಿಯಿಂದ 15 ದಿನಗಳ ಕಾಲ ನಡೆದ ದಶಮಾನೋತ್ಸವದ ಯಕ್ಷಗಾನ ನೃತ್ಯ, ಅಭಿನಯ ತರಬೇತಿಯು ದಿನಾಂಕ 16-04-2023 ರಂದು ಉದ್ಘಾಟನೆಗೊಂಡು ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 30-04–2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಆಶೀರ್ವಾಚನಗೈಯುತ್ತಾ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು “ಜೀವನದಲ್ಲಿ ದುಡ್ಡು ಮಾಡುವ ಕಲೆಯನ್ನು ನಮ್ಮ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ. ನಮ್ಮ ಹಿಂದಿನ ಪರಂಪರೆಯ ಆಚಾರ ವಿಚಾರ, ನೀತಿ ನಿಯಮ, ಕಲೆ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಿಕೊಡುವತ್ತ ಶಿಕ್ಷಣ ಸಂಸ್ಥೆಗಳು ಒತ್ತು ನೀಡಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ಯಕ್ಷಗಾನ ಕಲಾ ಕೇಂದ್ರದಂತಹ ಸಂಸ್ಥೆಗಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯ” ಎಂದರು.
ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಪಾರಂಪಳ್ಳಿಯ ನಿವೃತ್ತ ಅಧ್ಯಾಪಕ ಶ್ರೀನಿವಾಸ ಸೋಮಯಾಜಿ, ಎಲ್.ಐ.ಸಿ. ನಿವೃತ್ತ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಶೆಟ್ಟಿ, ಯಕ್ಷಗುರು ಸದಾನಂದ ಐತಾಳ, ರಾಜಶೇಖರ ಹೆಬ್ಬಾರ್, ರಾಮಚಂದ್ರ ಐತಾಳ ಉಪಸ್ಥಿತರಿದ್ದರು. ಸದಾನಂದ ಐತಾಳರ ನಿರ್ದೇಶನದಲ್ಲಿ ಮಹೇಶ ಮಂದಾರ್ತಿ ಮತ್ತು ರೋಹಿತ್ ತೀರ್ಥಹಳ್ಳಿ ಅವರ ಸಹಕಾರದಲ್ಲಿ ಶಿಬಿರದಲ್ಲಿ ಭಾಗವಹಿಸಿದ 75ಕ್ಕೂ ಹೆಚ್ಚು ಶಿಬಿರಾರ್ಥಿಗಳಿಂದ ಪ್ರಾತ್ಯಕ್ಷಿತೆ ನಡೆಯಿತು.