ಕಿನ್ನಿಗೋಳಿ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇಯಾನ್ ಕೇರ್ಸ್ ಫೌಂಡೇಶನ್ ಇವರ ಸಹಯೋಗದೊಂದಿಗೆ ದಿನಾಂಕ 15 ಜನವರಿ 2026ರಂದು ಕಿನ್ನಿಗೋಳಿಯಲ್ಲಿ ‘ಆಜ್ ಆಮಿ ಕೊಂಕ್ಣಿ ಉಲೊವ್ಯಾಂ’ ಎಂಬ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಹಮ್ಮಿಕೊಂಡಿತ್ತು.
ಮೊದಲಿಗೆ ಮೂರುಕಾವೇರಿ ಜಂಕ್ಷನ್ನಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆರಂಭವಾದ ಭವ್ಯ ಮೆರವಣಿಗೆಯು ಹೆಚ್ಚಿನ ಮೆರುಗನ್ನು ನೀಡಿತು. ಕಿನ್ನಿಗೋಳಿ ಪರಿಸರದ ಹಿರಿಯರಾದ ಶ್ರೀಮತಿ ಕಾರ್ಮಿಣ್ ರೊಡ್ರಿಗಸ್ಯವರು ಅಕ್ಕಿ ಮುಡಿಯಿಂದ ಅಕ್ಕಿಯನ್ನು ಹೊರ ತೆಗೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಇಯಾನ್ ಕೇರ್ಸ್ ಫೌಂಡೇಶನ್ನ ಸಂಸ್ಥಾಪಕರಾದ ಶ್ರೀ ಹೇಮಾಚಾರ್ಯರವರು ವೇದಿಕೆಯಲ್ಲಿದ್ದರು.



ಮಕ್ಕಳಿಗೆ ಪ್ರಕೃತಿಯ ಒಡನಾಟ ಗಳಿಸುವುದಕ್ಕಾಗಿ ಕಾಡಿನ ಸುತ್ತಾಟವನ್ನು ಹಮ್ಮಿಕೊಂಡು ವಿಧ ವಿಧದ ಮರ-ಗಿಡಗಳು, ಹೂವು- ಬಳ್ಳಿಗಳು, ಔಷದೀಯ ಸಸ್ಯಗಳು, ಪ್ರಾಣಿ- ಪಕ್ಷಿಗಳು, ಕ್ರಿಮಿ-ಕೀಟಗಳು ಹಾಗೂ ಮನುಷ್ಯ ಸಂಬಂಧಗಳ ಬಗ್ಗೆ ಕೊಂಕಣಿ ಹೆಸರುಗಳನ್ನು ಮನವರಿಕೆ ಮಾಡಲಾಯಿತು. ತದನಂತರ ಮಕ್ಕಳಿಗೆ ಹಲವಾರು ಸ್ಪರ್ಧೆಗಳನ್ನು ಹಮ್ಮಿಕೊಂಡು ಬಹುಮಾನಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಕೊಂಕಣಿ ಕ್ರೈಸ್ತ, ಜಿ.ಎಸ್.ಬಿ., ಸಿದ್ಧಿ ಹಾಗೂ ಕುಡುಬಿ ಸಮುದಾಯದ ಸರಿಸುಮಾರು 200ಕ್ಕೂ ಮಿಗಿಲಾಗಿ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿದ್ಧಿ ಪಂಗಡದ ಧಮಾಮ್ ನೃತ್ಯ, ಕುಡುಬಿ ಪಂಗಡದ ಕೋಲಾಟ, ರೈಸಿಂಗ್ ಸ್ಟಾರ್ಸ್ ಕಿರೆಂ ಇವರ ಬ್ರಾಸ್ ಬ್ಯಾಂಡ್ ಹಾಗೂ ಬಾಲಕಿ ಆಲನಿ ಡಿಸೋಜಾರವರ ಹಾಡುಗಳು ಜನರನ್ನು ರಂಜಿಸಿದವು.



ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರು ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ದಾಯ್ಜಿ ವರ್ಲ್ಡ್ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಗೌರವ ಅತಿಥಿಗಳಾಗಿ ಕಿರೆಂ ಚರ್ಚಿನ ಧರ್ಮಗುರುಗಳಾದ ವಂ. ಸ್ವಾ. ಒಸ್ವಾಲ್ಡ್ ಮೊಂತೇರೊ, ಕಿನ್ನಿಗೋಳಿ ಚರ್ಚಿನ ಧರ್ಮಗುರು ವಂ. ಸ್ವಾ. ಜೋಕಿಂ ಫೆರ್ನಾಂಡಿಸ್, ಶ್ರೀ ರಾಮ ಮಂದಿರ ಕಿನ್ನಿಗೋಳಿ ಇದರ ಅಧ್ಯಕ್ಷರಾದ ಶ್ರೀ ರಾಜೇಶ್ ನಾಯಕ್, ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ (ರಿ). ಇದರ ಕಾರ್ಯದರ್ಶಿ ಶ್ರೀ ಶೇಖರ ಗೌಡ, ಇಯಾನ್ ಕೇರ್ಸ್ ಫೌಂಡೇಶನ್ನ ಸಂಸ್ಥಾಪಕರಾದ ಶ್ರೀ ಹೇಮಾಚಾರ್ಯರವರು ವೇದಿಕೆಯಲ್ಲಿದ್ದರು. ಕುಮಾರಿ ಮೆಲ್ಡ್ರಿಡಾ ರೊಡ್ರಿಗಸ್ ರವರು ಕಾರ್ಯಕ್ರಮ ನಿರೂಪಿಸಿ, ಅಕಾಡೆಮಿ ಸದಸ್ಯರಾದ ದಯಾನಂದ್ ಮಡ್ಕೇಕರ್, ಸುನೀಲ್ ಸಿದ್ಧಿ, ರೊನಾಲ್ಡ್ ಕ್ರಾಸ್ತಾ ಹಾಗೂ ನವೀನ್ ಲೋಬೊ ಉಪಸ್ಥಿತರಿದ್ದರು.


