ಮಂಗಳೂರು : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ದಶಮಾನೋತ್ಸವ ಸಂಭ್ರಮ ಹಾಗೂ ಜಿಲ್ಲಾಮಟ್ಟದ ಸಮೂಹಗಾನ ದೇಶಭಕ್ತಿ ಗೀತೆ ಸ್ಪರ್ಧೆಯು ದಿನಾಂಕ 13-08-2023ರಂದು ನಗರದ ಶಾರದಾ ವಿದ್ಯಾಲಯ ಕೋಡಿಯಾಲ್ ಬೈಲಿನಲ್ಲಿ ನಡೆಯಿತು. ಜಿಲ್ಲಾಮಟ್ಟದ ಸಮೂಹಗಾನ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ದಕ್ಷಿಣ ಕನ್ನಡ ಜಿಲ್ಲೆ ಮಹಿಳಾ ಮಂಡಲಗಳ ಒಕ್ಕೂಟ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀಮತಿ ಚಂಚಲ ತೇಜೋಮಯ ಇವರು ಉದ್ಘಾಟಿಸಿ “ಅಕ್ಕಮಹಾದೇವಿ ಸಂಘವು ಸಮಾಜದ ಎಲ್ಲ ಜನರನ್ನು ಒಗ್ಗೂಡಿಸಿಕೊಂಡು ಸಮಾಜಮುಖಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಮುಂದೆಯು ಅನೇಕ ಚಟುವಟಿಕೆಗಳು ನಿಮ್ಮ ಸಂಘದಿಂದ ನೆರವೇರಲಿ” ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಶ್ರೀಮತಿ ಪಲ್ಲವಿ ಕಾರಂತ್ ರೋಟರಿ ಕ್ಲಬ್ ಬಿ.ಸಿ.ರೋಡ್ ಇವರು ಮಾತನಾಡುತ್ತಾ “ಸಕಾರಾತ್ಮಕ ಚಿಂತನೆಗಳಿಂದ ಹೆಣ್ಣು ಮಕ್ಕಳು ಒಗ್ಗೂಡಿದರೆ, ಉತ್ತಮ ಕಾರ್ಯಗಳು ನೆರವೇರಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಈ ಸಂಘಕ್ಕೆ ದಶಮಾನೋತ್ಸವ ಶತಮಾನೋತ್ಸವವಾಗಲಿ” ಎಂದು ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸುಮಾ ಅರುಣ್ ಮಾನ್ವಿ ಅವರು ಕಾರ್ಯಕ್ರಮದ ಬಗ್ಗೆ ಹಾಗೂ ಸಂಘದ ಬಗ್ಗೆ ಮಾತನಾಡಿದರು.
ದಶಮಾನೋತ್ಸವದ ಸಮಾರೋಪ ಸಮಾರಂಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ, ರಶಪ್ರಶ್ನೆ, ದೇಶಭಕ್ತಿ ಗೀತೆ ಸ್ಪರ್ಧೆ ಹಾಗೂ ಲಕ್ಕಿ ಡ್ರಾ ಮಾಡಿ ಬಹುಮಾನ ವಿತರಿಸುವ ಕಾರ್ಯಕ್ರಮ ಮಾಡಲಾಯಿತು. ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಧರ್ಮದರ್ಶಿ ಡಾಕ್ಟರ್ ಹರಿಕೃಷ್ಣ ಪುನರೂರು ಮಾಜಿ ರಾಜ್ಯ ಅಧ್ಯಕ್ಷರು ಕ.ಸಾ. ಪ ಬೆಂಗಳೂರು ಇವರು ನೆರವೇರಿಸಿ ಸಂಘದ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತ ನಿರಂತರವಾಗಿ ಉತ್ತಮ ಕಾರ್ಯಗಳು ನೆರವೇರಲಿ ಎಂದು ಶುಭ ಕೋರಿದರು.
ಮಾಜಿ ಸಚಿವರು ಹಿರಿಯ ಸಾಹಿತಿ ಡಾಕ್ಟರ್ ಲೀಲಾದೇವಿ ಆರ್. ಪ್ರಸಾದ್, ನಿಕಟ ಪೂರ್ವ ಅಧ್ಯಕ್ಷರು ಕ.ಸಾ.ಪ.ದ.ಕ.ಜಿಲ್ಲಾ ಮಂಗಳೂರು ಹಾಗೂ ಕಲ್ಕೂರ ಪ್ರತಿಷ್ಠಾನ ಮಂಗಳೂರು ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ್ ಮತ್ತು ಹಿದಾಯ ಫೌಂಡೇಶನ್ ಮಹಿಳಾ ವಿಭಾಗ ಕಾವಲಕಟ್ಟೆ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾದ ಶ್ರೀಮತಿ ಜಮೀಲಾ ಖಾದರ್ ಇವರುಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು.
ಡಾಕ್ಟರ್ ಲೀಲಾ ದೇವಿ ಆರ್ ಪ್ರಸಾದ್ ಅವರು ಮಾತನಾಡುತ್ತಾ “ಉತ್ತರ ಕರ್ನಾಟಕದ ಅಕ್ಕ ಕರಾವಳಿಗೆ ಬಂದಿರುವುದು ಯಾವಾಗ ಎಂದು ಹಾಸ್ಯಭರಿತ ಪ್ರಶ್ನೆಯೊಂದಿಗೆ ಅಕ್ಕಮಹಾದೇವಿ ಸಮಗ್ರ ಚಿತ್ರಣವನ್ನು ಮಾತಿನ ಮೂಲಕ ಬಿಂಬಿಸಿದರು. ಕದಳಿ ಉಡುತಡಿ ಸ್ಥಳಗಳಲ್ಲಿ ನಡೆದಿರುವ ಅಭಿವೃದ್ಧಿಗಳ ಬಗ್ಗೆ ತಿಳಿಸಿದರು. ಕರಾವಳಿಯಲ್ಲಿ ವಚನಕಾರರ ವಿಚಾರಗಳು ಮನೆ ಮನಗಳಲ್ಲಿ ತುಂಬಲಿ ಮಹಿಳೆಯರಿಂದ ಉತ್ತಮ ಸಮಾಜ ನಿರ್ಮಾಣವಾಗಲಿ” ಎಂದು ಶುಭ ಹಾರೈಸಿದರು.
ಶ್ರೀ ಪ್ರದೀಪ್ ಕುಮಾರ್ ಕಲ್ಕೂರ್ ಇವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಳೆದ ಹತ್ತು ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನೆರವೇರಿಸಿದ್ದು ಸಂಘದ ಅಧ್ಯಕ್ಷೆ ಸುಮಾ ಮಾನಿಷ ಅವರ ನೇತೃತ್ವದಿಂದ ಉತ್ತಮ ಕಾರ್ಯಗಳು ನಡೆಯುತ್ತಿವೆ ಈ ಸಂಘದ ಮಹಿಳೆಯರಿಂದ ಇನ್ನೂ ಅನೇಕ ಕಾರ್ಯಕ್ರಮಗಳು ನೆರವೇರಲಿ ಸಂಘ ಶತ ಮಾನೋತ್ಸವವನ್ನು ಆಚರಿಸಲಿ ಎಂದು ಹಾರೈಸಿದರು.
ಕಾರ್ಯದರ್ಶಿ ಅನುಪಮ ಸ್ವಾಗತಿಸಿ, ಉಮಾ ಪಾಲಕ್ಷಪ್ಪ ವಂದಿಸಿದರು. ಪದಾಧಿಕಾರಿಗಳಾದ ನಿರ್ಮಲ ಚಂದ್ರಶೇಖರ್, ಎಂ.ಶೋಭಾ, ದಾಕ್ಷಾಯಿನಿ, ಆಶಾ ಜೈದೇವ್, ಸುನಂದಾ ಕನ್ಹಾಹಿ, ಜಯಶ್ರೀ ಮಂಜುನಾಥ್ ಮತ್ತು ಸರ್ವ ಸದಸ್ಯೆಯರು ಉಪಸ್ಥಿತರಿದ್ದರು. ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಮಟ್ಟದ ಸಮೂಹ ಗಣ ದೇಶಭಕ್ತಿ ಗೀತೆ ಸ್ಪರ್ಧೆಯ ವಿಜೇತರು – ಪ್ರಥಮ ಬಹುಮಾನ ಗಾನ ಸರಸ್ವತಿ ವಿದ್ಯಾಲಯ ಜಪ್ಪಿನಮೊಗರು, ದ್ವಿತೀಯ ಬಹುಮಾನ ಗಾನವಿ ಬಳಗ ಹಾಗೂ ತೃತೀಯ ಬಹುಮಾನ ಕುಳಾಯಿ ಮಹಿಳಾ ಮಂಡಲಿಗೆ ಲಭಿಸಿರುತ್ತದೆ.
ಪ್ರಥಮ ಬಹುಮಾನ: ಗಾನ ಸರಸ್ವತಿ ವಿದ್ಯಾಲಯ ಜಪ್ಪಿನಮೊಗರು
ದ್ವಿತೀಯ ಬಹುಮಾನ: ಗಾನವಿ ಬಳಗ
ತೃತೀಯ ಬಹುಮಾನ: ಕುಳಾಯಿ ಮಹಿಳಾ ಮಂಡಲಿ