23, ಫೆಬ್ರವರಿ 2023, ಮಂಗಳೂರು: ಕರಾವಳಿ ಲೇಖಕಿಯರ ವಾಚಕಿಯರ ಸಂಘ(ರಿ). ಸಾರ್ವಜನಿಕ ಹಾಗೂ ಜಿಲ್ಲಾ ಗ್ರಂಥಾಲಯ ಕೇಂದ್ರ ಮಂಗಳೂರು ಕರ್ನಾಟಕ ಸರಕಾರ ಇವರು ಜಂಟಿಯಾಗಿ ನಡೆಸಿದ ಅಕ್ಷರ ಜಾಗೃತಿ ಮತ್ತು ಕವಿಗೋಷ್ಟಿ ಕಾರ್ಯಕ್ರಮ ಫೆಬ್ರವರಿ 19ರಂದು ಮಂಗಳೂರಿನ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ನಡೆಯಿತು.
ಅಕ್ಷರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಡಶಾಲಾವಿದ್ಯಾರ್ಥಿ ಗಳಿಗೆ ವಿವಿಧ ಸ್ಪರ್ಧೆಗಳನ್ನು ಕ.ಲೇವಾ.ಸಂಘದ ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ ನಡೆಸಿದರು. ಬಿ.ಎಂ.ರೋಹಿಣಿ, ಮಂಜುಳಾ ಸುಕುಮಾರ್, ರೂಪಕಲಾ ಆಳ್ವ ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕ.ಲೇ.ವಾ.ಸಂಘದ ಸದಸ್ಯೆಯರಾದ ಸುಮಾಬಾರ್ಕೂರು ಮತ್ತು ಸರಸ್ವತಿಯವರ ಆಶಯ ಗೀತೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶಶಿಲೇಖ ಬಿ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀ ಬಾಹುಬಲಿ ಪ್ರಸಾದ್ ಇವರು ಮಾತನಾಡಿ ” ಒಂದು ಉತ್ತಮ ಪುಸ್ತಕದಿಂದ ಮೌಲ್ಯಯುತ ಜೀವನ ನಡೆಸಲು ಸಾಧ್ಯವಿದೆ. ಸಾಹಿತಿಗಳಾಗುವುದು ಬಹಳ ಸುಲಭದ ಕೆಲಸವಲ್ಲ. ಭಾಷೆಯನ್ನು ಉಳಿಸಲು ಹಾಗೂ ಬೆಳೆಸಲು ಬರಹಗಾರರ ಕೊಡುಗೆ ಅನನ್ಯ. ಕರಾವಳಿ ಲೇಖಕಿಯರ ವಾಚಕಿಯರ ಸಂಘ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ.ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆಯುವಂತಾಗಲಿ” ಎಂದು ಹಾರೈಸಿದರು.
ಮುಖ್ಯ ಗ್ರಂಥಾಲಯದ ಅಧಿಕಾರಿ ಶ್ರೀಮತಿ ಗಾಯತ್ರಿ ಇವರು ಮಾತನಾಡಿ ಗ್ರಂಥಗಳ ಮೌಲ್ಯಗಳನ್ನು ತಿಳಿಸುವ ಈ ಕಾರ್ಯಕ್ರಮದಲ್ಲಿ ಸಾಹಿತಿಗಳ ಮಧ್ಯೆ ನಾನು ಭಾಗಿಯಾಗಿರುವುದು ಸಂತಸ ತಂದಿದೆ.ಸಾಹಿತ್ಯ ಮತ್ತು ಗ್ರಂಥ ನಾಣ್ಯದ ಎರಡು ಮುಖಗಳಿದ್ದಂತೆ. ಗ್ರಾಮೀಣ ಮಟ್ಟದಲ್ಲಿಯೂ ಶಾಲೆಗಳಲ್ಲಿ ಅಕ್ಷರ ಜಾಗೃತಿ ಕಾರ್ಯಕ್ರಮವನ್ನು ನಡೆಸಿ ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ನಂತರ ನಡೆದ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಕವಯತ್ರಿಯರಾದ ವಿಜಯ ಶೆಟ್ಟಿ, ಸೌಮ್ಯಪ್ರವೀಣ್, ಶ್ರೀ ಮುದ್ರಾಡಿ, ವಿಜಯಲಕ್ಷ್ಮೀ ಕಟೀಲು, ಉಷಾ ಎಂ, ದೀಪ್ತಿ, ಅನಿತಾಪಿಂಟೋ, ಆಯಿಷಾ ಮುಂತಾದವರು ತಮ್ಮ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಕವಿ ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಲೇಖಕಿ, ಕವಯತ್ರಿ ಹಾಗೂ ಕನ್ನಡ ಉಪನ್ಯಾಸಕರೂ ಆದ ಜ್ಯೋತಿ ಗುರುಪ್ರಸಾದ್ ಇವರು ಮಾತನಾಡಿ ”ಕವಿತೆ ಅನ್ನುವುದು ದಿಡೀರ್ ಸಿದ್ದ ವಸ್ತು ಅಲ್ಲ ಅದು ಮನಸ್ಸಿನ ಭಾವನೆಗಳಿಂದ ಮೂಡಿಬರಬೇಕು” ಎಂದರು.
ಅಕ್ಷರ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಡಶಾಲಾ ವಿದ್ಯಾರ್ಥಿಗಳು ಹಾಜರಿದ್ದು ಸ್ಥಳದಲ್ಲೇ ವಿಷಯ ನೀಡಿ ಏರ್ಪಡಿಸಲಾದ ಅಮ್ಮನಿ”ಗೊಂದು ಪತ್ರ ವಿಭಾಗದಲ್ಲಿ 4 ಮತ್ತು 5 ನೇ ತರಗತಿ ವಿದ್ಯಾರ್ಥಿಗಳಾದ ಬೆಸೆಂಟ್ ಶಾಲೆಯ ಕಾರ್ತಿಕ್ , ಸಂತ ಅಲೋಶಿಯಸ್ ಇಂಗ್ಲಿಷ್ ಮೀಡಿಯಂನ ವಿದ್ಯಾರ್ಥಿ ನಕ್ಷ್ ಹಾಗೂ ಬೆಸೆಂಟ್ ನ ಬೀರೇಶ್ ಬಹುಮಾನಗಳನ್ನು ಪಡೆದರು. ಸ್ಮರಣಶಕ್ತಿ ಪರೀಕ್ಷೆಯಲ್ಲಿ ಸಾತ್ವಿಕ್, ಸಾನ್ವಿ, ಹಾಗೂ ಕಾವೇರಿ ,ಯಶೋಧ, ಶಾಂತೀಸ್ ಕ್ರಮವಾಗಿ ಬಹುಮಾನಗಳನ್ನು ಪಡೆದರು. ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ಮತ್ತು ಪ್ರಶಂಸಾ ಪತ್ರಗಳನ್ನು ಶ್ರೀಬಾಹುಬಲಿ ಪ್ರಸಾದ್ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಡಾ.ಜ್ಯೋತಿ ಚೆಳೈರು ಮಾತನಾಡಿ ”ಗ್ರಂಥಾಲಯದ ಅಧಿಕಾರಿ ಶ್ರೀಮತಿ ಗಾಯತ್ರಿಯವರು ಮಕ್ಕಳಿಗಾಗಿ ಒಂದು ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶವನ್ನು ಹೊಂದಿ ಪ್ರಸ್ತಾಪವಿಟ್ಟಾಗ ಅವರಲ್ಲಿದ್ದ ಪುಸ್ತಕ ಪ್ರೇಮದ ಕಾಳಜಿ ಬಗ್ಗೆ ತಿಳಿದು ಸಂತಸವಾಯಿತು.”
ದೇವಿಕಾ ನಾಗೇಶ್ ಕಾರ್ಯಕ್ರಮವನ್ನು ನಿರೂಪಿಸಿ, ಸುಜಾತ ಕೊಡ್ಮಾಣ್ ಧನ್ಯವಾದ ಸಮರ್ಪಿಸಿದರು.