ಮಂಗಳೂರು : ಯಕ್ಷಗಾನ ಕಲಾವಿದ, ಯಕ್ಷಗುರು ವರ್ಕಾಡಿ ಶ್ರೀ ರವಿ ಅಲೆವೂರಾಯರ ಷಷ್ಠ್ಯಬ್ದಿ ಪ್ರಯುಕ್ತ ‘ಅಲೆವೂರಾಯಾಭಿನಂದನಮ್’ ಕಾರ್ಯಕ್ರಮವು ದಿನಾಂಕ 11-02-2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀತೀರ್ಥ ಸ್ವಾಮೀಜಿಗಳವರು “ಕಲೆಯ ಮೂಲ ಸ್ವರೂಪದ ಉಳಿಸಿಕೊಳ್ಳುವಿಕೆ ಹಾಗೂ ಬೆಳವಣಿಗೆಗೆ ವರ್ಕಾಡಿ ರವಿ ಅಲೆವೂರಾಯರಂತಹಾ ಕಲಾವಿದರು; ಗುರುಗಳು ಇಂದು ಬೇಕಾಗಿದ್ದಾರೆ. ಎಳೆಯ ಪೀಳಿಗೆಗೆ ಯಕ್ಷಗಾನವನ್ನು ಅದರಂತೆಯೇ ತಲುಪಿಸುವಲ್ಲಿ ಉತ್ತಮ ಯಕ್ಷಗುರುಗಳು ಶ್ರಮಿಸುತ್ತಾರೆ. ಅಂಥವರಲ್ಲಿ ಶ್ರೀಮಠದ ಪ್ರೀತಿಪಾತ್ರ ಶಿಷ್ಯರಾದ ಅಲೆವೂರಾಯರು ಬಹಳ ಮುಂಚೂಣಿಯಲ್ಲಿದ್ದಾರೆ. ಶ್ರೀಮಠದ ಮೇಳದಲ್ಲೂ ಕಲಾವಿದರಾಗಿ ದುಡಿದವರೂ ಆಗಿದ್ದಾರೆ. ಇಂದು ಅವರ ಷಷ್ಠ್ಯಬ್ದಿಯ ಆಚರಣೆಯ ಸಂದರ್ಭದಲ್ಲೂ ವಿವಿಧ ಮಕ್ಕಳ ಮೇಳಗಳನ್ನು ಇಲ್ಲಿಗೆ ಕರೆಸಿ ಪ್ರದರ್ಶನ ನೀಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಆಶೀರ್ವದಿಸಲು ನಾವೂ ಹೆಮ್ಮೆಪಡುತ್ತೇವೆ. ನಾವು ನಂಬಿಕೊಂಡು ಬಂದಿರುವ ಶ್ರೀದಕ್ಷಿಣಾಮೂರ್ತಿ ಸ್ವಾಮಿ ಇವರಿಗೆ ಉತ್ತಮ ಆಯುರಾರೋಗ್ಯ ನೀಡಿ ಅನುಗ್ರಹಿಸಲಿ ಎಂದು ಹೇಳಿದರು.
“ಯಕ್ಷಗಾನ ರಂಗಭೂಮಿಯನ್ನು ಬಲವಾಗಿ ನಿಂತು ಬೆಳೆಸುವ ಮಹತ್ಕಾರ್ಯವನ್ನು ಈ ಜಿಲ್ಲೆ ನಡೆಸುತ್ತಾ ಬಂದಿದೆ. ತಿಟ್ಟುಗಳ ಭೇದವಿಲ್ಲದೇ ಯಕ್ಷಗಾನವನ್ನು ಬೆಳೆಸುವ ದೃಷ್ಟಿಯಿಂದ ರವಿ ಅಲೆವೂರಾಯರು ಸದಾ ಸಕ್ರಿಯರು ಹಾಗೂ ಸಾಕಷ್ಟು ಬಾರಿ ಸರಯೂ ತಂಡವನ್ನು ನಮ್ಮಲ್ಲಿಗೆ ತಂದು ಕಾರ್ಯಕ್ರಮ ನೀಡಿದ್ದಾರೆ. ಅವರ ಈ ಅರುವತ್ತರ ಕಾರ್ಯಕ್ರಮ ಮತ್ತೊಮ್ಮೆ ಈ ಜಿಲ್ಲೆಗೆ ನನ್ನನ್ನು ಬರುವಂತೆ ಮಾಡಿತು. ಅವರ ಕಲಾಸೇವೆಗೆ ನಮ್ಮ ಸಹಕಾರ ಸದಾ ಇದೆ” ಎಂದು ಕೆರೆಮನೆ ಶ್ರೀಮಯ ತಂಡದ ನಿರ್ದೇಶಕ ಶ್ರೀಶಿವಾನಂದ ಹೆಗಡೆಯವರು ಮುಖ್ಯ ಅತಿಥಿಯ ಸ್ಥಾನದಿಂದ ಹೇಳಿದರು.
ಪ್ರಮುಖ ಭಾಷಣಕಾರರಾಗಿ ಯಕ್ಷಗಾನ ವಿಮರ್ಶಕ ಡಾ. ಎಂ.ಪ್ರಭಾಕರ ಜೋಷಿಯವರು “ಕಲೆಯಲ್ಲಿ ಕೆಲವು ಅಪಸವ್ಯಗಳನ್ನು ಕಾಣುತ್ತಿದ್ದೇವೆ. ಅವೆಲ್ಲಾ ಅಳಿಯಬೇಕು. ಹೊಸ ಹೊಸ ಸಾಧ್ಯತೆಗಳ ಬಗ್ಗೆ ಯೋಚಿಸಿದಾಗ ಕಲಾಪ ಶ್ರೀಮಂತಿಕೆ ಇನ್ನೂ ಹೆಚ್ಚಿನ ಹೊಳಪನ್ನು ಕಾಣಬಹುದು ಕಲೆಯಲ್ಲಿ ಆಯಾಮಗಳು ತೆರೆದುಕೊಳ್ಳಬಲ್ಲುದು. ಆ ಪ್ರಯತ್ನಕ್ಕೆ ಅಲೆವೂರಾಯರೂ, ಹೆಗಡೆಯವರೂ ಪ್ರಯತ್ನಿಸಿದರೆ ಕಲಾಪ್ರೇಕ್ಷಕರ ಸಹಕಾರ ಇದ್ದೇ ಇದೆ. ಅಯೋಧ್ಯೆಯಲ್ಲೂ ಯಕ್ಷಗಾನ ಮ್ಯೂಸಿಯಂ ಮತ್ತು ಯಕ್ಷಗಾನ ಸಾಹಿತ್ಯಗಳ ವಾಚನಾಲಯ ಇವುಗಳ ಬಗೆಯಲ್ಲೂ ಯೋಚಿಸಬಹುದು. ನಾವು ಸಹಕಾರ ನೀಡುತ್ತೇವೆ” ಎಂದರು.
ಅಭಿನಂದನಾ ಸಮಿತಿಯ ಗೌರವ ಸಂಚಾಲಕ ಡಾ. ಹರಿಕೃಷ್ಣ ಪುನರೂರು ಅಲೆವೂರಾಯರಿಗೆ ಶುಭಕೋರಿದರು. ಸಮಿತಿಯ ಸಂಚಾಲಕ ಶ್ರೀನರಸಿಂಹ ಹೆಗಡೆ, ವಾಸುದೇವ ರಾವ್ ಕುಡುಪು, ಅರುಣ್ ಕುಮಾರ್ ಶೆಟ್ಟಿ, ಮಹಿಳಾ ಸಂಚಾಲಕಿ ವಿಜಯಲಕ್ಷೀ ಯಲ್.ಎನ್. ಉಪಸ್ಥಿತರಿದ್ದರು. ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಅಭಿನಂದನಾ ಭಾಷಣಗೈದರು.
ಶೀಮತಿ ಕುಸುಮಾ ಮತ್ತು ವರ್ಕಾಡಿ ರವಿ ಅಲೆವೂರಾಯರನ್ನು ಸ್ವಾಮೀಜಿಯವರು ರಾಜವೇಷದ ಬೆಳ್ಳಿ ಕಿರೀಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದರು. ಅಧ್ಯಕ್ಷ ಮಧುಸೂದನ ಅಲೆವೂರಾಯರು ಪಗಡಿಯನ್ನು ತೊಡಿಸಿ ಗೌರವಿಸಿದರು. ಅನೇಕ ಸಂಘ ಸಂಸ್ಥೆಗಳು, ಮಹಿಳಾ ತಂಡಗಳು ಹಾಗೂ ಇನ್ನಿತರರು ಅಲೆವೂರಾಯರನ್ನು ಗೌರವಿಸಿ, ಅಭಿನಂದಿಸಿದರು. ಸುಧಾಕರ ರಾವ್ ಪೇಜಾವರ್ ರವರು ನಿರ್ವಹಿಸಿದರು. ರಮ್ಯಾ ರಾಘವೇಂದ್ರರು ಸಹಕಾರವನ್ನಿತ್ತರು.
ದಿನಪೂರ್ತಿ ಬೇರೆ ಬೇರೆ ತಂಡಗಳಿಂದ ರವಿ ಅಲೆವೂರಾಯರೇ ಬರೆದ ಪ್ರಸಂಗಗಳು ತಾಳಮದ್ದಳೆ ಹಾಗು ಬಯಲಾಟಗಳು ಪ್ರದರ್ಶಿಸಲ್ಪಟ್ಟವು ಸೋಮನಾಥೇಶ್ವರ ಯಕ್ಷನಿಧಿ, ಯಶಸ್ವೀ ಕಲಾ ವೃಂದ ತೆಕ್ಕಟ್ಟೆ, ಯಕ್ಷ ಮಂಜುಳಾ ಕದ್ರಿ, ನವಭಾರತ ಯಕ್ಷಗಾನ ಅಕಾಡೆಮಿ ತಂಡಗಳು ಭಾಗವಹಿಸಿದವು. ಅಪರಾಹ್ನದಿಂದ ತಡರಾತ್ರಿಯವರೆಗೆ ಅತಿಥಿ ಕಲಾವಿದರು ಹಾಗೂ ಸರಯೂ ಕಲಾವಿದರಿಂದ ‘ಇಳಾ ರಜತ’ ಪ್ರಸಂಗದ ಬಯಲಾಟ ನಡೆಯಿತು.