ಒಡಿಯೂರು : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ಒಡಿಯೂರು ಗ್ರಾಮೋತ್ಸವದ ಅಂಗವಾಗಿ ಶ್ರೀಕ್ಷೇತ್ರದ ರಾಜಾಂಗಣದಲ್ಲಿ ದಿನಾಂಕ 06 ಮತ್ತು 07 ಆಗಸ್ಟ್ 2025ರಂದು ನಡೆದ ನಾಟಕ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎರಡು ನಾಟಕಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತವೆ.
ಡಾ. ಜೀವನ್ ರಾಂ ಸುಳ್ಯ ರಚಿಸಿ, ನಿರ್ದೇಶಿಸಿದ ‘ದೇವವೃದ್ಧರು’ ಪ್ರದರ್ಶನವು ಅತ್ಯುತ್ತಮ ನಾಟಕ ರೂ.50,000 ನಗದು ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದೇ ನಾಟಕದ ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿಯನ್ನು ಸುಳ್ಯ ರಂಗಮನೆಯ ಮನುಜ ನೇಹಿಗ ಪಡೆದುಕೊಂಡರು.
ದ್ವಿತೀಯ ಪ್ರಶಸ್ತಿ ರೂ.30,000/- ಪಡೆದ ಆಳ್ವಾಸ್ ನ ‘ಮಗು ಮತ್ತು ಮರ’ ನಾಟಕವನ್ನು ಪ್ರಶಾಂತ್ ಶೆಟ್ಟಿ ಕೋಟ ನಿರ್ದೇಶಿಸಿದ್ದರು. ಈ ನಾಟಕದ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಮನೋಜ್ ತೀರ್ಥಹಳ್ಳಿ ಹಾಗೂ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ತೇಜಸ್ಸಿನಿ ತರೀಕೆರೆ ಪಡೆದುಕೊಂಡರು.
ಪ್ರಶಸ್ತಿಯನ್ನು ಶ್ರೀ ಒಡಿಯೂರು ಗುರುದೇವಾನಂದ ಸ್ವಾಮಿಗಳು ನೀಡಿದರು. ವೇದಿಕೆಯಲ್ಲಿ ಒಡಿಯೂರು ಸಾದ್ವಿ ಶ್ರೀಮಾತಾನಂದಮಯಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ನಿರೂಪಕ ನಾಟಕಕಾರ ಕದ್ರಿ ನವನೀತ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 12 ತಂಡಗಳು ಭಾಗವಹಿಸಿದ್ದವು. ವಿಜೇತ ಕಲಾವಿದರಿಗೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.