ಉಡುಪಿ : ಉಡುಪಿ ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ರಂಗಭೂಮಿ (ರಿ.) ಉಡುಪಿ ದಿ. ನಿ.ಬೀ ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಆಯೋಜಿಸುವ ‘ಅಂಬಲಪಾಡಿ ನಾಟಕೋತ್ಸವ-2023’ (ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನ) ವು ದಿನಾಂಕ 31-12-2023ರ ಆದಿತ್ಯವಾರ ಮತ್ತು ದಿನಾಂಕ 01-01-2024ರ ಸೋಮವಾರ ಪ್ರತಿದಿನ ಸಂಜೆ ಘಂಟೆ 6.00ಕ್ಕೆ ಅಂಬಲಪಾಡಿ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ನಡೆಯಲಿದೆ.
ದಿನಾಂಕ 31-12 2023ರ ಆದಿತ್ಯವಾರವಾರ ಸಂಜೆ ನಡೆಯಲಿರುವ ಉದ್ಘಾಟಣಾ ಸಮಾರಂಭದಲ್ಲಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬೀ. ವಿಜಯ ಬಲ್ಲಾಳ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ರಂಗಭೂಮಿ (ರಿ.) ಉಡುಪಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬ್ರಹ್ಮಾವರದಲ್ಲಿ ಟ್ಯಾಕ್ಸ್ ಕನ್ಸಲ್ಟೆಂಟ್ ಆಗಿರುವಂಥ ಶ್ರೀ ಬಿ. ಯಂ. ಭಟ್, ಉಡುಪಿಯ ಎ.ಜೆ. ಅಸೋಸಿಯೇಟ್ಸ್ ಇದರ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ ಆಗಿರುವಂಥ ಶ್ರೀ ಎಂ. ಗೋಪಾಲ ಭಟ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ನಾಟಕಕಾರರು, ನಟ ಮತ್ತು ನಿರ್ದೇಶಕರಾದ ಪ್ರೊ. ಆರ್. ಎಲ್. ಭಟ್ ಇವರಿಗೆ ರಂಗ ಸನ್ಮಾನ ನಡೆಯಲಿರುವುದು.
ಸಭಾ ಕಾರ್ಯಕ್ರಮದ ಬಳಿಕ ಡಾ. ಚಂದ್ರ ಶೇಖರ ಕಂಬಾರ ರಚನೆ ಮತ್ತು ಕೆ. ಜಿ. ಕೃಷ್ಣ ಮೂರ್ತಿ ನಿರ್ದೇಶನದಲ್ಲಿ ‘ನೀನಾಸಂ’ ಪ್ರಸ್ತುತಪಡಿಸುವ ನಾಟಕ ‘ಹುಲಿಯ ನೆರಳು’ ಪ್ರದರ್ಶನಗೊಳ್ಳಲಿದೆ.
‘ಹುಲಿಯ ನೆರಳು’
ಹುಲಿ ಬೇಟೆಯೊಂದರ ಹಳೆಯಲ್ಲಿ ಪ್ರಾರಂಭವಾಗುವ ಈ ನಾಟಕ ಕಣ್ಣಿಗೆ ಅಡ್ಡವಾಗಿರುವ ತೋರಿಕೆಯ ಪರದೆಯನ್ನು ಸರಿಸಿ ಸತ್ಯವನ್ನು ಕಾಣುವುದು ಎಂದರೇನು ಎಂಬ ಪ್ರಶ್ನೆಯನ್ನು ನಮ್ಮೆದುರಿಗಿಡುತ್ತದೆ. ರಾಮಗೊಂಡನು ತನ್ನ ತಂದೆ ಯಾರು ಎಂಬ ಹುಡುಕಾಟಕ್ಕೆ ತೊಡಗುತ್ತಾನೆ. ತನ್ನ ತಾಯ್ತಂದೆಯರನ್ನು ತಿಳಿಯುವ ಹೋರಾಟವು ಸತ್ಯವನ್ನು ಅರಿಯುವ ಹುಡುಕಾಟವಾಗಿ ಪರಿವರ್ತಿತವಾಗುವುದನ್ನು ಈ ನಾಟಕ ರಮ್ಯಾದ್ಭುತ ಜಗತ್ತಿನಲ್ಲಿ ಕಟ್ಟಿಕೊಡುತ್ತದೆ. ಹಾಗಾಗಿಯೇ ಮನುಷ್ಯನ ಮನಸ್ಸಿನಲ್ಲಿ ಮೂಡಬಹುದಾದ ಅತಿಮಾನುಷ ರೂಪಗಳು ರಂಗದ ಮೇಲೆ ಕಾಣಿಸಿಕೊಳ್ಳುತ್ತವೆ. ಒಬ್ಬರು ಮತ್ತೊಬ್ಬರಾಗುತ್ತಾರೆ. ಮನುಷ್ಯರು ಮತ್ತೇನೇನೋ ಆಗುತ್ತಾರೆ. ಹುಲಿ. ಭೂತ, ಯಕ್ಷಿಣಿ, ಮಾಯದ ಕನ್ನಡಿ, ರಾಕ್ಷಸ, ದೇವ ದೇವತೆಗಳಾದಿಯಾಗಿ ಜನಪದ ಮತ್ತು ಪುರಾಣ ಲೋಕದ ಪಾತ್ರಗಳು ರಾಮಗೊಂಡನೆಂಬ ಮನುಷ್ಯನ ಆಸ್ಮಿತೆಯ ಹುಡುಕಾಟದಲ್ಲಿ ಮಾರ್ಗಗಳಾಗಿಯೂ, ಮಾರ್ಗಸೂಚಿ ಗಳಾಗಿಯೂ, ದಾರಿ ತಪ್ಪಿಸುವ ಮರೀಚಿಕೆಗಳಾಗಿಯೂ ನಾಟಕವನ್ನು ಮುನ್ನಡೆಸುತ್ತವೆ. ನಾವು ಯಾರು. ನಮ್ಮ ಮೂಲ ಯಾವುದು ಎಂಬ ಅಸ್ಮಿತೆಯನ್ನು ಕುರಿತ ಪ್ರಶ್ನೆಗಳು ಮಹತ್ವವನ್ನು ಪಡೆದುಕೊಂಡಿರುವ ಈ ಕಾಲದಲ್ಲಿ ಕಂಬಾರರ ನಾಟಕಕ್ಕೆ ಬೇರೆಯದೇ ಧ್ವನಿ ದಕ್ಕಿಬಿಡುತ್ತದೆ. ಭಾರತೀಯ ಜನಪದ ಪರಂಪರೆಯಲ್ಲಿ ಗಟ್ಟಿಯಾಗಿ ಬೇರೂರಿರುವ ಈ ಕೃತಿಯು ಪಾಶ್ಚಾತ್ಯ ರಂಗಭೂಮಿಯ ‘ಈಡಿಪಸ್’ ಮುಂತಾದ ಕೃತಿಗಳನ್ನು ನೆನಪಿಸುತ್ತದೆ.
ದಿನಾಂಕ 01-01-2024ರ ಸೋಮವಾರ ಸಂಜೆ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬೀ ವಿಜಯ ಬಲ್ಲಾಳ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಡುಪಿಯ ನೋಟರಿ ಹಾಗೂ ಹಿರಿಯ ವಕೀಲರಾದ ಶ್ರೀ ಸಂಕಪ್ಪ ಎ., ಉಡುಪಿಯ ಹೋಟೇಲ್ ಶಾರದಾ ಇಂಟರ್ನ್ಯಾಷನಲ್ ಇಲ್ಲಿಯ ಶ್ರೀ ಬಿ. ಸುಧಾಕರ ಶೆಟ್ಟಿ ಹಾಗೂ ಉಡುಪಿ ಕಡಿಯಾಳಿಯ ಕಿಣಿ ಕನ್ಸಲ್ಟೆಸ್ಸಿಯ ಶ್ರೀ ರಾಘವೇಂದ್ರ ಕಿಣಿ ಭಾಗವಹಿಸಲಿದ್ದು, ರಂಗಭೂಮಿ (ರಿ.) ಉಡುಪಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ಬಳಿಕ ‘ನೀನಾಸಂ’ ಪ್ರಸ್ತುತಪಡಿಸುವ, ಲೂಯಿ ನಕೋಸಿ ರಚಿಸಿ, ನಟರಾಜ ಹೊನ್ನವಳ್ಳಿ ಕನ್ನಡಕ್ಕೆ ಅನುವಾದಿಸಿದ ‘ಆ ಲಯ ಈ ಲಯ’ ನಾಟಕವು ಶ್ವೇತಾರಾಣಿ ಹೆಚ್. ಎಸ್. ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
‘ಆ ಲಯ ಈ ಲಯ’
ಜನಾಂಗೀಯ ಹಿಂಸೆಯು ಭಾರತದ ಸ್ಮತಿಯಲ್ಲಿ ಅಷ್ಟಾಗಿ ಘಾಸಿ ಮಾಡದ ಸಂಗತಿ. ವಸಾಹತುಶಾಹಿಯ ಕಾಲದಲ್ಲಿ ಬಿಳಿಯರ ಅಳ್ವಿಕೆಯಿದ್ದರೂ ಅದು ಜನಾಂಗೀಯ ಕಲಹದ ಬಣ್ಣ ಪಡೆದು ಕೊಂಡದ್ದು ಇಲ್ಲವೇ ಇಲ್ಲವೆನ್ನಬಹುದು. ಹಾಗಿದ್ದೂ ಆಫ್ರಿಕಾ, ಅಮೇರಿಕಾ ಮೊದಲಾದ ದೇಶಗಳಲ್ಲಿ ನಡೆದ ಜನಾಂಗೀಯ ಸಂಘರ್ಷದ ಚಿತ್ರಣವು ನಮ್ಮನ್ನು ತಟ್ಟಿ ಅಲುಗಾಡಿಸುವುದು ಏಕೆಂದರೆ ಹಿಂಸೆಯ ಕತೆಗಳು ಮಾನವ ಸ್ಕೃತಿಯನ್ನು ದೇಶ ಭಾಷೆಗಳ, ವೈಯಕ್ತಿಕ ಅನುಭವಗಳ ಗಡಿ ಮೀರಿ ಒಂದುಗೂಡಿಸಿಬಿಡುತ್ತವೆ. ಲೂಯಿ ನಕೋಸಿ ಬರೆದ ನಾಟಕ ‘ದ ರಿದಮ್ ಆಫ್ ವಯಲೆನ್ಸ್’ ಆಫ್ರಿಕಾದ ವಿದ್ಯಾರ್ಥಿ ಸಮೂಹವೊಂದು ಜನಾಂಗೀಯ ಹಿಂಸೆಗೆ ಪ್ರತಿಕ್ರಿಯಿಸಿದ ಬಗೆಯನ್ನು ಬಿಚ್ಚಿಡುತ್ತದೆ. ವಿದ್ಯಾರ್ಥಿಗಳ ಕೂಡು ತಾಣವಾದ ಕೆಫೆಯೊಂದರಲ್ಲಿ ನಡೆಯುವ ಈ ನಾಟಕದ ದೃಶ್ಯಗಳು ಯುವಕ ಯುವತಿಯರ ಆಸೆ. ಆತಂಕ, ಪ್ರಣಯ, ಪ್ರಲೋಭನೆ. ಬಯಕೆ. ಬಸವಳಿಕೆ, ಕನಸು, ತುಡಿತ, ತತ್ತ್ವ, ತೀರ್ಮಾನಗಳೆಲ್ಲವನ್ನೂ ಆ ದಿನ ರಾತ್ರಿ ನಡೆಯುವ ಸ್ಪೋಟಕ ಘಟನೆಯೊಂದರ ಹಿನ್ನೆಲೆಯಾಗಿ ಚಿತ್ರಿಸುತ್ತವೆ; ಜನಾಂಗೀಯ ಸಂಘರ್ಷದ ಕುರಿತು ತೀರ್ಮಾನಗಳನ್ನು ಘೋಷಿಸದೆಯೇ ಹಿಂಸೆಯ ಬಗ್ಗೆ ಜಿಗುಪ್ಪೆ ಹುಟ್ಟುವಂತೆ ಮಾಡುತ್ತವೆ. ಜಾಜ್ ಮತ್ತು ಹೋರಾಟದ ಹಾಡುಗಳ ಮುಖಾಂತರ ಸಂಗೀತಕ್ಕೂ ಪ್ರತಿರೋಧಕ್ಕೂ ಇರುವ ಸಂಬಂಧದ ಕಲಾಮೀಮಾಂಸೆಗೂ ಈ ಪ್ರಯೋಗ ಕೈ ಹಾಕುತ್ತದೆ.