ಉಡುಪಿ : ಆದರ್ಶ ಅಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರು, ಹೆಚ್ಚು ಪ್ರಸ್ತುತರಾಗಿರುವುದು ನಾಟಕಗಳ ರಚನೆಯಿಂದ ಮತ್ತು ರಂಗಭೂಮಿಗೆ ಪ್ರಸ್ತುತವೆನ್ನಿಸುವ ಲೇಖನಗಳಿಂದ. ಅವರ ಸಂಸ್ಕರಣೆಯಲ್ಲಿ ಉಡುಪಿ ರಂಗಭೂಮಿಯು, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ, ಅಂಬಾತನಯ ಮುದ್ರಾಡಿಯವರ ಹೆಸರಿನ ಪ್ರಶಸ್ತಿ – ಪುರಸ್ಕಾರವೊಂದನ್ನು ಈ ವರ್ಷದಿಂದ ಅನುಷ್ಠಾನಕ್ಕೆ ತರಲಿದೆ.
ಇದು ಪರಿಶೀಲನ ಅವಧಿಯಲ್ಲಿ ಪ್ರಕಟವಾದ, ರಂಗಭೂಮಿಗೆ ಪ್ರಸ್ತುತವಾದ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯಕೃತಿ ಅಥವಾ ಪರಿಶೀಲನ ಅವಧಿಯಲ್ಲಿ ಪ್ರಕಟವಾದ ಅತ್ಯುತ್ತಮ ನಾಟಕ ಕೃತಿಯನ್ನು ಪರ್ಯಾಯ ವರ್ಷಗಳಲ್ಲಿ ಸ್ಪರ್ಧೆಯ ಮೂಲಕ ಗುರುತಿಸಿ ಪುರಸ್ಕಾರವನ್ನು ನೀಡುವ ಮೂಲಕ ಅಂಬಾತನಯ ಮುದ್ರಾಡಿಯವರ ಸಂಸ್ಕರಣೆಯನ್ನು ನಿರಂತರವಾಗಿ ನಡೆಸುವ ಯೋಜನೆಯಾಗಿದೆ. ‘ಅಂಬಾತನಯ ಮುದ್ರಾಡಿಯವರ ಸಂಸ್ಕರಣೆಯ ತಲ್ಲೂರು ಫ್ಯಾಮಿಲಿಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರ’ ಎಂದು ಕರೆಯಲ್ಪಡುವ ಈ ಪ್ರಶಸ್ತಿಯು ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನಗೊಳ್ಳಲಿದ್ದು, ಪ್ರಶಸ್ತಿ ಪತ್ರ, ಸ್ಮರಣಿಕೆ, ಹಾಗೂ ಹದಿನೈದು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿಗೆ ಹಿಂದಿನ ಎರಡು ವರ್ಷಗಳಲ್ಲಿ ಪ್ರಕಟವಾದ ಕೃತಿಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಮೊದಲ ವರ್ಷದ 2023ನೇ ಸಾಲಿನ ಪ್ರಶಸ್ತಿಗೆ ಹಿಂದಿನ ಎರಡು ವರ್ಷಗಳಲ್ಲಿ 2021 ಮತ್ತು 2022ರಲ್ಲಿ ಪ್ರಕಟವಾದ ನಾಟಕ ರಂಗಕ್ಕೆ ಸಂಬಂಧಿಸಿದ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯ ಕೃತಿಯನ್ನು ಮತ್ತು ಎರಡನೆಯ ವರ್ಷದ 2024ನೇ ಸಾಲಿನ ಪ್ರಶಸ್ತಿಗೆ ಆದರ ಹಿಂದಿನ ಎರಡು ವರ್ಷಗಳಲ್ಲಿ ಪ್ರಕಟವಾದ ನಾಟಕ ಕೃತಿಯನ್ನು ಪರಿಗಣಿಸುವ ಮೂಲಕ ಈ ಸ್ಪರ್ಧೆಯನ್ನು ನಿರಂತರವಾಗಿ ನಡೆಸಲಾಗುತ್ತದೆ.
ತನ್ನಿಮಿತ್ತ 2021 ಮತ್ತು 2022 ಈ ಎರಡು ವರ್ಷಗಳ ಅವಧಿಯಲ್ಲಿ ಪ್ರಥಮ ಆವೃತ್ತಿಯಲ್ಲಿ ಪ್ರಕಟವಾದ, ನಾಟಕ ರಂಗಕ್ಕೆ ಸಂಬಂಧಿಸಿದ ಗಂಭೀರ ಚಿಂತನೆಯ ಸ್ವತಂತ್ರ ನಾಟಕೇತರ ಸಾಹಿತ್ಯಕೃತಿಗಳ ಒಂದು ಪ್ರತಿಯನ್ನು ಲೇಖಕ, ಪ್ರಕಾಶಕರು, ರಂಗಕರ್ಮಿಗಳು, ಅಥವಾ ರಂಗಾಸಕ್ತರು ಸ್ಪರ್ಧೆಯ ಸಂಚಾಲಕರಾದ ಬೆಳಗೋಡು ರಮೇಶ ಭಟ್, ‘ಭಾಗೀರಥಿ’, ಇಂದ್ರಾಳಿ ದೇವಸ್ಥಾನದ ರಸ್ತೆ, ಅಂಚೆ ಕುಂಜಿಬೆಟ್ಟು ಉಡುಪಿ- 576102 ಮೊಬೈಲ್ 9341091821) .ಇವರಿಗೆ 31-10-2023ರ ಬಳಗೆ ತಲುಪುವಂತೆ ಕಳುಹಿಸಿಕೊಡಬಹುದು.
ಅಗತ್ಯವಿದ್ದಲ್ಲಿ ಸ್ಪರ್ಧೆಯ ಕೊನೆಯ ಸುತ್ತಿಗೆ ಆಯ್ಕೆಯಾದ ಪ್ರಸ್ತಕಗಳ ಮೂರು ಪ್ರತಿಗಳನ್ನು ಆಯ್ಕೆ ಸಮಿತಿಯು ಖರೀದಿಸಿ ತೀರ್ಪುಗಾರರಿಗೆ ಒದಗಿಸಲಿರುವುದರಿಂದ ಪುಸ್ತಕದ ಹೆಚ್ಚಿನ ಮೂರು ಪ್ರತಿಗಳ ಅಭ್ಯತೆಯನ್ನು ಖಾತ್ರಿಪಡಿಸಬೇಕಾಗಿ ವಿನಂತಿಸಿದ್ದಾರೆ.