21 ಫೆಬ್ರವರಿ 2023, ಮಂಗಳೂರು: ಅತ್ಯಂತ ವಿನೀತ, ಮೃದು ಭಾಷಿ, ಸಾತ್ವಿಕ ಮನೋಭಾವದ ಸಹೃದಯಿ ವಿದ್ವಾಂಸ ಹರಿದಾಸ ಅಂಬಾತನಯ ಮುದ್ರಾಡಿ ಇಂದು ಮುಂಜಾನೆ ನಮ್ಮನ್ನಗಲಿದ್ದಾರೆ. ಶಿಕ್ಷಕ, ವೇಷಧಾರಿ, ಹರಿದಾಸ, ಅರ್ಥದಾರಿ, ಪ್ರವಚನಕಾರ, ಸಾಹಿತಿ ಹೀಗೆ ಎಲ್ಲಾ ವಿಭಾಗದಲ್ಲಿ ವೈಶಿಷ್ಟ್ಯ ಪೂರ್ಣವಾದ ಸಾಧನೆಯನ್ನು ಮಾಡಿದ, ಸಮಾಜದ ಎಲ್ಲಾ ಮಂದಿಗೆ ಮನೆಯ ಸದಸ್ಯರಂತೆ ಇದ್ದು ಮಾರ್ಗದರ್ಶನ ಮಾಡಿ ಸಾರ್ಥಕವಾಗಿ ಬದುಕನ್ನು ಪೂರೈಸಿದ ಅಂಬಾತನಯರದ್ದು ಆದರ್ಶ ಜೀವನ. ಕಳೆದ ವಾರ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಪಾಲ್ಗೊಂಡದ್ದು ಕೊನೆಯ ಕಾರ್ಯಕ್ರಮವಾಗಿತ್ತು. ‘ಯಕ್ಷಗಾನ ಮತ್ತು ಹರಿಕಥೆ ಒಂದು ತೌಲನಿಕ ಅಧ್ಯಯನ’ ಪುಸ್ತಕವನ್ನು ಪ್ರಕಟಿಸಲಾಗಿತ್ತು. ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಗೌರವ ಅವರಿಗೆ ಪ್ರಾಪ್ತಿಯಾಗಿವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ.
ಸಾಹಿತ್ಯ ಕ್ಷೇತ್ರದ ಈ ದಿಗ್ಗಜ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕವನ ಸಂಕಲನ ಹಾಗೂ ಕೃತಿಗಳ ರಚನೆ ಮಾಡಿದ ಧೀಮಂತ. ಜನಮಾನಸದ ಹಿರಿಮೆಯಂತಿದ್ದ ಮಾರ್ಗದರ್ಶಕರೂ ಹಿರಿಯರೂ ಆದ ಇವರು ಕನ್ನಡ ನಾಡು, ನುಡಿ, ಜನಪದ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರೇಷ್ಠ ಕೊಡುಗೆ ನೀಡಿದ ಕನ್ನಡ ಸಾಹಿತ್ಯ ಲೋಕದ ಮರೆಯಲಾಗದ ಕನ್ನಡದ ಕಣ್ಮಣಿ. ಯಕ್ಷಗಾನ ನಾಟಕ ರಂಗದ ಮೇರು ಚೇತನ. ಸಾಹಿತ್ಯ ಕಲೆ ಸಂಸ್ಕೃತಿಗೆ ಇವರ ಕೊಡುಗೆ ಅಪಾರ.
ಜೂನ್ ನಾಲ್ಕನೇ ತಾರೀಕು 1935 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ 36 ವರ್ಷಗಳ ಸೇವೆ ಸಲ್ಲಿಸಿ, 30 ಜೂನ್ 1993ರಲ್ಲಿ ನಿವೃತ್ತಿ ಹೊಂದಿದರು. ಶಿಕ್ಷಕರಾಗಿ ಇವರ ಸಾಧನೆ ಮಹತ್ತರವಾದುದು.
ಸತತ ಮೂವತ್ತಾರು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ದುಡಿದು ನಿವೃತ್ತಿ ನಂತರವೂ ಅವರ ಸಾಹಿತ್ಯ ಸೇವೆಯ ಕಾರ್ಯ ಮುಂದುವರಿದೇ ಇತ್ತು . ಅವರ ಶಾಲಾ ವಿದ್ಯಾಭ್ಯಾಸ ಎಂಟನೆಯ ತರಗತಿಯವರೆಗೆ ಆದರೂ ಲೋಕಜ್ಞಾನ ವಿಶೇಷವಾದುದು. ಅವರು ಕವಿ, ನಾಟಕಕಾರ, ವಚನಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷ ಜಿನದಾಸ, ವಿಡಂಬನಕಾರ, ವಾಗ್ಮಿ, ಚಿಂತನ ಅಂಕಣಕಾರ, ಶಿಕ್ಷಕರ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿ – ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಲ್ಲಿ ಕೃಷಿ ಮಾಡಿದವರು. ಯಕ್ಷಗಾನ ಮತ್ತು ನವೋದಯ ಕಾಲದ ಸಾಹಿತ್ಯದ ಹಿನ್ನೆಲೆಯುಳ್ಳ ಅವರ ಎಲ್ಲ ಬರಹಗಳು ಇನ್ನೂ ಅಚ್ಚಾಗಿ ಬಂದಿಲ್ಲ. ಪ್ರಕಟಿತ ಕೃತಿ ಗಳು ಇಪ್ಪತ್ತರಷ್ಟಿವೆ. ಅವೆಲ್ಲ ಸಾಹಿತ್ಯದ ವಿಭಿನ್ನ ಪ್ರಕಾರಗಳಿಗೆ ಸೇರಿದುವೆಂಬುದು ವೈಶಿಷ್ಟ್ಯ.
ಅಂಬಾತನಯರ ಔಪಚಾರಿಕ ವಿದ್ಯಾಭ್ಯಾಸ ಎಂಟನೆಯ ತರಗತಿ ಮಾತ್ರವಾದರೂ ಸತತ ಅಧ್ಯಯನಶೀಲತೆ ಮತ್ತು ವಾಗ್ಮಿತೆಯಿಂದಾಗಿ ಅವರಿಗೆ ಶಾಲೆ-ಕಾಲೇಜುಗಳಲ್ಲಿಯೂ ಧಾರ್ಮಿಕ ಸಾಮಾಜಿಕ ಸಂಘಟನೆಗಳ ಕಾರ್ಯಕ್ರಮಗಳಲ್ಲಿಯೂ ಸಾಕಷ್ಟು ಅವಕಾಶಗಳು ದೊರಕಿವೆ. ಉಪನ್ಯಾಸಕಾರರಾಗಿ ಅವರು ಶಿಕ್ಷಕರ ಸಭೆಗಳಲ್ಲಿ, ಕಾಲೇಜು, ವಿದ್ಯಾರ್ಥಿಗಳ ಸಭೆಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ, ಯತಿವರೇಣ್ಯರಿದ್ದ ಸಭೆಗಳಲ್ಲಿ, ಸರಕಾರಿ ಅಧಿಕಾರಿಗಳ ತರಬೇತಿ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಪರಿತ್ಯಕ್ತ ಎಂಬ ಅವರ ನಾಟಕ ಕೃತಿಯು ನಾಲ್ಕು ವರ್ಷಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿತ್ತೆಂಬುದು ಉಲ್ಲೇಖನೀಯ.
ಅಂಬಾತನಯರದು ಭಾವಪ್ರಧಾನವಾದ ಅರ್ಥಗಾರಿಕೆಯೆಂದು ಪ್ರಸಿದ್ಧಿ ಇದೆ. ಕರ್ಣ, ರುಕ್ಮಾ೦ಗದ, ಧರ್ಮರಾಯ, ವಿದುರ, ಭರತ, ಅತಿಕಾಯ, ಸಂಜಯ ಮೊದಲಾದ ಅವರ ನಿರೂಪಣೆಗಳು ಅವರಿಗೇ ವಿಶಿಷ್ಟವಾದ ರೀತಿಯಲ್ಲಿ ಹೊರಹೊಮ್ಮು ವಂತಹವು. ಹೊಸಕಾಲದ ಯಕ್ಷಗಾನ ಪ್ರಸಂಗಕರ್ತರಾಗಿಯೂ ಅವರದು ಗಮನಾರ್ಹವಾದ ಹೆಸರು. ಮಹಾಸತಿ ಅನಸೂಯಾ, ಭಕ್ತ ಪ್ರಹ್ಲಾದ ಎರಡು ಕೃತಿಗಳು ಮಾತ್ರವೇ ಪ್ರಕಟಗೊಂಡಿವೆ. ಪಾಂಡುಚರಿತ್ರೆ, ಹನೂಮದ್ವಿಲಾಸ, ರಾಜಾ ಚಿತ್ರಕೇತು, ಆನಂದಲೇಖಾ, ಚಿತ್ರಲೇಖಾ, ಸತೀ ರೂಪಮತಿ ಮೊದಲಾದ ಕೃತಿಗಳು ಪ್ರಕಟಗೊಂಡಿಲ್ಲ. ಕ್ರಿಸ್ತ ಕಾರುಣ್ಯದಂತಹ ವಿಭಿನ್ನ ವಸ್ತುವನ್ನಿರಿಸಿಕೊಂಡು ಪ್ರಸಂಗ ಬರೆದ ಹಿರಿಮೆ ಅವರದು. ಹಿರಿಯ ಅರ್ಥಧಾರಿಗಳಾದ ಮಲ್ಪೆ ಶಂಕರನಾರಾಯಣ ಸಾಮಗ, ರಾಮದಾಸ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್ಟ, ಪೆರ್ಲ ಕೃಷ್ಣ ಭಟ್ಟ, ಪೊಲ್ಯ ದೇಜಪ್ಪ ಶೆಟ್ಟಿ, ಕುಂಬಳೆ ಸುಂದರ ರಾವ್, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಎಂ. ಪ್ರಭಾಕರ ಜೋಶಿ ಮೊದಲಾದ ಹಿರಿಯ ಅರ್ಥಧಾರಿಗಳೊಡನೆ ತಾಳೆಮದ್ದಳೆಗಳಲ್ಲಿ ಭಾಗವಹಿಸಿದ ಅನುಭವಿ ಅಂಬಾತನಯರು. ಕುಂಬಳೆ ಸುಂದರ ರಾವ್ ಅವರು ಒಂದೆಡೆ ಅಂಬಾತನಯರ ಬಗೆಗೆ ಹೇಳಿದ ಮಾತು: “ಅಂಬಾತನಯರಿಗೆ ಭಾಷಾ ಶುದ್ಧಿಯಿದೆ; ಸಿದ್ಧಿಯಿದೆ. ಅಪೂರ್ವವಾದ ಶ್ರುತಿ ಮೇಲಿನ ಧ್ವನಿಶಕ್ತಿಯಿದೆ. ಅವರೊಂದಿಗೆ ಅನೇಕ ಸಲ ಅರ್ಥ ಹೇಳಿದ್ದೇನೆ; ಸಂತೋಷ ತಾಳಿದ್ದೇನೆ. ಅವರು ಸಂವಾದಕ್ಕೆ ಹತ್ತಿರ ಬರುತ್ತಾರೆ; ವಾದಕ್ಕೆ ದೂರ ಸರಿಯುತ್ತಾರೆ.” ನಿಜ ಜೀವನದಲ್ಲೂ ಅವರು ಸಂವಾದ – ಮಾತುಕತೆಗಳಿಗೆ ಹತ್ತಿರ; ವಾದ-ವಿವಾದಗಳಿಗೆ ದೂರ.
ಯಾವ ಕಿರಿಕಿರಿಗಳ ಮಧ್ಯೆಯೂ ಅವುಗಳಿಂದ ಬೇರೆಯಾಗಿ ಕುಳಿತು ತಮ್ಮ ಕೆಲಸ ಮಾಡಿಕೊಳ್ಳುವ ಸಾಮರ್ಥ್ಯ ಅಂಬಾತನಯರಿಗಿದೆ. ಯಾವ ಜಾತ್ರೆಯ ಗೌಜಿ ಗದ್ದಲಗಳ ನಡುವೆಯೂ ಶಾಲೆಯ ಅಧ್ಯಾಪಕರ ಕೊಠಡಿಯ ವಿನೋದ ಹರಟೆಗಳ ಮಧ್ಯೆಯೂ ಅವರು ಕವಿತಾ ರಚನೆ ಮಾಡಬಲ್ಲರು; ಗಂಭೀರವಾದ ಸಾಹಿತ್ಯ ರಚನೆ ಮಾಡಬಲ್ಲರು. ಯಾವ ಪೂರ್ವಸಿದ್ಧತೆಯಿಲ್ಲದೆ ಆಶುರೂಪದಲ್ಲಿ ಕವಿತಾ ರಚನೆ ಮಾಡುವ ಸಿದ್ಧಿ ಅವರಿಗಿದೆ. ಅವರ ಹರಿಕಥೆಗಳಲ್ಲಿ ಅವರು ಬಳಸುವ ಹೆಚ್ಚಿನ ಎಲ್ಲ ಹಾಡುಗಳು ಅವರ ರಚನೆಗಳೇ. ಮಾತ್ರವಲ್ಲ, ಎಷ್ಟೋ ಹರಿಕಥೆಗಳಲ್ಲಿ ಅಲ್ಲಲ್ಲೇ ಕಟ್ಟಿ ಹಾಡಿದ ಹಾಡುಗಳು ನೂರಾರು. ಆ ಹಾಡುಗಳೆಲ್ಲ ಲಿಖಿತ ರೂಪಕ್ಕೆ ಬರಲೂ ಇಲ್ಲ; ಪುನಃ ಪುನಃ ಹಾಡಲ್ಪಡಲೂ ಇಲ್ಲ. ಮತ್ತೂಮ್ಮೆ ಹೇಳಿದಾಗ ಅದು ಬೇರೆಯೇ ಕವಿತೆ. ಛಂದೋ ಬದ್ಧವಾಗಿ ಇಂತಹ ರಚನೆ ಮಾಡಬೇಕಾದರೆ ಅದಕ್ಕೆ ಬೇರೆಯೇ ಶಕ್ತಿ, ಅಭ್ಯಾಸಗಳು ಬೇಕು.
ಸಾಹಿತ್ಯ ಲೋಕದಲ್ಲಾಗಲಿ, ಯಕ್ಷಗಾನ ಲೋಕದಲ್ಲಾಗಲಿ, ಅವರ ಔದ್ಯೋಗಿಕ ಜೀವನದ ಶಿಕ್ಷಣ ಕ್ಷೇತ್ರದಲ್ಲಾಗಲಿ ಅವರು ಅಜಾತಶತ್ರು. ಅವರು ಎಲ್ಲರಿಗೂ ಬೇಕು, ಎಲ್ಲದಕ್ಕೂ ಬೇಕು. ರಾತ್ರಿ ಕಾಡುದಾರಿಯಲ್ಲಿ ಹುಲಿಚಿರತೆಗಳ ಭೇಟಿ ಮಾಡಿದ ಆ ಕಾಲದ ಅನುಭವವೂ ಅವರಿಗಿದೆ; ವಿಮಾನದಲ್ಲಿ ಓಡಾಡಿದ ಅನುಭವವೂ ಅವರಿಗಿದೆ. ಮುದ್ರಾಡಿಯಂತಹ ಹಲವು ಹಳ್ಳಿಗಳ ನಿಕಟ ಪರಿಚಯದೊಂದಿಗೆ ಮುಂಬಯಿಯ ಮಹಾನಗರ ಜೀವನವೂ ಅವರ ಅನುಭವ ಕೋಶದಲ್ಲಿದೆ. ಮುಂಬಯಿಯಲ್ಲಿ ಅವರ ಅಭಿಮಾನಿ ಬಳಗವಿದೆ. ಅವರ 75ರ ಅಭಿನಂದನೆಯೊಡನೆ ಅವರ ಸಾಹಿತ್ಯದ ಬಗೆಗೆ ಒಂದು ದಿನದ ವಿಚಾರಗೋಷ್ಠಿ ನಡೆಸಿ “ಸುಮನಸ” ಎಂಬ ಅಭಿನಂದನ ಗ್ರಂಥವನ್ನು ಮುಂಬಯಿಯಲ್ಲಿ ಸಮರ್ಪಿಸಲಾಯಿತು. ಈ ಗೌರವವಲ್ಲದೆ ರಾಜ್ಯ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.
ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿ ಬೆಳೆದ ವ್ಯಕ್ತಿತ್ವ ಅಂಬಾತನಯರದು. ದನ ಮೇಯಿಸುತ್ತಿದ್ದ ಹುಡುಗನನ್ನು ಶಾಲೆಗೆ ಕರೆತಂದು ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಿದ ಗುರು ಮುದ್ರಾಡಿಯ ಮರಿಯಪ್ಪ ಕಲ್ಕೂರ ಅವರು ಈಗಲೂ ನೆನೆಯುತ್ತಾರೆ. ಸಾಹಿತ್ಯ ಪ್ರೇರಣೆಯನ್ನು ಅಂಬಾತನಯರಲ್ಲಿ ಬಿತ್ತಿದ ಗುರುವೆಂದರೆ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟರು.
ಹಿರಿಯರ ಮೇಲೆ ಗೌರವ; ಕಿರಿಯರ ಮೇಲೆ ವಿಶ್ವಾಸ, ಒಳಿತಿನ ನಿರೀಕ್ಷೆ, ಆಶಾವಾದ, ಚಿಂತನ , ಪ್ರಯತ್ನ, ಕಲಾಗೌರವ ಅವರ ಬದುಕಿನಿಂದ ನಾವು ಕಲಿಯಬೇಕಾದ ಮೌಲ್ಯಗಳು. ಇಂತಹ ಒಂದು ಮಹಾನ್ ಚೇತನ ನಮ್ಮನ್ನು ಅಗಲಿರುವುದು ಸಾಹಿತ್ಯ ಹಾಗೂ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಶ್ರೀಯುತರ ಕಲಾ ಸಾಧನೆಗೆ ಹಾಗು ಅಗಲಿದ ಅವರ ದಿವ್ಯಾತ್ಮಕ್ಕೆ ನಮ್ಮ ದುಃಖ ತೃಪ್ತ ನಮನಗಳು.
Subscribe to Updates
Get the latest creative news from FooBar about art, design and business.
Previous Articleಸಂಸ್ಕಾರ ಭಾರತಿ ಮಂಗಳೂರು ವತಿಯಿಂದ “ಭರತ ಮುನಿ ಸ್ಮೃತಿ ದಿವಸ”
Next Article ನವರಸಭರಿತ ಶಿವಪುರಾಣದ ಪುಣ್ಯ ಕತೆ `ಬ್ರಹ್ಮ ಕಪಾಲ’ – ನಾಟಕ