ಸುಬ್ರಹ್ಮಣ್ಯ : ಉಡುಪಿ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ಮತ್ತು ಶ್ರೀ ಸುಬ್ರಹ್ಮಣ್ಯ ಮಠದ ಸಹಯೋಗದಲ್ಲಿ ನಮ ತುಳುವೆರ್ ಸಂಘಟನೆಯ ಸುವರ್ಣ ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಸುವರ್ಣ ಕರ್ನಾಟಕ ರಂಗ ಅಭಿಯಾನ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವು ಸುಬ್ರಹ್ಮಣ್ಯದ ಶ್ರೀ ವನದುರ್ಗಾದೇವಿ ಸಭಾಭವನದಲ್ಲಿ ದಿನಾಂಕ 27-01-2024ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯಿಸ ಮಾತನಾಡಿ “ನಾಟಕಗಳು ನಮ್ಮ ಕಲೆಯನ್ನು ಯುವ ಪೀಳಿಗೆಗೆ ತಿಳಿಸುವ ಮಾಧ್ಯಮವಾಗಿದೆ. ಆಧುನಿಕ ಜನತೆ ನಮ್ಮ ಕಲಾ ಸಂಸ್ಕೃತಿಯತ್ತ ಹೆಚ್ಚು ಆಕರ್ಷಿತರಾಗುವುದು ಅತ್ಯವಶ್ಯಕ. ಭಾರತೀಯ ಕಲಾ ಪ್ರಕಾರಗಳು ಮನಸ್ಸಿಗೆ ಮುದ ನೀಡುವ ಶ್ರೇಷ್ಠ ಕಾರ್ಯವನ್ನು ಮಾಡುತ್ತದೆ. ಅಲ್ಲದೆ, ಬದುಕಿನಲ್ಲಿ ಶಾಂತಿ ನೆಮ್ಮದಿ ಪ್ರಗತಿಯಾಗಲು ನಮ್ಮ ಕಲೆಗಳ ಪಾತ್ರ ಅನನ್ಯವಾಗಿದೆ. ಸುಂದರ ಮನಸ್ಸುಗಳ ನಿರ್ಮಾಣದಲ್ಲಿ ನಾಟಕದ ಪಾತ್ರ ಅಮೋಘ. ನಾಟಕಗಳು ನಮ್ಮ ಪಾರಂಪರಿಕ ಕಲೆಗಳನ್ನು ಎತ್ತಿ ಹಿಡಿಯುತ್ತದೆ” ಎಂದು ಹೇಳಿದರು.
ಕಲಾವಿದ ಕೆ. ಯಜ್ಞೇಶ್ ಆಚಾರ್, ನಿವೃತ್ತ ಮುಖ್ಯ ಗುರು ಶ್ರೀಕೃಷ್ಣ ಶರ್ಮ, ಮುಖ್ಯ ಗುರುಗಳಾದ ಸತೀಶ್ ಭಟ್ ಬಿಳಿನೆಲೆ, ಸತ್ಯಶಂಕರ ಭಟ್, ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್., ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ಸಾಂಸ್ಕೃತಿಕ ಕಾರ್ಯದರ್ಶಿ ಜಗದೀಶ್ ಜಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಲಿಯಾನ್ ಉಮೇಶ್ ನಾರಾಯಣ್ ನಿರ್ದೇಶನದಲ್ಲಿ ‘ಅಂಬೆ’ ನಾಟಕ ಪ್ರದರ್ಶಿತವಾಯಿತು.