ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ‘ಅಮ್ಮ ಪ್ರಶಸ್ತಿ’ಯ ವಿಶೇಷ ಪುರಸ್ಕಾರಕ್ಕೆ ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಇವರ ‘ಕೋವಿಡ್ ಕಥೆಗಳು’ ಕೃತಿ ಆಯ್ಕೆಯಾಗಿದೆ. ಕೊರೊನಾ ಕಾಲಘಟ್ಟದಲ್ಲಿ ಆಗಿರುವ ಸಾವು-ನೋವು ಕಥೆಗಳನ್ನೊಳಗೊಂಡ ಈ ಕೃತಿ ಪತ್ರಿಕಾ ವಲಯದಲ್ಲಿ ಗಂಭೀರ ಪರಿಣಾಮವನ್ನು ಉಂಟುಮಾಡಿದೆ. ಪ್ರಸ್ತುತ ವರ್ಷದಿಂದ ಪ್ರತಿ ವರ್ಷವೂ ಮಾಧ್ಯಮದವರು ಬರೆದ ಒಂದು ಪುಸ್ತಕಕ್ಕೆ ವಿಶೇಷ ಪುರಸ್ಕಾರ ನೀಡಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ದಿನಾಂಕ 26 ನವೆಂಬರ್ 2024ರಂದು ಸೇಡಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ ‘ಅಮ್ಮ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.