ಕಾಸರಗೋಡು : ಮಂಗಳೂರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಮತ್ತು ಲಕ್ಷ್ಮೀ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟಿನ ಸಹಯೋಗದಲ್ಲಿ ಲಕ್ಷ್ಮೀ ರಾವ್ ಆರೂರು, ಶಾರದಾ ಭಟ್, ರಾಧಾಬಾಯಿ ನಾರಾಯಣ ಬಾಬು ಮತ್ತು ಶ್ರೀಕಲಾ ಉಡುಪ ದತ್ತಿನಿಧಿಯ ‘ಅಮ್ಮನೆಂಬ ವಿಸ್ಮಯ’ ಪರಿಕಲ್ಪನೆಯ ಕಾರ್ಯಕ್ರಮವು ದಿನಾಂಕ 29 ನವೆಂಬರ್ 2025ರಂದು ಕುಂಜತ್ತೂರಿನಲ್ಲಿ ನಡೆಯಿತು.


ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮುಖ್ಯ ಅತಿಥಿ, ಲೇಖಕಿ ಕುಶಲಾಕ್ಷಿ ಕಣ್ವತೀರ್ಥ ಮಾತನಾಡಿ “ಬದಲಾದ ಕಾಲಘಟ್ಟದಲ್ಲಿ ಹೆತ್ತವರ ಅತಿಯಾದ ಕಾಳಜಿಯಿಂದ ಮತ್ತು ಆಧುನಿಕ ಸೌಕರ್ಯಗಳಿಂದ ಮಕ್ಕಳಲ್ಲಿ ಕಷ್ಟ ಸಹಿಸುವ ಶಕ್ತಿ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಅದೇ ಅಮ್ಮಂದಿರು ತಮ್ಮ ವೃದ್ಧಾಪ್ಯದಲ್ಲಿ ಆಶ್ರಮವಾಸಿಗಳಾಗುತ್ತಿದ್ದಾರೆ” ಎಂದರು.


ದತ್ತಿನಿಧಿಯ ಅಂಗವಾಗಿ ಸಂಘದ ಸದಸ್ಯೆಯರಿಗೆ ‘ಅಮ್ಮ’ ಎನ್ನುವ ಶೀರ್ಷಿಕೆಯಡಿ ಏರ್ಪಡಿಸಿದ್ದ ಕವನ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು. ದೇವಿಕಾ ನಾಗೇಶ್ ಪ್ರಥಮ, ಶರ್ಮಿಳಾ ಉಡುಪ ದ್ವಿತೀಯ, ವಿಜಯಲಕ್ಷ್ಮೀ ಶಾನುಭಾಗ್ ಮತ್ತು ಡಾ. ಜ್ಯೋತಿ ಚೇಳ್ಯಾರು ತೃತೀಯ ಬಹುಮಾನವನ್ನು ಪಡೆದರು. ಡಾ. ದಿವ್ಯಶ್ರೀ ಡೆಂಬಳ, ರಘು ಇಡ್ಕಿದು ಮತ್ತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಇವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.


ಡಾ. ದಿವ್ಯಶ್ರೀ ಡೆಂಬಳ ತೀರ್ಪುಗಾರಿಕೆಯ ನೆಲೆಯಲ್ಲಿ ಸ್ಪರ್ಧೆಗೆ ಬಂದ ಕವನಗಳನ್ನು ವಿಶ್ಲೇಷಿಸಿದರು. ರಾಜೀವಿ, ರತ್ನಾವತಿ ಜೆ. ಬೈಕಾಡಿ ಮತ್ತು ತನಿಷ್ಕಾ ಹಾಡುಗಳೊಂದಿಗೆ ಸಹಕರಿಸಿದರು. ಹೇಮಾ ಪೈ ದತ್ತಿನಿಧಿಗಳ ಬಗ್ಗೆ ಪ್ರಸ್ತಾವಿಸಿದರು. ಸೌಮ್ಯಾ ಪ್ರವೀಣ್ ವಂದಿಸಿ, ಜಯಶೀಲಾ ಕುಂಬ್ಳೆ ಸ್ವಾಗತಿಸಿ, ನಳಿನಾಕ್ಷಿ ಉದಯರಾಜ್ ನಿರೂಪಿಸಿದರು.
