ಹೊಸಕೋಟೆ : ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ ತನ್ನ ಪ್ರತಿ ತಿಂಗಳ ಎರಡನೇ ಶನಿವಾರದ ಸರಣಿ ನಾಟಕ ಪ್ರದರ್ಶನ “ರಂಗಮಾಲೆ” – 75ರ ಅಮೃತ ಮಹೋತ್ಸವ ಸಮಾರಂಭದ ಮೂರು ದಿನಗಳ ರಂಗ ಸಂಭ್ರಮ – ಸೋಮವಾರ ದಿನಾಂಕ 16-10-2023ರಂದು ಸಮಾರೋಪಗೊಂಡಿತು.
ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ಪ@ ಪಾಪಣ್ಣ ಕಾಟಂ ನಲ್ಲೂರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಂ. ಪೂ ತಾಲ್ಲೂಕು ಜಿ. ಪಂ.ಕಾ.ನಿ ಅಭಿಯಂತರರಾದ ವಸಂತರವರು ಮಾತನಾಡಿ “ಕೇವಲ ಜನರ ಸಹಕಾರದಿಂದ ನಡೆಯುವ ಈ ರಂಗ ಕಾರ್ಯ ಬಲು ಅಪರೂಪ. ಜೊತೆಗೆ ಸಭಿಕರೆಲ್ಲರಿಗೂ ಉಚಿತ ದಾಸೋಹ ಮತ್ತು ಜಾಗೃತಿಗಳ ಮೇಳ ನಡೆಸುವ ‘ಜನಪದರು’ ತಂಡದ ಕಾರ್ಯ ಅಭಿನಂದನಾರ್ಹ” ಎಂದರು. ಇದೇ ಸಂದರ್ಭದಲ್ಲಿ ರಂಗ ಮಾಲೆ ಹಾಗೂ ರಂಗ ಮಂದಿರದ ನಿರ್ಮಾಣಕ್ಕೆ ಸಹಕಾರ ನೀಡಿದ ಮಹನೀಯರು, ಕಲಾವಿದರು, ತಂತ್ರಜ್ಞರು ಹಾಗೂ ದಾಸೋಹಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದೊಡ್ಡಬನಹಳ್ಳಿ ಗ್ರಾ.ಪಂ.ಅಧ್ಯಕ್ಷ ಅನಿಲ್ ಕುಮಾರ ಅತಿಥಿಯಾಗಿ ಭಾಗವಹಿಸಿದರು. ಪದಾಧಿಕಾರಿಗಳಾದ ಸಿದ್ದೇಶ್ವರ ನನಸು ಮನೆ. ಜಗದೀಶ್ ಕೆಂಗನಾಳ್, ಎಂ. ಸುರೇಶ, ಮುನಿರಾಜು, ಮಹೇಶ್, ಚಲಪತಿ ಇತರರು ಹಾಜರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜಪ್ಪ ಕೋಲಾರ ಇವರ ಸಂಗೀತ ಜನಮನ ರಂಜಿಸಿತು. ಬಳಿಕ ಶರಣ ಸಂಸ್ಕೃತಿ ನಾಟಕೋತ್ಸವ ಸಾಣೆಹಳ್ಳಿಯಲ್ಲಿ ರಾಜ್ಯ ಮಟ್ಟದ ದ್ವಿತೀಯ ಸ್ಥಾನ ಪಡೆದು ದೆಹಲಿಯಲ್ಲಿ ವಿಶೇಷ ಪ್ರದರ್ಶನ ಕಂಡ ಮುದೇನೂರು ಸಂಗಣ್ಣ ರಚನೆಯ “ಸೂಳೆ ಸಂಕವ್ವ ” ನಾಟಕ ರಾಮಕೃಷ್ಣ ಬೆಳ್ತೂರು ನಿರ್ದೇಶನದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮನ ಸೂರೆ ಗೊಳಿಸಿತು.