ಧಾರವಾಡ : ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟವು ದಿನಾಂಕ 22 ಡಿಸೆಂಬರ್ 2025ರಂದು ಸಾಧನಕೇರಿಯ ‘ಚೈತ್ರ’ದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ಆನಂದಕಂದರ ಐತಿಹಾಸಿಕ ಕಾದಂಬರಿಗಳು’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಖ್ಯಾತ ವಿಮರ್ಶಕ, ಚಿಂತಕ ಡಾ. ಶ್ಯಾಮಸುಂದರ ಬಿದರಕುಂದಿಯವರು “ಆನಂದಕಂದರ (ದಿ. ಡಾ. ಬೆಟಗೇರಿ ಕೃಷ್ಣಶರ್ಮರ) ಐತಿಹಾಸಿಕ ಕಾದಂಬರಿ ತ್ರಿವಳಿಗಳು ವಿಜಯನಗರ ಸಾಮ್ರಾಜ್ಯದ 14ನೇ ಶತಮಾನದ ಮೂರು ತಲೆಮಾರಿನ ಕಥಾನಕವನ್ನು ನಮ್ಮಿಂದಿನ ರಾಜಕೀಯ-ಧಾರ್ಮಿಕ ಆಗುಹೋಗುಗಳನ್ನೇ ನೆನಪಿಸುವುದರ ಜೊತೆಗೆ ನಮ್ಮಿಂದಿನ ಇತಿಹಾಸದ ಪಾಠಗಳನ್ನು ಕಲಿಸುವಂತಿವೆ. ಕೃಷ್ಣಶರ್ಮರ ಸಮಕಾಲೀನ ಇತಿಹಾಸ ಪ್ರಜ್ಞೆಯಿಂದ ಒಡಮೂಡಿದ ಮಲ್ಲಿಕಾರ್ಜುನ, ರಾಜಯೋಗಿ ಮತ್ತು ಅಶಾಂತಿ ಪರ್ವ ಈ ಮೂರು ಐತಿಹಾಸಿಕ ಕಾದಂಬರಿಗಳು ಅಸಾಧಾರಣ ಜ್ಞಾನವನ್ನು, ಸೂಕ್ಷ್ಮ ಸಂವೇದನೆಗಳನ್ನು ಓದುಗರಲ್ಲಿ ಹುಟ್ಟಿಸುತ್ತವೆ. ಇವುಗಳನ್ನು ಪುನ: ಪ್ರಕಟಿಸುವ ಮೂಲಕ ಓದುಗರಲ್ಲಿ ಸದಭಿರುಚಿಯನ್ನು ಬೆಳೆಸಬೇಕಾಗಿದೆ” ಎಂದು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್ನೋರ್ವ ಹಿರಿಯ ಚಿಂತಕ ಪ್ರೊ. ಹರ್ಷ ಡಂಬಳ ಅವರು ಮಾತನಾಡಿ “ನಿಜವಾಗಿಯೂ ಕವಿಭೂಷಣರಾಗಿದ್ದ, ಮೃದು ಮಾತಿನ, ಬಹುಮುಖ ಪ್ರತಿಭೆಯ, ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಬಲ್ಲವರಾಗಿದ್ದ ಡಾ. ಬೆಟಗೇರಿ ಕೃಷ್ಣಶರ್ಮಗೆ ಸಿಗಬೇಕಾದ ಸೂಕ್ತ ಗೌರವವು ಕೊನೆಗೂ ಸಿಗಲೇ ಇಲ್ಲವೆಂಬುದು ಅತ್ಯಂತ ಖೇದಕರ ಸಂಗತಿಯಾಗಿದೆ. ಪತ್ರಿಕೋದ್ಯಮದಲ್ಲಿ ಸತತ 23 ವರ್ಷ ಕಾಲ ದುಡಿದ ಅವರ ಅಗಾಧ ಸೇವೆ ಸ್ಮರಣೀಯವಾಗಿದ್ದು, ಸದ್ದಿಲ್ಲದ ಸತತ ದುಡಿಮೆಯ ಈ ಹಿರಿಯರಿತ್ತ 54 ಕೃತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ” ಎಂದು ಸ್ಮರಿಸಿಕೊಂಡರು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆಯವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಾಜೀವ ಪಾಟೀಲಕುಲಕರ್ಣಿ ವಂದಿಸಿ, ಅನಿಲ ಕಾಖಂಡಿಕಿ ಕಾರ್ಯಕ್ರಮ ನಿರೂಪಿಸಿದರು. ಗಣ್ಯರಾದ ಡಾ. ಆನಂದ ಪಾಟೀಲ, ಹಿರಿಯ ಚಿತ್ರಕಲಾವಿದ ಎಮ್.ಆರ್. ಬಾಳಿಕಾಯಿ, ಪ್ರೊ. ಶಿವಾನಂದ ಶೆಟ್ಟರ, ಡಾ. ಮೋಹನ ಸುಂಕದ, ಕಲಾವಿದ ಅನಂತ ದೇಶಪಾಂಡೆ, ಸಾಹಿತಿ ಶ್ರೀನಿವಾಸ ವಾಡಪ್ಪಿ, ಎಸ್.ಎಮ್. ದೇಶಪಾಂಡೆ, ಜಿ.ಆರ್. ಭಟ್ಟ, ಪರಮೇಶ್ವರ ಎಮ್.ಎಸ್., ಎಸ್.ಬಿ. ದ್ವಾರಪಾಲಕ, ಕುಮಾರಸ್ವಾಮಿ ಪುರಾಣಿಕಮಠ, ಎಸ್.ಎಸ್. ಬಂಗಾರಿಮಠ, ಅನಂತ ಸಿದ್ಧೇಶ್ವರ, ಆನಂದ ಕುಲಕರ್ಣಿ, ಸರೋಜಾ ಕುಲಕರ್ಣಿ, ಸುಮಂಗಲಾ ಶೆಟ್ಟರ, ಸೀಮಾ ಪರಾಂಜಪೆ ಮುಂತಾದವರು ಉಪಸ್ಥಿತರಿದ್ದರು.
