ಶಿಲಾಬಾಲಿಕೆ ಮೈಮಾಟದ ಅನಘಾ ಅಂದು ರಂಗದ ಮೇಲೆ ಪ್ರದರ್ಶಿಸಿದ ಅದೆಷ್ಟು ಮೋಹಕ ಯೋಗದ ಭಂಗಿಗಳು ಹಾಗೆಯೇ ಮನಃಪಟಲದ ಮೇಲೆ ಅಚ್ಚೊತ್ತಿ ನಿಂತಿದ್ದವು. ಗಮನ ಸೆಳೆದ ಸರಳ ನಿರಾಡಂಬರ ಆಹಾರ್ಯ, ಭಾವಸ್ಫುರಣ ಮೊಗ-ಕಾಂತಿಯುಕ್ತ ಕಣ್ಣುಗಳು, ಲೀಲಾಜಾಲವಾಗಿ ಹರಿದಾಡಿದ ದ್ರವೀಕೃತ ಚಲನೆಗಳು, ಅಂಗಶುದ್ಧ ಅಚ್ಚುಕಟ್ಟಾದ ನರ್ತನಗಳಿಂದ ಅವಳೊಬ್ಬ ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದಳು.
‘ಕಲಾಸಿಂಧು ಅಕಾಡೆಮಿ’ಯ ಗುರು ವಿದುಷಿ ಪೂರ್ಣಿಮಾ ಗುರುರಾಜ ಅವರ ನುರಿತ ತರಬೇತಿಯಲ್ಲಿ ಮಿಂದು ಮೈದಳೆದ ಕಲಾಶಿಲ್ಪ ಅನಘಾ ತನ್ನ ‘ರಂಗಾರ್ಪಣೆ’ಯಲ್ಲಿ ವರ್ಚಸ್ಸಿನಿಂದ ನಿರಾಯಾಸವಾಗಿ ನರ್ತಿಸಿ ನೆರೆದ ಕಲಾರಸಿಕರನ್ನು ಮುದಗೊಳಿಸಿದಳು. ಸುಮನೋಹರ ನೃತ್ಯ ಸಂಯೋಜನೆಗಳಿಂದ ಕೂಡಿದ್ದ, ಮೆರುಗಿನ ನೃತ್ತಗಳು, ಸ್ಫುಟವಾದ ಮುದ್ರೆಗಳು, ಆಹ್ಲಾದಕರ ಆಂಗಿಕಾಭಿನಯ, ಹೃದ್ಯವಾದ ಸಮತೋಲನದ ಅಭಿನಯ-ಕರಾರುವಾಕ್ಕಾದ ಮುಕ್ತಾಯ ಅವಳು ಸಾಕಾರಗೊಳಿಸಿದ ಎಲ್ಲ ಕೃತಿಗಳಲ್ಲೂ ಮಿಂಚಿತ್ತು.
ಮನಸೆಳೆದ ‘ಪುಷ್ಪಾಂಜಲಿ’ಯಿಂದ ಕಣ್ಸೆಳೆದ ಸರಸ್ವತೀ ಸ್ತುತಿ ಸುಮನೋಹರವಾಗಿ ಮನವನ್ನು ಆವರಿಸಿತು. ಕಾಂಚೀಪುರದ ಶಕ್ತಿಪೀಠದ ಕಾಮಾಕ್ಷಿಯ ಶೋಭಾಯಮಾನ ವ್ಯಕ್ತಿತ್ವ-ಮಹಿಮೆಗಳನ್ನು ದರ್ಶನ ಮಾಡಿಸಿದ ಶ್ಯಾಮಾಶಾಸ್ತ್ರಿಗಳ ಭೈರವಿ ‘ಸ್ವರಜತಿ’ಯಲ್ಲಿ ‘ಅಂಬಾ ಕಾಮಾಕ್ಷಿ’ ಕೃತಿಯು ಅನಘಳ ದೈವೀಕ ನರ್ತನದಲ್ಲಿ, ಪೂರ್ಣಿಮಾರ ಸುಮನೋಹರ ನೃತ್ಯ ಸಂಯೋಜನೆಯಲ್ಲಿ ಅನುಪಮವಾಗಿ ಸಾಕ್ಷಾತ್ಕಾರವಾಯಿತು. ಸಾಮಾನ್ಯವಾಗಿ ಗಾಯನ ಕಛೇರಿಗಳಲ್ಲಿ ಜನಪ್ರಿಯವಾದ ಈ ಕೃತಿಯನ್ನು ನೃತ್ಯಕ್ಕೆ ಅಳವಡಿಸಿದ್ದು ಗಮನಾರ್ಹ ಪ್ರಯೋಗವಾಗಿತ್ತು.
ಮುಂದೆ- ಮಹಾರಾಜ ಸ್ವಾತಿ ತಿರುನಾಳರ ಭಕ್ತಿಯ ನೆಲೆಯ ಅಮೋಘ ರಚನೆ –( ಕಾಂಭೋಜಿ ರಾಗ-ಖಂಡ ಜಾತಿ ಅಟ್ಟತಾಳ) ‘ಸರಸಿಜನಾಭ…’ ನ ಮಹೋನ್ನತ ಮಹಿಮೆಗಳನ್ನು ಸಂಚಾರಿ ಕಥಾನಕಗಳ ಮೂಲಕ ಅನಘಾ, ತನ್ನ ಸೌಮ್ಯ ಮುಖಭಾವದ ಘನ ಸಾಂದ್ರತೆಯ ಗಾಢ ಅನುಭೂತಿಯನ್ನು ದಾಟಿಸಿದ ದಿವ್ಯಾನುಭಾವ ಕಲಾರಸಿಕರಿಗೆ ದತ್ತವಾಯಿತು. ಮಿತವಾದ ಸಾಹಿತ್ಯವುಳ್ಳ ‘ತಾನವರ್ಣ’ದಲ್ಲಿ ನಾಟ್ಯಾಭಿನಯ, ಸಂಚಾರಿ ಕಥಾನಕಗಳಿಗೆ ಹೆಚ್ಚಿನ ಒತ್ತು ನೀಡಲಾಗಿರುವ, ಪ್ರಯೋಗಶೀಲ ಮನೋಭಾವದ ಗುರು ಪೂರ್ಣಿಮಾ, ಸ್ವರವಿನ್ಯಾಸವೇ ಇಲ್ಲಿ ಅಧಿಕವಾಗಿರುವ ಸಂದರ್ಭದಲ್ಲಿ ಅದಕ್ಕೆ ಪೂರಕವಾದ ರಮ್ಯ ನೃತ್ತಗಳನ್ನು ಜೋಡಿಸಿರುವುದು ಶ್ಲಾಘನೀಯ ಬಗೆಯಲ್ಲಿ ಅಭಿವ್ಯಕ್ತವಾಯಿತು. ಈ ಕೃತಿಗೆ ಗುರು ನರ್ಮದಾ ನೃತ್ಯ ಸಂಯೋಜಿಸಿದ್ದು, ಪೂರ್ಣಿಮಾ, ತಮ್ಮ ಮೂಲ ಗುರುಪರಂಪರೆಯನ್ನು ಅನೂಚಾನವಾಗಿ ಪಾಲಿಸಿಕೊಂಡು ಬಂದಿದ್ದು ಅದನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ಶಿಷ್ಯ ಪರಂಪರೆಗೆ ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಶ್ಲಾಘನೀಯ. ಅನಘಳ ಭಕ್ತಿ ತಾದಾತ್ಮ್ಯತೆಯ ವರ್ಚಸ್ವೀ ನೃತ್ಯ, ಕಲಾತ್ಮಕ ಭಂಗಿಗಳು ಹೃದಯಸ್ಪರ್ಶಿಯಾಗಿದ್ದರೆ, ಯಾಂತ್ರಿಕವಲ್ಲದ ಶೊಲ್ಲುಕಟ್ಟುಗಳ ಪೂರ್ಣಿಮಾರ ಸ್ಫುಟ ನಟುವಾಂಗದ ನಿರೂಪಣೆಯೂ ಸೊಗಸೆನಿಸಿತು.
ಅನಂತರ ಶ್ರೀ ಪದ್ಮಚರಣ್ ರಚನೆಯ ‘ಪ್ರದೋಷ ಸಮಯದಿ…’ ಶಿವನ ಆನಂದ ತಾಂಡವವನ್ನು ಕಲಾವಿದೆ ತನ್ನ ಪ್ರಖರವಾದ ನೃತ್ತ ಸಮ್ಮೇಳ ಪಲುಕುಗಳಿಂದ ಢಮರುಗ ಹಿಡಿದು ನರ್ತಿಸುವ ಅಮೋಘ ಯೋಗದ ಭಂಗಿಗಳ ಆಹ್ಲಾದ ಸಿಂಚನಗೊಳಿಸುತ್ತ , ಮಂಡಿ ಅಡವು, ರಂಗಾಕ್ರಮಣದ ರೋಮಾಂಚಕ ಚಲನೆಗಳನ್ನು ಪ್ರದರ್ಶಿಸಿ ವಿಸ್ಮಯಗೊಳಿಸಿದಳು.
ಮುಂದೆ ಹೆಚ್ಚು ಕೇಳರಿಯದ ಕನಕದಾಸರ ಅಪರೂಪದ ಕೃತಿ- ‘ಎನ್ನ ಕಂದ ಹಳ್ಳಿಯ ಹನುಮಾ..’ ಎಂದು ಅಶೋಕವನದಲ್ಲಿ ಧುತ್ತನೆ ಕಾಣಿಸಿಕೊಂಡ ರಾಮನ ಭಂಟ ಹನುಮನನ್ನು ಕಂಡು ಸೀತೆ, ಆತ್ಮೀಯ ಧಾಟಿಯಲ್ಲಿ ವಿಚಾರಿಸಿಕೊಳ್ಳುವ ಪರಿ ಸ್ವಾರಸ್ಯವಾಗಿದೆ. ಪರೋಕ್ಷವಾಗಿ ಶ್ರೀರಾಮನ ಯೋಗಕ್ಷೇಮದ ಸುತ್ತ ಪರಿಭ್ರಮಿಸುವ, ಕಳೆದು ಹೋದ ಘಟನೆಗಳ ಮೇಲೆ ಬೆಳಕು ಚೆಲ್ಲುವ ಸೀತಾಮಾತೆಯ ಚೆಲ್ನುಡಿ ಆಪ್ತವಾಗಿದ್ದಷ್ಟೇ ಅನಘಳ ಅಭಿನಯವೂ ಹೃದಯಂಗಮವಾಗಿತ್ತು. ಅಂತ್ಯದಲ್ಲಿ ಪಂಚ ಘನರಾಗಗಳಲ್ಲಿ ಪ್ರುರಂದರ ದಾಸರನ್ನು ಸ್ತುತಿಸಿರುವ ವಿರಳವಾದ ‘ತಿಲ್ಲಾನ’ ಅಚ್ಚುಕಟ್ಟಾಗಿ ಮೂಡಿಬಂದು, ‘ಅದಿವೋ ಅಲ್ಲದಿವೋ ಶ್ರೀ ಹರಿವಾಸಮು’ ಮನನೀಯ ಮಂಗಳಕರ ಕೃತಿಯೊಂದಿಗೆ ಸಂಪನ್ನಗೊಂಡು ಅನಘಳ ಅನನ್ಯ ಪ್ರಸ್ತುತಿ ಹೃದಯದಲ್ಲಿ ಅಚ್ಚೊತ್ತಿ ನಿಲ್ಲುವಂತೆ ಮಾಡಿತ್ತು.
ವೈ. ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.