ಬೆಂಗಳೂರು : ಭಾರತೀಯ ವಿದ್ಯಾಭವನ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಜಂಟಿಯಾಗಿ ನೀಡುವ 2025ನೇ ಸಾಲಿನ ‘ವಿ.ಕೃ. ಗೋಕಾಕ್ ಪ್ರಶಸ್ತಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕೃತ ಮಗುತನ ಸಾಹಿತಿ ಆನಂದ ಪಾಟೀಲ ಅವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ರೂ.25,000/- ನಗದು ಮತ್ತು ಪದಕವನ್ನು ಒಳಗೊಂಡಿದೆ. ವಿ.ಕೃ ಗೋಕಾಕ್ ಟ್ರಸ್ಟ್ ಅಧ್ಯಕ್ಷರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರ ಅಧ್ಯಕ್ಷತೆಯ ಸಮಿತಿಯಲ್ಲಿ ಅನಿಲ್ ಗೋಕಾಕ್, ಸುನೀಲ್ ಗೋಕಾಕ್, ಪ್ರೊ. ನಾಗರಾಜ ಹೆಗಡೆ ಅಪಗಾಲ, ನಿಶಾ ಗೋಕಾಕ್, ಅಭಿನವ ರವಿಕುಮಾರ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಉಪಸ್ಥಿತರಿದ್ದರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಕೆಆರ್‌ಜಿ ಸಭಾಂಗಣದಲ್ಲಿ ದಿನಾಂಕ 07 ಸೆಪ್ಟೆಂಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ರಾಯಚೂರಿನ ಮಹರ್ಷಿ ಆದಿಕವಿ ವಾಲ್ಮೀಕಿ ವಿ.ವಿ. ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಪ್ರಶಸ್ತಿ ಪ್ರದಾನ ಮಾಡುವರು. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಪ್ರಸ್ತಾವನೆಯ ಮಾತುಗಳನ್ನಾಡುವರು. ಅಂಕೋಲದ ಕವಯಿತ್ರಿ ಶ್ರೀದೇವಿ ಕೆರೆಮನೆ ಅಭಿನಂದನಾ ನುಡಿಗಳನ್ನಾಡುವರು. ಭಾರತೀಯ ವಿದ್ಯಾಭವನದ ಅಧ್ಯಕ್ಷರೂ, ಹಿರಿಯ ನ್ಯಾಯವಾದಿ ಕೆ.ಜಿ. ರಾಘವನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿ.ಕೃ. ಗೋಕಾಕ್ ಟ್ರಸ್ಟಿನ ಗೌರವಾಧ್ಯಕ್ಷ ಅನಿಲ್ ಗೋಕಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.