ಬೆಂಗಳೂರು : ಎ ಬ್ಯಾಂಗ್ಲೂರ್ ಪ್ಲೇಯರ್ಸ್ ಪ್ರಸ್ತುತಪಡಿಸುವ ‘ಅನವರತ’ ಸಂಗೀತ ನೃತ್ಯ ನಾಟಕದ ಪ್ರದರ್ಶನವು 25 ಆಗಸ್ಟ್ 2024ರಂದು ಸಂಜೆ ಘಂಟೆ 7.00ಕ್ಕೆ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ.
ಚಿದಾನಂದ ಎಸ್. ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ನಟರಾಜ ಶರ್ಮ ಹಾಗೂ ಅರುಣ್ ಸಾಹಿತ್ಯ ರಚಿಸಿದ್ದು, ನಾಗರಾಜ್ ರಾವ್ ಸಂಗೀತ ನೀಡಿದ್ದಾರೆ. ಶ್ರೀಪಾದ ಬೆಳಕಿನ ವಿನ್ಯಾಸ ಮಾಡಲಿದ್ದು, ರಂಗ ಸಜ್ಜಿಕೆ ತೇಜಸ್ ಅವರದ್ದು.
ಅನವರತ :
‘ಕಲೆಗಾಗಿ ಕಲೆ’ ಹೊರನೋಟಕ್ಕೆ ಈ ವಾಕ್ಯ ಸಾಮಾನ್ಯವಾಗಿ ಕಂಡರೂ ಇದರ ಆಳಕ್ಕೆ ಇಳಿದಷ್ಟು, ಅರ್ಥ ಸೃಷ್ಟಿಯ ಮೂಲಕ್ಕೆ ಕರೆದೊಯ್ಯುತ್ತದೆ. ಜಗತ್ತಿನ ಸೃಷ್ಟಿಯೇ ಒಂದು ಕಲೆ ಎನ್ನಬಹುದು.
ಕಲೆಯನ್ನು ನಾವು ಹೇಗೆ ನೋಡುತ್ತೇವೆ ? ಕೇವಲ ಒಂದು ಮನೋರಂಜನಾ ವಸ್ತುವಾಗಿಯೋ, ಮನಸ್ಸಿಗೆ ಉಲ್ಲಾಸವನ್ನು ನೀಡುವ ಕ್ರಿಯೆಗಿಗೊ, ಜೀವನ ಶೈಲಿಯಾಗಿಯೋ ಅಥವಾ ಆತ್ಮ ಶುದ್ಧಿಗೊಳಿಸುವ ಪ್ರಕ್ರಿಯೆಯಾಗಿಯೊ ? ಆ. ನ. ಕೃ. ಅವರ ದೃಷ್ಟಿಯಲ್ಲಿ ಕಲೆಗಳಲ್ಲಿ ಪರಮಕಲೆ ಜೀವನದ ಲಲಿತಕಲೆ. ಎಲ್ಲವೂ ನಾವು ನೋಡುವ, ಗ್ರಹಿಸುವ ಹಾಗೂ ಅರ್ಥೈಸಿಕೊಳ್ಳುವ ದೃಷ್ಟಿಯಲ್ಲಿ ಕಲೆ ತನ್ನ ವಿಶ್ವರೂಪ ದರ್ಶನ ಪ್ರದರ್ಶಿಸುತ್ತದೆ.
ಕಲೆಯ ಆಯಾಮಗಳು, ಕಲೆಯ ಅಸ್ತಿತ್ವವು ದೈನಂದಿಕ ಬದುಕಿನಲ್ಲಿ ಮೇಲುನೋಟಕ್ಕೆ ಕಣ್ಮರೆಯಾಗಿದ್ದರೂ, ಕಲೆಯನ್ನು ಕೇವಲ ಮನೋರಂಜನೆಯಲ್ಲೇ ಮುಕ್ತಾಯವಾಗಿಸದೆ, ಸಾಮಾಜಿಕ ಪಿಡುಗಿನ ಆಗು ಹೋಗುಗಳ ಬಗ್ಗೆ ಅರಿವು ಮೂಡಿಸುವುದು, ಧನಾತ್ಮಕವಾದ ವಿಚಾರವನ್ನು ಮೂಡಿಸುವುದು, ದೈಹಿಕವಾಗಿ, ಬೌದ್ಧಿಕವಾಗಿ ಹಾಗೂ ಆರೋಗ್ಯವಂತರಾಗಿ ಇರುವಂತೆ ಪ್ರೇರೇಪಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದು!! ಹೇಗೆ ಸಮಾಜಕ್ಕೂ ಕಲೆಗೂ ಅವಿನಾಭಾವ ಸಂಬಂಧವೋ ಹಾಗೆ ಕಲಾವಿದನಿಗೂ – ಕಲೆಗೂ, ಜೀವಾತ್ಮ – ಪರಮಾತ್ಮನಿಗೂ ಇರುವ ಸಂಬಂಧವನ್ನು ತೋರುತ್ತದೆ.
ಈ ನಾಟಕವು ಕಲೆ ಹಾಗು ಕಲಾವಿದನ ಭಾವೈಕ್ಯತೆಯನ್ನು ಹಂತ ಹಂತವಾಗಿ ಕಲಾವಿದನು ಸಾಗುವ ಹಾದಿಯಲ್ಲಿ ಕಲೆಯನ್ನು ಹೇಗೆ ಆಹ್ಲಾದಿಸುತ್ತಾ, ಆಶ್ಚರ್ಯದಿಂದ ಅದರ ಆಯಾಮಗಳನ್ನು ಅನುಭವಿಸುತ್ತಾ, ಅವಮಾನಿಸುತ್ತಾ, ಅವಹೇಳನ ಮಾಡುತ್ತಾ ಹತಾಶನಾಗಿ ಕೊನೆಗೆ ಕಲೆಗಾಗಿ ಕಲೆಯಲ್ಲಿ ಉಳಿಯುತ್ತಾನೋ ಅಥವಾ ಕಲೆಯನ್ನು ತ್ಯಜಿಸುತ್ತಾನೋ ಎನ್ನುವುದೇ ಇದರ ಕಥಾ ಹಂದರ.