ಉಡುಪಿ : ಭಾವನಾ ಪ್ರತಿಷ್ಠಾನ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೊ ಆಯೋಜಿಸಿದ್ದ ‘ಪುರಾತತ್ವದೊಂದಿಗಿನ ಸಂಬಂಧ’ (ಏನ್ಸಸ್ಟ್ರಲ್ ಅಫೇರ್ಸ್) ಸರಣಿ ಕಾರ್ಯಕ್ರಮವು ದಿನಾಂಕ 24-03-2024ರಂದು ಉಡುಪಿ ಜಿಲ್ಲೆಯ ಪ್ರಾಗಿತಿಹಾಸಿಕ ನೆಲೆಗಳಾದ ಬುದ್ಧನಜಡ್ಡು ಹಾಗೂ ಅವಲಕ್ಕಿಪಾರೆಗಳಲ್ಲಿ ನಡೆಯಿತು.
ನಮ್ಮ ನಡುವಿನ ಇತಿಹಾಸ, ಕಲೆ ಹಾಗೂ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ಈ ಸರಣಿ ಕಾರ್ಯಕ್ರಮದಲ್ಲಿ ಪುರಾತನ ಇತಿಹಾಸ ಕಾಲದ ನೆಲೆಗಳಲ್ಲಿನ ಗೀರು ರೇಖಾಚಿತ್ರಗಳು, ಸಂಬಂಧಿಸಿದ ಐತಿಹ್ಯಗಳ ಜೊತೆಗೆ ಐತಿಹಾಸಿಕ ಸ್ಥಳ ಹಾಗೂ ವಸ್ತುಗಳ ಅಧ್ಯಯನ ಮತ್ತು ದಾಖಲಾತಿಗಳನ್ನೊಳಗೊಂಡಿತ್ತು.
ಸುಮಾರು ಕ್ರಿಸ್ತ ಪೂರ್ವ 6000 ವರ್ಷಗಳಿಂದ 3500 ವರ್ಷಗಳಷ್ಟು ಪುರಾತನವೆನಿಸಿರುವ ಈ ಗೀರು ಚಿತ್ರಗಳ ಬಗೆಗಿನ ಕಥೆಗಳು ಹಾಗೂ ಅದರ ಸುತ್ತಲಿನ ನಂಬಿಕೆಗಳೇ ಮುಂತಾಗಿ ಮಾಹಿತಿಯನ್ನು ಸ್ಥಳೀಯರಾದ ಇಂಜಿನಿಯರ್ ಮುರುಳೀಧರ ಹೆಗ್ಡೆಯವರು ವಿವರಿಸಿದರು. ನಮ್ಮ ಕರಾವಳಿ ಭಾಗದ ಬಹು ಅಪರೂಪದ್ದೆನಿಸುವ ಈ ಚಿತ್ರಗಳ ಬಗೆಗೆ ಈ ಹಿಂದೆ ಶಿರ್ವ ಕಾಲೇಜಿನ ಪುರಾತತ್ವ ತಂಡವು ಅಧ್ಯಯನ ನಡೆಸಿತ್ತಲ್ಲದೇ ಜಾಗೃತಿ ಕಾರ್ಯಕ್ರಮ ಹಾಗೂ ಸೆಮಿನಾರ್ ನಡೆಸಿದ್ದ ಬಗೆಗೆ ಮಾಹಿತಿಯಿತ್ತರು.
ಸಾಮಾನ್ಯವಾಗಿ ಈ ಚಿತ್ರಗಳಲ್ಲಿ ಕಾಣುವ ಅಭಿವ್ಯಕ್ತಿಗಳು ಭಾರತದ ಕೊಂಕಣ ಕರಾವಳಿಯ ಇತರೆಡೆಯಲ್ಲಿಯ ಚಿತ್ರಗಳಂತೆಯೇ ಇರುವುದಲ್ಲದೇ ಬೇಟೆಯ ಸನ್ನಿವೇಶಗಳು, ಮಾನವರ ಚಿತ್ರಗಳು, ಪ್ರಾಣಿ ಪಕ್ಷಿಗಳೇ ಮೊದಲಾಗಿ ಮರಗಿಡಗಳ ಸ್ಥೂಲ ರೂಪದ ಕಲ್ಪನೆಗಳ ಬಗೆಗೆ ಕಾರ್ಯಕ್ರಮದ ಸಂಯೋಜಕರಾದ ಕಲಾವಿದ ಡಾ. ಜನಾರ್ದನ ಹಾವಂಜೆಯವರು ಮಾಹಿತಿ ನೀಡಿದರು. ಈ ಚಿತ್ರಗಳ ಸಂರಕ್ಷಣೆ ಮತ್ತು ಇದರ ಸಮೀಪದ ಸ್ಥಳಗಳಲ್ಲಿಯ ಇನ್ನಷ್ಟು ಶೋಧ ಮತ್ತು ಪುರಾತನ ವಸ್ತುಗಳು ಕರಾವಳಿಯ ಪ್ರಾಗಿತಿಹಾಸದ ಅಧ್ಯಯನವನ್ನು ಮತ್ತಷ್ಟು ವಿಸ್ತರಿಸಬಹುದೆಂದರು.
ಪ್ರಸ್ತುತ ಈ ಕಾರ್ಯಾಗಾರದಲ್ಲಿ ಕಲಾವಿದರು, ಛಾಯಾಗ್ರಾಹಕರು, ವಾಸ್ತುಶಿಲ್ಪ ಮತ್ತು ಇತಿಹಾಸದ ಅಧ್ಯಯನಾಸಕ್ತರು ಭಾಗವಹಿಸಿದ್ದರಲ್ಲದೇ ಇನ್ನು ಮುಂದೆಯೂ ಇನ್ನಷ್ಟು ಕರಾವಳಿ ಭಾಗದ ಪುರಾತನ ಕಟ್ಟಡಗಳು, ಇತಿಹಾಸ, ಕಲೆ ಮೊದಲಾದವುಗಳ ಬಗೆಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂಬುದಾಗಿ ಸಂಯೋಜಕರು ವಿವರಿಸಿದರು.